ಹರಿಹರಪುರ: (ನ್ಯೂಸ್ ಮಲ್ನಾಡ್ ವರದಿ) ವಿದ್ಯಾರ್ಥಿಗಳು ಕೇವಲ ಪದವಿ ಪಡೆದು ಉದ್ಯೋಗ ಗಳಿಸುವುದನ್ನಷ್ಟೇ ಗುರಿಯಾಗಿಸಿಕೊಳ್ಳದೆ, ಸಮಾಜ ಮತ್ತು ದೇಶದತ್ತ ತಮ್ಮ ಜವಾಬ್ದಾರಿಗಳನ್ನು ಅರಿತು ಸೇವಾ ಮನೋಭಾವದಿಂದ ಮುನ್ನಡೆಯಬೇಕು ಎಂದು ಭಾರತ ಸರ್ಕಾರದ ಗಡಿ ಭದ್ರತಾ ಪಡೆಯ (BSF) ಮಹಿಳಾ ಬೆಟಾಲಿಯನ್ನ ಸೇನಾನಿ ಹಾಗೂ ಹರಿಹರಪುರ ಶ್ರೀ ಅ.ರಾ.ಸ. ಪದವಿ ಪೂರ್ವ ಕಾಲೇಜಿನ ಹಳೆಯ ವಿದ್ಯಾರ್ಥಿನಿ ಹೊಸಗದ್ದೆಯ ಕುಮಾರಿ ರಮ್ಯಾ ಕರೆ ನೀಡಿದರು.
ಹರಿಹರಪುರ ಶ್ರೀ ಅ.ರಾ.ಸ. ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ನಡೆದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ದೇಶಸೇವೆಗೆ ಇಂದು ಅನೇಕ ಅವಕಾಶಗಳಿದ್ದು, ವಿದ್ಯಾರ್ಥಿಗಳು ಸೂಕ್ತ ಮಾರ್ಗದರ್ಶನದೊಂದಿಗೆ ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ತಂದೆ-ತಾಯಿ, ಪೋಷಕರು ಹಾಗೂ ವಿದ್ಯೆ ಕಲಿಸಿದ ಗುರುಗಳ ಬಗ್ಗೆ ಸದಾ ಗೌರವ ಹೊಂದಿರಬೇಕು. ಅವರು ಹೆಮ್ಮೆಪಡುವಂತಹ ಸಾಧನೆ ಮಾಡುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಕರ್ತವ್ಯವಾಗಿದೆ ಎಂದು ತಿಳಿಸಿದರು. ಪ್ರಾಮಾಣಿಕತೆ, ಧೈರ್ಯ, ಛಲ, ಕಷ್ಟಸಹಿಷ್ಣುತೆ ಮತ್ತು ಸಾಧಿಸುವ ಹಂಬಲ ಇದ್ದರೆ ಯಾವುದೇ ಗುರಿಯನ್ನು ತಲುಪಬಹುದು. ಸಾಧನೆಯ ಹಾದಿಯಲ್ಲಿ ಸಕಾರಾತ್ಮಕ ಚಿಂತನೆಗಳು ಅತ್ಯಗತ್ಯ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಶಾಲಾ-ಕಾಲೇಜು ದಿನಗಳಿಂದ ಆರಂಭಿಸಿ ಗಡಿ ಭದ್ರತಾ ಪಡೆ ಸೇರುವವರೆಗೆ ತಾವು ನಡೆದು ಬಂದ ಜೀವನ ಪಯಣ ಮತ್ತು ಅನುಭವಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡು ಅವರಿಗೆ ಸ್ಫೂರ್ತಿ ತುಂಬಿದರು.
ಕಾಲೇಜು ಆಡಳಿತ ಮಂಡಳಿಯ ನಿರ್ದೇಶಕರೂ, ಕೊಪ್ಪ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರೂ ಆದ ಜೆ.ಎಂ. ಶ್ರೀಹರ್ಷ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಎಚ್.ಎಸ್. ಪ್ರವೀಣ್ ಕುಮಾರ್, ಬಿ.ಪಿ. ದಯಾನಂದ್, ಪ್ರಾಂಶುಪಾಲ ಜೆ. ಮಹಾದೇವ್, ಕೊಪ್ಪ ರೋಟರಿ ಕ್ಲಬ್ನ ಶೈಲಜಾ ವಿಜಯಕುಮಾರ್, ರೇಖಾ ಉದಯ ಶಂಕರ್, ಶಾರದಾ ಮಹಿಳಾ ಸಮಾಜದ ಸುಮಿತ್ರ ನಾರಾಯಣ್, ಅಧ್ಯಾಪಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಉಪನ್ಯಾಸಕಿ ಶ್ರೀಮತಿ ಮುಕ್ತಾಂಬ ಕಾರ್ಯಕ್ರಮ ನಿರೂಪಿಸಿದರೆ, ನಾಗರತ್ನ ನಟರಾಜ್ ವಂದಿಸಿದರು.












