ಕಡೂರು: (ನ್ಯೂಸ್ ಮಲ್ನಾಡ್ ವರದಿ) ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅಕ್ರಮವಾಗಿ ಸಾಗುವಳಿ ನಡೆಸಿದ ಆರೋಪದ ಮೇಲೆ ಓರ್ವ ವ್ಯಕ್ತಿಯನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.
ಇದನ್ನೂ ಓದಿ: ಪಾನ್ ಕಾರ್ಡ್ ಹೊಂದಿರುವವರ ಗಮನಕ್ಕೆ; ಇಂತಹವರಿಗೆ 10 ಸಾವಿರ ದಂಡ!

ಗಾಳಿಗುತ್ತಿಯ ರಮೇಶ ನಾಯ್ಕ ಎಂಬಾತನನ್ನು ಟ್ರ್ಯಾಕ್ಟರ್, ನೇಗಿಲು, ಬೊಲೆರೋ ಪಿಕಪ್ ವಾಹನದ ಸಮೇತ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.
ತಾಲ್ಲೂಕಿನ ಬೀರೂರು ಹೋಬಳಿ ಎಮ್ಮೆದೊಡ್ಡಿಯ ಸರ್ವೆ ನಂ.70ರಲ್ಲಿ ಸೆಕ್ಷನ್-4ರ (ಎಮ್ಮೆದೊಡ್ಡಿ ಹುಲಿ ಸಂರಕ್ಷಿತ ಪ್ರದೇಶ) ಅಧಿಸೂಚಿತ ಅರಣ್ಯ ಪ್ರದೇಶದಲ್ಲಿ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಕಡೂರು ಘಟಕದಿಂದ ಬೆಳೆಸಲಾದ ನೆಡುತೋಪು ಪ್ರದೇಶದಲ್ಲಿ ಅಕ್ರಮವಾಗಿ ಪ್ರವೇಶಿಸಿ ಸುಮಾರು ಒಂದು ಎಕರೆ ಪ್ರದೇಶದಲ್ಲಿ ಮುಳ್ಳುಕಂಟಿಗಳನ್ನು ತೆಗೆದು ಅಕ್ರಮ ಸಾಗುವಳಿ ನಡೆಸಿದ್ದ. 1985ರಿಂದ ನೀಲಗಿರಿ ನೆಡುತೋಪು ಬೆಳೆಸುತ್ತಿದ್ದ ಇಲ್ಲಿ, 2010ರಲ್ಲಿ ಅಂತಿಮ ಕಟಾವು ಮಾಡಲಾಗಿತ್ತು. 2013ರಲ್ಲಿ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮವು ನೆಡುತೋಪನ್ನು ಪುನಃ ನಿರ್ಮಾಣ ಮಾಡಲು ಮುಂದಾದಾಗ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಕಾಮಗಾರಿ ಸ್ಥಗಿತಗೊಳಿಸಲಾಗಿತ್ತು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ; 15,000 ಸಂಬಳ
ಆರೋಪಿಯು ಅರಣ್ಯ ಸಂಪತ್ತಿಗೆ ಹಾನಿ ಮಾಡಿದ್ದು, ಅಕ್ರಮವಾಗಿ ಸಾಗುವಳಿ ಮಾಡಿದ ಪ್ರದೇಶವನ್ನು ಪುನಃ ವಶಕ್ಕೆ ಪಡೆಯಲಾಗಿದೆ. ಬಂಧಿತ ರಮೇಶ ನಾಯ್ಕನನ್ನು ಕಡೂರು ಜೆಎಂಎಫ್ಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ ಎಂದು ಕಡೂರು ವಲಯ ಅರಣ್ಯಾಧಿಕಾರಿ ಹರೀಶ್ ಎಂ.ಆರ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಮನೆ, ಆಫೀಸ್, ಅಂಗಡಿಯ ವಿದ್ಯುತ್ ಮೀಟರ್ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ಇಂಧನ ಸಚಿವ












