ಶಿವಮೊಗ್ಗ: (ನ್ಯೂಸ್ ಮಲ್ನಾಡ್ ವರದಿ) ತಾಲೂಕಿನ ಹಾಡೋನಹಳ್ಳಿ ಸಮೀಪ ತುಂಗಭದ್ರಾ ನದಿಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ಗಣಿಗಾರಿಕೆ ವಿರುದ್ಧ ಉಪವಿಭಾಗಾಧಿಕಾರಿ ಸತ್ಯನಾರಾಯಣ ನೇತೃತ್ವದ ತಂಡ ದಾಳಿ ನಡೆಸಿ ಅಂದಾಜು 80 ಲೋಡ್ ಮರಳನ್ನು ವಶಪಡಿಸಿಕೊಂಡಿದೆ.
ರಾತ್ರಿ ವೇಳೆ ನದಿಯ ಒಡಲಿನಿಂದ ಮಣ್ಣು ತೆಗೆದು ‘ವಾಶ್’ ಮೂಲಕ ಮರಳು ಬೇರ್ಪಡಿಸುವ ಅಕ್ರಮ ಚಟುವಟಿಕೆ ನಡೆಯುತ್ತಿರುವುದು ದಾಳಿಯ ವೇಳೆ ಬೆಳಕಿಗೆ ಬಂದಿದೆ. ಹಾಡೋನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಹುಕಾಲದಿಂದ ಈ ರೀತಿಯ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದ್ದು, ಅಧಿಕಾರಿಗಳು ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದರೂ ಸಂಪೂರ್ಣ ನಿಯಂತ್ರಣಕ್ಕೆ ಬರುತ್ತಿಲ್ಲ ಎನ್ನಲಾಗಿದೆ.

2025ರಿಂದ ಈವರೆಗೆ ಹಾಡೋನಹಳ್ಳಿ ಭಾಗದಲ್ಲಿ 13ಕ್ಕೂ ಹೆಚ್ಚು ಬಾರಿ ದಾಳಿ ನಡೆದಿದ್ದರೂ ಅಕ್ರಮ ಮರಳು ಸಂಗ್ರಹ ಚಟುವಟಿಕೆ ಮಾತ್ರ ನಿಲ್ಲದಿರುವುದು ಅಧಿಕಾರಿಗಳಿಗೆ ಸವಾಲಾಗಿ ಪರಿಣಮಿಸಿದೆ. ಅಕ್ರಮ ಗಣಿಗಾರಿಕೆಯಿಂದ ತುಂಗಭದ್ರಾ ನದಿಯ ಒಡಲು ದಿನದಿಂದ ದಿನಕ್ಕೆ ಬರಿದಾಗುತ್ತಿದ್ದು, ಪರಿಸರ ಹಾನಿ ಹೆಚ್ಚುತ್ತಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ವಶಪಡಿಸಿಕೊಂಡ ಮರಳನ್ನು ನದಿಯಲ್ಲೇ ಬಿಡಲಾಗಿದ್ದು, ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ. ಭೂ-ವಿಜ್ಞಾನಿ ಪ್ರಿಯಾ ಹಾಗೂ ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.















