ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಚಾಲಕನ ನಿಯಂತ್ರಣ ತಪ್ಪಿದ 12 ಚಕ್ರದ ಲಾರಿಯೊಂದು ತಿರುವಿನಲ್ಲಿ ಪಲ್ಟಿಯಾಗಿ ಸುಮಾರು 50–60 ಅಡಿ ಪ್ರಪಾತಕ್ಕೆ ಉರುಳಿ ಕೆಳಗೂರು ಟೀ ಎಸ್ಟೇಟ್ ಲೈನ್ ಸಮೀಪ ಬಿದ್ದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೆಳಗೂರು ಗ್ರಾಮದಲ್ಲಿ ನಡೆದಿದೆ.
ಇದನ್ನೂ ಓದಿ: ಶಿಕ್ಷಕರ ಬಡ್ತಿಗೆ ಹೊಸ ಮಾರ್ಗಸೂಚಿ ಪ್ರಕಟ; ಇಷ್ಟು ವರ್ಷಗಳ ಸೇವೆ ಕಡ್ಡಾಯ

ದೊಡ್ಡಬಳ್ಳಾಪುರದಿಂದ ಹಿರೇಬೈಲು ಗ್ರಾಮಕ್ಕೆ ಸಿಮೆಂಟ್ ಸಾಗಿಸುತ್ತಿದ್ದ ಲಾರಿ ತಿರುವಿನಲ್ಲಿ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಟೀ ಎಸ್ಟೇಟ್ ಲೈನ್ ಸಮೀಪ ಬಿದ್ದಿದೆ. ಈ ಭೀಕರ ಅಪಘಾತದಲ್ಲಿ ಲಾರಿಯ ಚಾಲಕ ಕ್ಯಾಬಿನ್ ಒಳಗೆ ಸಿಲುಕಿಕೊಂಡಿದ್ದು (ಲಾಕ್), ಆತನ ರಕ್ಷಣೆಗಾಗಿ ಸ್ಥಳಕ್ಕೆ ಕ್ರೇನ್ ತರಿಸಿ ರಕ್ಷಿಸಲಾಗಿದೆ. ಹೌದು, ಲಾರಿ ಅಡಿಮೆಲು ಆಗಿದ್ದರಿಂದ ಸಿಲುಕಿ ಹಾಕಿಕೊಂಡಿದ್ದ ಚಾಲಕ ಸಂತೋಷ್ 2 ಗಂಟೆ ಕಾಲ ನಡೆದ ರೋಚಕ ಕಾರ್ಯಾಚರಣೆ ಬಳಿಕ ಹೊರ ಬಂದಿದ್ದಾರೆ.
ಇದನ್ನೂ ಓದಿ: ಎಸ್ಎಸ್ಎಲ್ಸಿ, ಪಿಯುಸಿ ಪಾಸ್ ಆದವರಿಗೆ ಉದ್ಯೋಗವಕಾಶ; ಆಕರ್ಷಕ ವೇತನ
ಅಪಘಾತದಲ್ಲಿ ಲಾರಿ ಚಾಲಕನಿಗೆ ಗಂಭೀರ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ರವಾನಿಸಲಾಗಿದೆ. ಅದೃಷ್ಟವಶಾತ್ ಸಮೀಪದ ಲೈನ್ ಮನೆಯಲ್ಲಿ ವಾಸಿಸುತ್ತಿದ್ದ ಕಾರ್ಮಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಘಟನೆ ಬಾಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. (ವರದಿ- ತನು ಕೊಟ್ಟಿಗೆಹಾರ)












