ಬೀರೂರು: (ನ್ಯೂಸ್ ಮಲ್ನಾಡ್ ವರದಿ) ಬೈಕ್ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರ ಮೃತಪಟ್ಟಿರುವ ಘಟನೆ ಬೀರೂರು-ಕಡೂರು ರಸ್ತೆಯ ಲಕ್ಷ್ಯಾ ಕಲ್ಯಾಣ ಮಂದಿರದ ಬಳಿ ಸೋಮವಾರ ರಾತ್ರಿ ನಡೆದಿದೆ. ಬೀರೂರಿನ ಬಳ್ಳಾರಿ ಕ್ಯಾಂಪ್ನ ಇಂದಿರಾನಗರದ ವಾಸಿ ತೀರ್ಥಂಕರ(32) ಮೃತ ದುರ್ದೈವಿ.
ಇದನ್ನೂ ಓದಿ: ರೈತರಿಗೆ ಸಿಹಿ ಸುದ್ದಿ; ಸೋಲಾರ್ ಪಂಪ್ ಸೆಟ್ಗಳಿಗೆ ಅರ್ಜಿ ಆಹ್ವಾನ

ಕಡೂರಿನ ಯಶೋದಾ ಎಂಬ ಪರಿಚಯಸ್ಥರು ಕಡೂರಿಗೆ ತೆರಳಲು ಬೀರೂರು ನಿಲ್ದಾಣದಲ್ಲಿ ಬಸ್ಗಾಗಿ ಕಾಯುತ್ತಿದ್ದ ಸಂದರ್ಭದಲ್ಲಿ, ತೀರ್ಥಂಕರ ಕೂಡ ಕಡೂರಿಗೆ ಹೋಗುತ್ತಿರುವುದಾಗಿ ತಿಳಿಸಿ ಅವರನ್ನು ಬೈಕ್ನ ಹಿಂಬದಿ ಕೂರಿಸಿಕೊಂಡು ಹೊರಟಿದ್ದರು ಎನ್ನಲಾಗಿದೆ. ಈ ವೇಳೆ ಲಕ್ಷ್ಯಾ ಕಲ್ಯಾಣ ಮಂಟಪದ ಬಳಿ ಕಡೂರು ಕಡೆಯಿಂದ ಅತಿವೇಗವಾಗಿ ಬಂದ ಕಾರು, ಇನ್ನೊಂದು ವಾಹನವನ್ನು ಹಿಂದಿಕ್ಕುವ ವೇಳೆ ಎದುರುಗಡೆಯಿಂದ ಬರುತ್ತಿದ್ದ ತೀರ್ಥಂಕರ ಅವರ ಬೈಕ್ಗೆ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಕಾರು ಹಾಗೂ ಬೈಕ್ ಸಂಪೂರ್ಣವಾಗಿ ಜಖಂಗೊಂಡಿವೆ. ಬೈಕ್ ಚಾಲನೆ ಮಾಡುತ್ತಿದ್ದ ತೀರ್ಥಂಕರ ಅವರಿಗೆ ಗಂಭೀರ ಗಾಯಗಳಾಗಿದ್ದು, ಹಿಂಬದಿ ಕುಳಿತಿದ್ದ ಯಶೋದಾ ಅವರ ಕಾಲು ಹಾಗೂ ಸೊಂಟಕ್ಕೆ ಗಾಯಗಳಾಗಿವೆ.
ಇದನ್ನೂ ಓದಿ: ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇಮಕಾತಿಗೆ ಸರ್ಕಾರ ಆದೇಶ
ತಕ್ಷಣ ಸ್ಥಳೀಯರು ಗಾಯಾಳುಗಳನ್ನು ಉಪಚರಿಸಿ ಆಂಬುಲೆನ್ಸ್ ಮೂಲಕ ಕಡೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ತೀರ್ಥಂಕರ ಮೃತಪಟ್ಟಿದ್ದಾರೆ.












