ಕೆರೆಗೆ ಹಾರಿ ವೃದ್ಧೆ ಆತ್ಮಹತ್ಯೆ; ಶವ ಮೇಲಕ್ಕೆತ್ತಿದ ಖಾಂಡ್ಯ ತುರ್ತು ಘಟಕ:
ಬಾಳೆಹೊನ್ನೂರು: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ತಾಲೂಕಿನ ಆವತಿ ಹೋಬಳಿಯ ಬೆಟ್ಟದಮಳಲಿ ಗ್ರಾಮದಲ್ಲಿ ವೃದ್ಧೆಯೊಬ್ಬರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ನಡೆದಿದೆ. ಬೆಟ್ಟದಮಳಲಿ ಗ್ರಾಮದ ಪಾರ್ವತಮ್ಮ (70) ಆತ್ಮಹತ್ಯೆಗೆ ಶರಣಾದ ವೃದ್ಧೆ.
ಬುಧವಾರ ಅವರು ಗ್ರಾಮದ ಕೆರೆಗೆ ಹಾರಿರುವುದು ತಿಳಿದುಬಂದಿದ್ದು, ವಿಷಯ ತಿಳಿದ ಕುಟುಂಬಸ್ಥರು ಶವವನ್ನು ಮೇಲಕ್ಕೆ ತರುವಂತೆ ಖಾಂಡ್ಯ ಸ್ವಯಂಸೇವಕರ ತುರ್ತು ಘಟಕಕ್ಕೆ ಮಾಹಿತಿ ನೀಡಿದರು. ತುರ್ತು ಕರೆಗೆ ಸ್ಪಂದಿಸಿದ ಖಾಂಡ್ಯ ಸ್ವಯಂಸೇವಕರು ಸ್ಥಳಕ್ಕೆ ಧಾವಿಸಿ ಕೆರೆಯಲ್ಲಿ ಶೋಧ ಕಾರ್ಯ ನಡೆಸಿ ಪಾರ್ವತಮ್ಮ ಅವರ ಶವವನ್ನು ಮೇಲಕ್ಕೆತ್ತಿ ಕುಟುಂಬಸ್ಥರಿಗೆ ಹಸ್ತಾಂತರಿಸಿದರು.
ರಕ್ಷಣಾ ಕಾರ್ಯಾಚರಣೆಯಲ್ಲಿ ಹನೀಫ್, ಸಂಜಿತ್, ಉಮ್ಮರ್ ಫಾರೂಕ್, ರಾಕೇಶ್, ಅವಿನಾಶ್ ಟೆಲ್ಲಿಸ್, ರಂಜಿತ್, ಸುದೇವ್, ಸದ್ದಾಂ, ಚಂದ್ರಶೇಖರ್ ರೈ ಸೇರಿದಂತೆ ಹಲವು ಸ್ವಯಂಸೇವಕರು ಭಾಗವಹಿಸಿದ್ದರು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಬಾಳೆಹೊನ್ನೂರು: ಬೈಕ್–ಟಿಟಿ ವಾಹನ ಡಿಕ್ಕಿ: ಯುವಕನಿಗೆ ಗಂಭೀರ ಗಾಯ:
ಬಾಳೆಹೊನ್ನೂರು ಪಟ್ಟಣದ ಮಾಗುಂಡಿ ರಸ್ತೆಯ ಹೊಳೆಬಾಗಿಲು ಸಮೀಪ ಬುಧವಾರ ರಾತ್ರಿ ಬೈಕ್ ಮತ್ತು ಟಿಟಿ ವಾಹನ ಮುಖಾಮುಖಿ ಡಿಕ್ಕಿ ಹೊಡೆದುಕೊಂಡ ಪರಿಣಾಮ ಬೈಕ್ ಸವಾರನೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ. ಗಾಯಗೊಂಡವರನ್ನು ಅಲ್ಬರ್ಟ್ ಅಲೆನ್ (26) ಎಂದು ಗುರುತಿಸಲಾಗಿದೆ.
ಬೈಕ್‌ನಲ್ಲಿ ಹೊಳೆಬಾಗಿಲು ಕಡೆಗೆ ತೆರಳುತ್ತಿದ್ದ ವೇಳೆ ಎದುರಿನಿಂದ ಬರುತ್ತಿದ್ದ ಟಿಟಿ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾರೆ. ಅಪಘಾತದ ತೀವ್ರತೆಗೆ ಅಲ್ಬರ್ಟ್ ಅಲೆನ್ ಅವರ ಕಾಲು ಹಾಗೂ ಕೈಮೂಳೆ ಮುರಿದು ಗಂಭೀರ ಗಾಯಗಳಾಗಿವೆ. ಸ್ಥಳೀಯರು ತಕ್ಷಣ ಗಾಯಾಳುವನ್ನು ಬಾಳೆಹೊನ್ನೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದು, ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.
ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತದ ಕುರಿತು ತನಿಖೆ ಮುಂದುವರಿದಿದೆ.















