ಆಲ್ದೂರು: (ನ್ಯೂಸ್ ಮಲ್ನಾಡ್ ವರದಿ) ಕೆಲಸ ಮಾಡುತ್ತಿದ್ದ ಮನೆಯಲ್ಲೇ ಚಿನ್ನಾಭರಣ ಕಳವು ಮಾಡಿ ಪರಾರಿಯಾಗಿದ್ದ ಮನೆಗೆಲಸದವನನ್ನು ಆಲ್ದೂರು ಪೊಲೀಸರು ಬಂಧಿಸಿದ್ದು, ಆರೋಪಿಯಿಂದ 86 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಮಂಗಳೂರು ಮೂಲದ ವಿನೋದ್ ಬಂಧಿತ ಆರೋಪಿ.
ಬಸರವಳ್ಳಿ ಗ್ರಾಮದ ಮಂಜುನಾಥ್ ಗೌಡ ಅವರ ಮನೆಯಲ್ಲಿ ಜೂನ್ 17ರಂದು ಚಿನ್ನದ ಮಾಂಗಲ್ಯ ಸರ, ಎರಡು ಬಳೆ, ಕೈಚೈನ್ ಸೇರಿದಂತೆ ಒಟ್ಟು 86 ಗ್ರಾಂ ಚಿನ್ನಾಭರಣ ಕಳವಾಗಿತ್ತು. ಈ ಕುರಿತು ಜೂನ್ 18ರಂದು ಮಂಜುನಾಥ್ ಗೌಡ ಅವರು ಆಲ್ದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ವೃತ್ತ ನಿರೀಕ್ಷಕ ಸೋಮೇಗೌಡ ಅವರ ನೇತೃತ್ವದಲ್ಲಿ ತನಿಖೆ ನಡೆಸಿದರು. ಮೊಬೈಲ್ ಸಂಖ್ಯೆಯ ಸುಳಿವು ಆಧರಿಸಿ ಕಾರ್ಯಾಚರಣೆ ನಡೆಸಿದ ವೇಳೆ ಆರೋಪಿ ಚಿಕ್ಕಮಗಳೂರು ಜಿಲ್ಲೆಯಲ್ಲೇ ಪತ್ತೆಯಾಗಿದ್ದು, ಬಂಧಿಸಲಾಗಿದೆ.

ಆರೋಪಿ ಕಳೆದ ಎರಡು ವರ್ಷಗಳಿಂದ ಮಂಜುನಾಥ್ ಗೌಡ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ. ಮನೆಯಲ್ಲಿದ್ದ ಚಿನ್ನಾಭರಣಗಳನ್ನು ಇರಿಸಿದ್ದ ಸ್ಥಳದ ಬಗ್ಗೆ ಮಾಹಿತಿ ಹೊಂದಿದ್ದ ಆತ, ಮನೆಯಲ್ಲಿ ಮಗಳು ಒಬ್ಬರೇ ಇದ್ದ ಸಂದರ್ಭದಲ್ಲಿ 86 ಗ್ರಾಂ ಚಿನ್ನಾಭರಣ ದೋಚಿಕೊಂಡು ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಕಾನೂನು ಸುವ್ಯವಸ್ಥೆ ವಿಭಾಗದ ಪಿಎಸ್‌ಐ ರವಿ, ಅಪರಾಧ ವಿಭಾಗದ ಪಿಎಸ್‌ಐ ಮೂರ್ತಪ್ಪ ಹಾಗೂ ಸಿಬ್ಬಂದಿಗಳಾದ ಗಂಗಾಧರಸ್ವಾಮಿ, ಚೇತನ್‌ಕುಮಾರ್, ವಸಂತ್ ಕುಮಾರ್, ರಾಜೇಶ್ವರಿ, ತನ್ನೀರ್ ಮತ್ತು ಪ್ರಸನ್ನ ಭಾಗವಹಿಸಿದ್ದರು.














