ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಮಾಜಿ ಸೈನಿಕ ಹಾಗೂ ಪ್ರಸ್ತುತ ಚಿಕ್ಕಮಗಳೂರು ಜಿಲ್ಲೆಯ ಬಸವನಹಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀ ಕೀರ್ತಿ ಕುಮಾರ್ ಹೆಚ್.ಡಿ. ಅವರಿಗೆ ಭಾರತೀಯ ಸೇನೆಯಲ್ಲಿ ಸಲ್ಲಿಸಿದ ಅತ್ಯುತ್ತಮ ವಿದೇಶಿ ಸೇವೆಯನ್ನು ಗುರುತಿಸಿ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುತ್ತಿದೆ.
ಮೂಡಿಗೆರೆ ತಾಲ್ಲೂಕಿನ ಹೆಗ್ಗರವಳ್ಳಿ ಗ್ರಾಮದ ದಿವಂಗತ ದುಗ್ಗೇಗೌಡ ಹಾಗೂ ದೇವಮ್ಮ ದಂಪತಿಯ ದ್ವಿತೀಯ ಪುತ್ರರಾಗಿರುವ ಕೀರ್ತಿ ಕುಮಾರ್ ಅವರು ಹೆಗ್ಗರವಳ್ಳಿ, ಹುರುಡಿ ಹಾಗೂ ಹಾನುಬಾಳಿನಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪೂರ್ಣಗೊಳಿಸಿ, ಮೂಡಿಗೆರೆಯ ಡಿ.ಎಸ್.ಬಿ.ಜಿ. ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದಿದ್ದಾರೆ.

ಶಿಕ್ಷಣದ ಬಳಿಕ ಭಾರತೀಯ ಸೇನೆಯ ಮದ್ರಾಸ್ ರೆಜಿಮೆಂಟ್‌ಗೆ ಸೇರ್ಪಡೆಗೊಂಡ ಅವರು ಸುಮಾರು 17 ವರ್ಷಗಳ ಕಾಲ ದೇಶದ ವಿವಿಧ ಭಾಗಗಳು ಹಾಗೂ ವಿದೇಶಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಸೇನಾ ಸೇವೆ ಪೂರ್ಣಗೊಳಿಸಿದ ನಂತರ ತಾಯ್ನಾಡಿಗೆ ಮರಳಿ, 2016ನೇ ಬ್ಯಾಚ್‌ನ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಕ್ಯಾಡರ್‌ನಲ್ಲಿ ತರಬೇತಿ ಪಡೆದು, ಪ್ರಸ್ತುತ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಸೇನಾ ಸೇವೆಯ ಅವಧಿಯಲ್ಲಿ ಭಾರತೀಯ ಶಾಂತಿಪಾಲನಾ ಪಡೆ (United Nations Peacekeeping Mission) ಅಡಿಯಲ್ಲಿ ಲೆಬನಾನ್, ಉಗಾಂಡ ಸೇರಿದಂತೆ ವಿದೇಶಿ ಪ್ರದೇಶಗಳಲ್ಲಿ ಸೇವೆ ಸಲ್ಲಿಸಿ ಗಮನಾರ್ಹ ಸಾಧನೆ ಮಾಡಿದ್ದಾರೆ. ಅವರ ಈ ಸೇವೆಯನ್ನು ಪರಿಗಣಿಸಿ ಗೌರವ ಡಾಕ್ಟರೇಟ್ ನೀಡಲಾಗುತ್ತಿದೆ.
ಸರ್ಕಾರಿ ಶಾಲೆ ಮತ್ತು ಕಾಲೇಜುಗಳಲ್ಲಿ ವ್ಯಾಸಂಗ ಮಾಡಿದ ಕೀರ್ತಿ ಕುಮಾರ್ ಅವರಿಗೆ ಪುಸ್ತಕ ಓದುವ ಹವ್ಯಾಸವಿದ್ದು, ಕ್ರೀಡಾ ಕ್ಷೇತ್ರದಲ್ಲಿಯೂ ವಿಶೇಷ ಆಸಕ್ತಿ ಹೊಂದಿದ್ದಾರೆ. ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ವೇಳೆ ರಾಜಸ್ಥಾನ ಮತ್ತು ಗುಜರಾತ್‌ನಲ್ಲಿ ನಡೆದ ಬ್ರಿಗೇಡ್ ಮಟ್ಟದ 40 ಹಾಗೂ 50 ಕಿಲೋಮೀಟರ್ ಮ್ಯಾರಥಾನ್ ಸ್ಪರ್ಧೆಗಳಲ್ಲಿ ಚಿನ್ನದ ಪದಕಗಳನ್ನು ಗೆದ್ದು ಕ್ರೀಡಾ ಪ್ರತಿಭೆಯನ್ನೂ ಪ್ರದರ್ಶಿಸಿದ್ದಾರೆ. ಅವರು ಹವ್ಯಾಸಿ ಈಜುಗಾರರೂ ಆಗಿದ್ದಾರೆ.
ಸರಳ ವ್ಯಕ್ತಿತ್ವ, ಸದಾ ಹಸನ್ಮುಖಿ ಸ್ವಭಾವ ಹಾಗೂ ಎಲ್ಲರೊಂದಿಗೆ ಆತ್ಮೀಯವಾಗಿ ಬೆರೆಯುವ ಗುಣಗಳಿಂದ ಸಹೋದ್ಯೋಗಿಗಳು ಮತ್ತು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿರುವ ಕೀರ್ತಿ ಕುಮಾರ್ ಅವರಿಗೆ ಈ ಗೌರವ ಡಾಕ್ಟರೇಟ್ ಮತ್ತೊಂದು ಹೆಮ್ಮೆಯ ಗರಿ ಮೂಡಿಸಿದೆ. ಅವರು ಮುಂದಿನ ದಿನಗಳಲ್ಲಿ ಇನ್ನಷ್ಟು ಉನ್ನತ ಹುದ್ದೆಗಳನ್ನು ಅಲಂಕರಿಸಿ, ಹಲವು ಪ್ರಶಸ್ತಿ-ಪುರಸ್ಕಾರಗಳನ್ನು ಪಡೆದು ಸಮಾಜ ಹಾಗೂ ಜನಸೇವೆಯಲ್ಲಿ ಇನ್ನಷ್ಟು ಸಾಧನೆ ಮಾಡಲೆಂದು ಸಾರ್ವಜನಿಕರು ಹಾರೈಸಿದ್ದಾರೆ.
(ವರದಿ- ಶಶಿ ಬೆತ್ತದಕೊಳಲು)












