
ಶೃಂಗೇರಿ: ( ನ್ಯೂಸ್ ಮಲ್ನಾಡ್ ವರದಿ) 2023ರಲ್ಲಿ ನಡೆದಿದ್ದ ಶೃಂಗೇರಿ ವಿಧಾನಸಭಾ ಚುನಾವಣೆಯ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಮಹತ್ವದ ತೀರ್ಮಾನ ತೆಗೆದುಕೊಂಡಿದೆ. ಅಂಚೆ ಮತಗಳ ಮರು ಎಣಿಕೆಗೆ ಅಂತಿಮವಾಗಿ ದಿನಾಂಕವನ್ನ ನಿಗದಿ ಮಾಡಿದೆ. ಹೈಕೋರ್ಟ್ ಆದೇಶದ ಹಿನ್ನಲೆಯಲ್ಲಿ ಮೇ 2ರಂದು ಮರು ಮತ ಎಣಿಕೆ ಪ್ರಕ್ರಿಯೆ ನಡೆಯಲಿದೆ.
ಮೇ 2ರ ಬೆಳಗ್ಗೆ 8 ಗಂಟೆಗೆ ಚಿಕ್ಕಮಗಳೂರಿನ ಐಡಿಎಸ್ಜಿ ಕಾಲೇಜಿನಲ್ಲಿ ಮತ ಎಣಿಕೆ ನಡೆಯಲಿದೆ. ಚುನಾವಣಾಧಿಕಾರಿ ಗೌರವ ಶೆಟ್ಟಿ ಅವರ ನೇತೃತ್ವದಲ್ಲಿ ಈ ಪ್ರಕ್ರಿಯೆ ನಡೆಯಲಿದೆ. ಜೊತೆಗೆ ಅವರಿಗೆ ನಾಲ್ವರು ಸಹಾಯಕ ಚುನಾವಣಾಧಿಕಾರಿಗಳು ಸಾಥ್ ನೀಡಲಿದ್ದಾರೆ. ಇನ್ನು ಮರು ಮತ ಎಣಿಕೆಯನ್ನು ಅತ್ಯಂತ ಪಾರದರ್ಶಕವಾಗಿ ನಡೆಸಲು ಜಿಲ್ಲಾಡಳಿ ಸಿದ್ಧತೆ ನಡೆಸಿದೆ. ಇಡೀ ಎಣಿಕೆ ಕೊಠಡಿಯಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದೆ. ಹಾಲಿ ಶಾಸಕ ಟಿಡಿ ರಾಜೇಗೌಡ ಹಾಗೂ ಮಾಜಿ ಶಾಸಕ ಜೀವರಾಜ್ ಅವರ ಪರ ಏಜೆಂಟರು ಮತ ಎಣಿಕೆ ವೇಳೆ ಹಾಜರಿರುತ್ತಾರೆ.

2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ.ರಾಜೇಗೌಡ ಅವರು ಬಿಜೆಪಿ ಅಭ್ಯರ್ಥಿ ಡಿ.ಎನ್.ಜೀವರಾಜ್ ವಿರುದ್ಧ ಕೇವಲ 201 ಮತಗಳ ಅಂತರದಿಂದ ಜಯಗಳಿಸಿದ್ದರು. ಆ ಚುನಾವಣೆಯಲ್ಲಿ ಒಟ್ಟು 2,811 ಅಂಚೆ ಮತಗಳು ಚಲಾವಣೆಯಾಗಿದ್ದವು. ಅವುಗಳಲ್ಲಿ 279 ಅಂಚೆ ಮತಗಳನ್ನು ತಿರಸ್ಕರಿಸಲಾಗಿತ್ತು. ಈ ತಿರಸ್ಕೃತ ಮತಗಳ ಬಗ್ಗೆ ಮಾಜಿ ಶಾಸಕ ಜೀವರಾಜ್ ಆಕ್ಷೇಪ ವ್ಯಕ್ತಪಡಿಸಿದ್ದರು.

ಮರು ಮತ ಎಣಿಕೆ ಮಾಡಬೇಕೆಂದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ಹೈಕೋರ್ಟ್ ಏಪ್ರಿಲ್ 6ರಂದು ತಿರಸ್ಕೃತ ಅಂಚೆ ಮತಗಳನ್ನು ಮರು ಎಣಿಕೆ ಮಾಡುವಂತೆ ಐತಿಹಾಸಿಕ ಆದೇಶ ನೀಡಿತ್ತು.














