ಜಯಪುರ: (ನ್ಯೂಸ್ ಮಲ್ನಾಡ್ ವರದಿ) ಮೇಗುಂದಾ ಹೋಬಳಿ ವ್ಯಾಪ್ತಿಯ ಅಗಳಗಂಡಿ ಗ್ರಾಮ ಪಂಚಾಯಿತಿಯ ದಯಂಬಳ್ಳಿ ಮತ ಕ್ಷೇತ್ರದ ಮರು ಚುನಾವಣೆ ನವೆಂಬರ್ 23ರ ಶನಿವಾರ (ಇಂದು) ನಡೆಯಲಿದ್ದು, ಕಾಂಗ್ರೇಸ್, ಬಿಜೆಪಿ ಹಾಗೂ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಗ್ರಾಮ ಪಂಚಾಯ್ತಿ ಸದಸ್ಯರಾಗಲು ಪಕ್ಷದ ಮುಖಂಡರೊಂದಿಗೆ ಮತಧಾರರ ಮನೆ ಮನೆಗೆ ತೆರಳಿ ಮತಧಾರರ ವಿಶ್ವಾಸ ಗಳಿಸಲು ಶತ ಪ್ರಯತ್ನ ನಡೆಸಿದ್ದಾರೆ.
ಇದನ್ನೂ ಓದಿ; ಗ್ರಾಪಂ ನೌಕರರ ಗಮನಕ್ಕೆ; ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ!

09 ಸದಸ್ಯರಿರುವ ಅಗಳಗಂಡಿ ಗ್ರಾಮ ಪಂಚಾಯಿತಿಯಲ್ಲಿ ದಯಂಬಳ್ಳಿ ಕ್ಷೇತ್ರದ ಗ್ರಾಮ ಪಂಚಾಯಿತಿ ಸದಸ್ಯ ಶ್ರೀನಿವಾಸ್ ಅಕಾಲಿಕ ಮರಣಕ್ಕೆ ತುತ್ತಾದ ಕಾರಣ ದಯಂಬಳ್ಳಿ ಕ್ಷೇತ್ರಕ್ಕೆ ಕಳೆದ 14 ತಿಂಗಳಿನಿಂದ ಗ್ರಾ ಪಂ ಸದಸ್ಯರಿರಲಿಲ್ಲ. ಸುಮಾರು 550 ಮತದಾರರಿರುವ ಈ ಕ್ಷೇತ್ರದ ಮರು ಚುನಾವಣೆಯಲ್ಲಿ ಪರಿಶಿಷ್ಠ ಜಾತಿ (ಪುರುಷ) ಅಭ್ಯರ್ಥಿ ಮೀಸಲು ಪ್ರಕಟವಾಗಿದ್ದು, ಕಾಂಗ್ರೇಸ್ ಬೆಂಬಲಿತ ಅಭ್ಯರ್ಥಿಯಾಗಿ ಸತೀಶ್, ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಅಣ್ಣಪ್ಪ ಹಾಗೂ ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿ ವೆಂಕಟೇಶ್ ನಾಮ ಪತ್ರ ಸಲ್ಲಿಸಿದ್ದಾರೆ.
ದಯಂಬಳ್ಳಿ ಸರ್ಕಾರಿ ಶಾಲೆಯ ಮತಗಟ್ಟೆ ಸಂಖ್ಯೆ 65 ರಲ್ಲಿ ಇಂದು ಮತದಾನ ನಡೆಯುತ್ತಿದ್ದು, ನವೆಂಬರ್ 26 ರಂದು ಮತಗಳ ಎಣಿಕೆ ನಡೆಯಲಿದೆ. ಈಗಿರುವ 08 ಜನ ಗ್ರಾಮ ಪಂಚಾಯಿತಿ ಸದಸ್ಯರಲ್ಲಿ 06 ಜನ ಕಾಂಗ್ರೇಸ್ ಬೆಂಬಲಿತ ಸದಸ್ಯರಿದ್ದು, ಇಬ್ಬರು ಬಿಜೆಪಿ ಬೆಂಬಲಿತ ಸದಸ್ಯರಿದ್ದಾರೆ.
ಇದನ್ನೂ ಓದಿ; ಬ್ಯಾಂಕ್ ನಲ್ಲಿ ಸಾಲ ಮಾಡಿರುವವರಿಗೆ ಸಿಹಿಸುದ್ದಿ; ಕೇಂದ್ರ ಹಣಕಾಸು ಸಚಿವೆಯಿಂದ ಮಹತ್ವದ ಸೂಚನೆ
“ರಾಷ್ಟ್ರ ಹಾಗೂ ರಾಜ್ಯ ರಾಜಕಾರಣದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಇದ್ದರೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪಕ್ಷಗಳ ಮುಖಂಡರ ಹೊಂದಾಣಿಕೆ ಕೊರತೆಯಿಂದ ಮೈತ್ರಿ ಕೈ ಕೊಟ್ಟಿದ್ದು, ಜೆಡಿಎಸ್ ಹಾಗೂ ಬಿಜಿಪಿ ಬೆಂಬಲಿತರು ಪ್ರತ್ಯೇಕವಾಗಿ ಉಮೇದುವಾರಿಕೆ ಸಲ್ಲಿಸಿದ್ದಾರೆ.
ದಯಂಬಳ್ಳಿ ಕ್ಷೇತ್ರದ ಮರು ಚುನಾವಣೆಯಲ್ಲಿ ಮತದಾನದ ಪ್ರಮಾಣ ಹೆಚ್ಚಿಸುವ ಸಲುವಾಗಿ ಗ್ರಾಮ ಪಂಚಾಯಿತಿ ವತಿಯಿಂದ ದ್ವನಿ ವರ್ದಕ ಸೇರಿದಂತೆ, ಕರ ಪತ್ರಗಳ ಮೂಲಕ ಪ್ರಚಾರ ಮಾಡಲಾಗಿದೆ. ಮತದಾರರಿಗೆ ಕುಡಿಯುವ ನೀರು, ಶೌಚಾಲಯ, ವೀಲ್ ಛೇರ್ ವ್ಯವಸ್ಥೆಗಳನ್ನು ಮತ ಕೇಂದ್ರದಲ್ಲಿ ಮಾಡಿದ್ದು, ಎಲ್ಲಾ ಮತದಾರರು ಕಡ್ಡಾಯವಾಗಿ ಮತ ಚಲಾಯಿಸಬೇಕು- ಬಿ ಎನ್ ಕೃಷ್ಣಪ್ಪ, ಪಿಡಿಒ, ಅಗಳಗಂಡಿ
ಶೃಂಗೇರಿ ಕ್ಷೇತ್ರದ ಮುತ್ತಿನಕೊಪ್ಪ, ಆಲ್ದಾರ ಹಾಗೂ ದಯಂಬಳ್ಳಿ ಗ್ರಾಮ ಪಂಚಾಯ್ತಿ ಸದಸ್ಯತ್ವ ಸ್ಥಾನಕ್ಕೆ ಮರು ಚುನಾವಣೆ ನಡೆಯುತ್ತಿದ್ದು, ಮುತ್ತಿನಕೊಪ್ಪ ಮತ್ತು ಆಲ್ದಾರ ಗ್ರಾಪಂ ಕ್ಷೇತ್ರಗಳನ್ನು ಬಿಜೆಪಿಗೆ, ದಯಂಬಳ್ಳಿ ಜೆಡಿಎಸ್ ಗೆ ಎಂಬ ಮಾತುಕತೆಯಾಗಿತ್ತು, ಆದರೂ ಬಿಜೆಪಿ ಬೆಂಬಲಿತರು ದಯಬಂಳ್ಳಿಯಲ್ಲಿ ನಾಮ ಪತ್ರ ಸಲ್ಲಿಸಿದ್ದಾರೆ. ಹಾಗಾಗಿ ಜೆಡಿಎಸ್ ಪಕ್ಷ ಮೈತ್ರಿ ಮಾತುಕತೆಯಂತೆ ನಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ– ದಿವಾಕರ ಭಟ್, ಜೆಡಿಎಸ್ ಶೃಂಗೇರಿ ಕ್ಷೇತ್ರಾದ್ಯಕ್ಷ












