ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಕಾಡುಜಾತಿಯ ಮರಗಳ ದಿಮ್ಮಿಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಪ್ರಕರಣವನ್ನು ತಾಲ್ಲೂಕಿನ ಹಂಡುಗುಳಿ ಗ್ರಾಮದ ಸಮೀಪ ಅರಣ್ಯ ಇಲಾಖೆ ಅಧಿಕಾರಿಗಳು ಪತ್ತೆಹಚ್ಚಿ, ಮರದ ದಿಮ್ಮಿಗಳೊಂದಿಗೆ ಲಾರಿಯನ್ನು ವಶಕ್ಕೆ ಪಡೆದು ಆರು ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಹಂಡುಗುಳಿ ಗ್ರಾಮದ ಬಳಿ ರಸ್ತೆ ಬದಿಯಲ್ಲಿ ಲಾರಿಯೊಂದರಲ್ಲಿ ಕಾಡುಜಾತಿಯ ಮರದ ದಿಮ್ಮಿಗಳನ್ನು ತುಂಬಿ ನಿಲ್ಲಿಸಲಾಗಿದೆ ಎಂಬ ಖಚಿತ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ದಾಳಿ ನಡೆಸಿ ಪರಿಶೀಲನೆ ನಡೆಸಿದರು. ಈ ವೇಳೆ ಲಾರಿಯಲ್ಲಿ ಕಾಡುಜಾತಿಯ ಮರಗಳ ದಿಮ್ಮಿಗಳು ಪತ್ತೆಯಾಗಿವೆ.

ಲಾರಿಯಲ್ಲಿದ್ದ ಚಿಕ್ಕಮಗಳೂರು ತಾಲ್ಲೂಕಿನ ಹೊಸಕೋಟೆ ಗ್ರಾಮದ ರಂಗರಾಜು ಅವರನ್ನು ವಿಚಾರಣೆ ನಡೆಸಿದಾಗ, ಸಾಗಿಸಲಾಗುತ್ತಿದ್ದ ಮರದ ದಿಮ್ಮಿಗಳು ಹಳೆಮೂಡಿಗೆರೆಯ ಶಿವಪ್ಪ, ಮುತ್ತಿಗೆಪುರದ ಪ್ರಕಾಶ್ ಹಾಗೂ ಇತರರಿಗೆ ಸೇರಿದ್ದು, ಸಾಗಾಣಿಕೆಗೆ ಅಗತ್ಯವಾದ ರಹದಾರಿ (ಪರವಾನಗಿ) ಇಲ್ಲದೆ ಸಾಗಿಸಲಾಗುತ್ತಿತ್ತು ಎಂಬುದು ಬೆಳಕಿಗೆ ಬಂದಿದೆ.
ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಮರದ ದಿಮ್ಮಿಗಳು ಹಾಗೂ ಲಾರಿಯನ್ನು ವಶಕ್ಕೆ ಪಡೆದು, ರಂಗರಾಜು, ಹಳೆಮೂಡಿಗೆರೆಯ ಶಿವಪ್ಪ, ಮುತ್ತಿಗೆಪುರದ ಪ್ರಕಾಶ್, ಆನೆದಿಬ್ಬದ ಚಂದ್ರಶೇಖರ್, ಜೋಗಣ್ಣಕೆರೆಯ ರಘು ಹಾಗೂ ಹಳೆಕೋಟೆಯ ಚಂದ್ರಶೇಖರ್ ವಿರುದ್ಧ ಅರಣ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
ಜಿಲ್ಲಾ ಅರಣ್ಯಾಧಿಕಾರಿ (ಡಿಎಫ್ಒ) ಕೆ.ಟಿ. ಬೋರಯ್ಯ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಎಸಿಎಫ್) ಆಕರ್ಷ್ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಆರ್ಎಫ್ಒ ಮಂಜುನಾಥ್, ಡಿಆರ್ಎಫ್ಒ ಕೆ.ಎಸ್. ಅಶ್ವತ್, ಎಸ್.ಡಿ. ದೀಪಕ್, ಗಸ್ತು ಅರಣ್ಯ ಪಾಲಕರಾದ ಅಭಿಜಿತ್, ಆದರ್ಶ್ ಮತ್ತು ಮನು, ವಾಹನ ಚಾಲಕರಾದ ನವರಾಜ್ ಹಾಗೂ ಸುಮಂತ್ ಭಾಗವಹಿಸಿದ್ದರು. (ವರದಿ- ತನು ಕೊಟ್ಟಿಗೆಹಾರ)












