ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ಮುಳ್ಳಯ್ಯನಗಿರಿಯ ಸಮೀಪದ ಸೀತಾಳಯ್ಯನಗಿರಿಯಲ್ಲಿ ಪ್ರವಾಸಿಗರನ್ನು ಕರೆದೊಯ್ಯುವ ವಿಚಾರಕ್ಕೆ ಸಂಬಂಧಿಸಿದಂತೆ ಖಾಸಗಿ ಜೀಪ್ ಚಾಲಕರ ನಡುವೆ ಗಲಾಟೆ ನಡೆದಿದ್ದು, ಪರಸ್ಪರ ಕೈಕೈ ಮಿಲಾಯಿಸಿ ಹೊಡೆದಾಡಿಕೊಂಡ ಘಟನೆ ಭಾನುವಾರ ನಡೆದಿದೆ.
ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿರುವ ಮುಳ್ಳಯ್ಯನಗಿರಿ ಹಾಗೂ ಸೀತಾಳಯ್ಯನಗಿರಿ ಪ್ರದೇಶಗಳಿಗೆ ವಾರಾಂತ್ಯದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಪ್ರಸ್ತುತ ಸೀತಾಳಯ್ಯನಗಿರಿಯಿಂದ ಮುಳ್ಳಯ್ಯನಗಿರಿ ಶಿಖರವರೆಗೆ ಪ್ರವಾಸಿಗರ ಸ್ವಂತ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿರುವ ಹಿನ್ನೆಲೆಯಲ್ಲಿ, ಪ್ರವಾಸಿಗರು ಕಡ್ಡಾಯವಾಗಿ ಖಾಸಗಿ ಜೀಪ್ ಸೇವೆಯನ್ನೇ ಅವಲಂಬಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ನಡುವೆ ಪ್ರವಾಸಿಗರನ್ನು ತಮ್ಮ ಜೀಪ್ಗಳಲ್ಲಿ ಕರೆದೊಯ್ಯುವ ವಿಚಾರಕ್ಕೆ ಸಂಬಂಧಿಸಿ ಚಾಲಕರ ನಡುವೆ ವಾಗ್ವಾದ ಉಂಟಾಗಿ ಬಳಿಕ ಅದು ಕೈಕೈ ಮಿಲಾಯಿಸುವ ಮಟ್ಟಕ್ಕೆ ತಲುಪಿದೆ ಎಂದು ತಿಳಿದುಬಂದಿದೆ. ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಅಲ್ಲಿದ್ದ ಪ್ರವಾಸಿಗರು ಆತಂಕಕ್ಕೀಡಾದರು.
ಸ್ಥಳೀಯರ ಪ್ರಕಾರ, ಕೆಲವು ಖಾಸಗಿ ಜೀಪ್ ಚಾಲಕರು ಪ್ರವಾಸಿಗರೊಂದಿಗೆ ಮಾತ್ರವಲ್ಲದೆ, ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸರು ಹಾಗೂ ಪ್ರವಾಸಿ ಮಿತ್ರ ಸಿಬ್ಬಂದಿಯೊಂದಿಗೂ ಅನುಚಿತವಾಗಿ ವರ್ತಿಸುತ್ತಿದ್ದಾರೆ ಎನ್ನಲಾಗಿದೆ. ಇದರಿಂದ ಪ್ರವಾಸಿ ತಾಣದ ವಾತಾವರಣ ಹದಗೆಡುತ್ತಿದ್ದು, ದೂರದ ಊರುಗಳಿಂದ ಕುಟುಂಬ ಸಮೇತರಾಗಿ ಬರುವ ಪ್ರವಾಸಿಗರಿಗೆ ಮುಜುಗರ ಉಂಟಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ತಕ್ಷಣ ಮಧ್ಯಪ್ರವೇಶಿಸಿ ಜೀಪ್ ವ್ಯವಸ್ಥೆಯನ್ನು ನಿಯಂತ್ರಣಕ್ಕೆ ತರುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ. ಜೊತೆಗೆ, ಪ್ರವಾಸಿಗರ ಸ್ವಂತ ವಾಹನಗಳಿಗೆ ಮತ್ತೆ ಮುಳ್ಳಯ್ಯನಗಿರಿವರೆಗೆ ತೆರಳಲು ಅವಕಾಶ ಕಲ್ಪಿಸಬೇಕು ಎಂಬ ಆಗ್ರಹವೂ ಕೇಳಿಬಂದಿದೆ.












