ತರೀಕೆರೆ: (ನ್ಯೂಸ್ ಮಲ್ನಾಡ್ ವರದಿ) ತಾಲ್ಲೂಕಿನ ಇಟ್ಟಿಗೆ ಗ್ರಾಮದಲ್ಲಿ ಎರಡು ನಾಯಿ, ಮೂರು ಕರುಗಳನ್ನು ಚಿರತೆ ಹೊತ್ತೊಯ್ದಿದ್ದು, ದೃಶ್ಯಾವಳಿ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಒಂದು ವಾರದೊಳಗೆ ಇಟ್ಟಿಗೆ ಗ್ರಾಮದ ದೇವೇಂದ್ರನಾಯ್ಕ ಅವರ ಮನೆಯ 2 ನಾಯಿ, ಶಿವಕುಮಾರ್ ಮನೆಯ ಒಂದು ಕರು, ಕೃಷ್ಣಪ್ಪ ಅವರ ಮನೆಯ ಒಂದು ಕರುವನ್ನು ಚಿರತೆ ಹೊತ್ತೊಯ್ದಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಚಿರತೆ ತಿಂದು ಬಿಟ್ಟಿರುವ ನಾಯಿ ಮತ್ತು ಕರುಗಳ ದೇಹದ ಭಾಗಗಳು ಕೊಳೆತ ಸ್ಥಿತಿಯಲ್ಲಿ ಅಸುಪಾಸಿನ ತೋಟಗಳಲ್ಲಿ ಪತ್ತೆಯಾಗಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಚಿರತೆಗಳ ಹಾವಳಿ ನಿಯಂತ್ರಿಸಲು ಅರಣ್ಯ ಇಲಾಖೆ ಕ್ರಮವಹಿಸಬೇಕು. ಕಾಡು ಪ್ರಾಣಿಗಳಿಗೆ ಕುಡಿಯುವ ನೀರಿಗೆ ತೊಂದರೆಯಾಗಿರುವುದರಿಂದ ಕಾಡೊಳಗಿನ ಕೆರೆಗಳ ಹೂಳೆತ್ತುವ ಕಾಮಗಾರಿ ಕೈಗೊಳ್ಳಬೇಕು ಎಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಚರಣ್ ಕುಮಾರ್ ಒತ್ತಾಯಿಸಿದ್ದಾರೆ.












