ಡೆಡ್ಲಿ ಆಕ್ಸಿಡೆಂಟ್, ಕೊಲೆ, ಸೂಸೈಡ್ ಮಲೆನಾಡಿನ ಎಲ್ಲಾ ಸುದ್ದಿಗಳು ಇಲ್ಲಿದೆ

ಶಿವಮೊಗ್ಗ / SHIVAMOGGA:

ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ: ಯುವಕ ಸಾವು!
ಜಿಲ್ಲೆಯ ಹೊಸನಗರ ತಾಲೂಕು ಯಡೂರು ಸಮೀಪ ಅಪಘಾತವೊಂದು ಸಂಭವಿಸಿದೆ. ಮತ್ತಿಗ ಎಂಬ ಗ್ರಾಮದ ಬಳಿಯಲ್ಲಿ ಮೀನು ಹಿಡಿಯಲು ಹೋಗಿ ವಾಪಾಸ್ ಬರುವಾಗ ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಪಲ್ಟಿಯಾಗಿದೆ. ಈ ಪರಿಣಾಮ ಅತಿಶಯ (23) ಎಂಬ ಯುವಕ ಮೃತಪಟ್ಟಿದ್ದಾನೆ. ತೀರ್ಥಹಳ್ಳಿಯಿಂದ ಐವರು ಕಾರಿನಲ್ಲಿ ತೆರಳಿ ಮೀನು ಹಿಡಿಯಲು ಹೋಗಿದ್ದ ವೇಳೆ ಅವಘಡ ಸಂಭವಿಸಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿದ್ಯುತ್ ಶಾಕ್: ಗುತ್ತಿಗೆ ಕಾರ್ಮಿಕನಿಗೆ ಗಂಭೀರ ಗಾಯ
ವಿದ್ಯುತ್ ಕಂಬವೇರಿದ ಗುತ್ತಿಗೆ ಕಾರ್ಮಿಕನೊಬ್ಬನಿಗೆ ಕರೆಂಟ್ ಶಾಕ್ ಆಗಿ ಕಂಬದಿಂದ ಕೆಳಗೆ ಬಿದ್ದು ಗಂಭೀರ ಗಾಯಗೊಂಡಿರುವ ಘಟನೆ ಬಟಾಣಿಜೇಡ್ಡು ಗ್ರಾಮದಲ್ಲಿ ನಡೆದಿದೆ. ಶಿಗ್ಗಾಂವ್ ಮೂಲದ ರಮೇಶ್ (24) ಗಂಭೀರ ಗಾಯಗೊಂಡಿರುವ ವಿದ್ಯುತ್ ಗುತ್ತಿಗೆ ಕಾರ್ಮಿಕನಾಗಿದ್ದಾನೆ. ಕಾಮಗಾರಿ ನಿಮಿತ್ತ ಗುತ್ತಿಗೆ ಕಾರ್ಮಿಕ ರಮೇಶ್ ಲೈಟ್ ಕಂಬವೇರಿದ್ದು, ಈ ಸಂದರ್ಭದಲ್ಲಿ ಆತನಿಗೆ ವಿದ್ಯುತ್ ಪ್ರವಹಿಸಿ ಕಂಬದಿಂದ ಕೆಳಗೆ ಬಿದ್ದು ಗಂಭೀರ ಗಾಯಗೊಂಡಿದ್ದಾನೆ.

ಭದ್ರಾವತಿಯ ಇಬ್ಬರು ಪೊಲೀಸರು ಅಮಾನತು
ನಗರದ ಎರಡು ಠಾಣೆಯ ಪೊಲೀಸ್ ಸಿಬ್ಬಂದಿಗಳನ್ನು ಅಮಾನತುಗೊಳಿಸಿ ಎಸ್ಪಿ ಜಿ. ಕೆ. ಮಿಥುನ್ ಕುಮಾ‌ರ್ ಆದೇಶಿಸಿದ್ದಾರೆ. ಸಂಚಾರಿ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ ಸ್ಟೇಬಲ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಉಲ್ಲಾಸ್ ಅಪಘಾತಗೊಂಡಿದ್ದ ವಾಹನವನ್ನು ಅದಲು ಬದಲು ಮಾಡಿದ ಪ್ರಕರಣದಲ್ಲಿ ಅಮಾನತು ಮಾಡಲಾಗಿದೆ. ಅದೇ ರೀತಿ, ಹಳೇ ನಗರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಗಿರೀಶ್ ಗೆ ಅಪರಾಧ ಕೃತ್ಯದಲ್ಲಿ ತೊಡಗಿದ್ದವರ ಜೊತೆ ಸಂಪರ್ಕ ಹೊಂದಲಾಗಿದೆ ಎನ್ನುವ ಆರೋಪದಡಿ ಅಮಾನತುಗೊಳಿಸಲಾಗಿದೆ.

ಮಾದಕ ವಸ್ತು ಸೇವನೆ: ಪ್ರಕರಣ ದಾಖಲು
ಮಾದಕ ವಸ್ತು ಸೇವನೆ ಮಾಡಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ವ್ಯಕ್ತಿಯೊಬ್ಬನ ವಿರುದ್ಧ ಪೇಪರ್‌ ಟೌನ್ ಪೊಲೀಸರು ಸ್ವಯಂ ಪ್ರೇರಣೆಯಿಂದ ಪ್ರಕರಣ ದಾಖಲಿಸಿಕೊಂಡಿರುವ ಘಟನೆ ನಡೆದಿದೆ. ಪೊಲೀಸ್ ಗಸ್ತಿನಲ್ಲಿದ್ದಾಗ ಹುಡ್ಕೊಕಾಲೋನಿ ಕಾಂಪ್ಲೆಕ್ಸ್ ಹತ್ತಿರದಲ್ಲಿ ಓರ್ವನು ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಮಾಹಿತಿ ಹಿನ್ನಲೆಯಲ್ಲಿ ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಪಡಿಸಿದ್ದು, ಮಾದಕ ಸೇವನೆ ಮಾಡಿರುವುದು ದೃಢಪಟ್ಟ ಹಿನ್ನಲೆಯಲ್ಲಿ ಸ್ವಯಂ ದೂರನ್ನು ದಾಖಲಿಸಿಕೊಳ್ಳಲಾಗಿದೆ.

ಕೆ.ಎಸ್‌.ಆರ್‌.ಟಿ.ಸಿ ಬಸ್ ನಿಲ್ದಾಣದಲ್ಲಿ ಲ್ಯಾಪ್‌ ಟಾಪ್ ಕಳವು!
ಶಿವಮೊಗ್ಗ ನಗರದ ಕೆ.ಎಸ್‌.ಆರ್‌.ಟಿ.ಸಿ ಬಸ್ ಸ್ಟ್ಯಾಂಡ್‌ ನಲ್ಲಿ ಯುವತಿಯೊಬ್ಬಳ ಲ್ಯಾಪ್ ಟಾಪ್ ಕಳ್ಳತನವಾದ ಬಗ್ಗೆ ದೂರು ದಾಖಲಾಗಿದೆ. ಬೆಂಗಳೂರಿನಲ್ಲಿ ಖಾಸಗಿ ಕಂಪೆನಿಯಲ್ಲಿ ಪ್ರೊಡಕ್ಷನ್ ಪ್ಲಾನರ್ ಮತ್ತು ಕಂಟ್ರೋಲರ್ ಆಗಿ ಕೆಲಸ ಮಾಡಿಕೊಂಡಿದ್ದ ಶಿವಮೊಗ್ಗದ ಯುವತಿಗೆ ಕಂಪೆನಿ ವತಿಯಿಂದ ಕೆಲಸಕ್ಕಾಗಿ ನೀಡಿದ್ದ ಲ್ಯಾಪ್ ಟಾಪ್ ಕಳುವಾಗಿದೆ. ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಚಿಕ್ಕಮಗಳೂರು / CHIKKAMAGALURU:

ತುಂಗಾನದಿ ನೀರಿನ ಮಟ್ಟ ಏರಿಕೆ
ಶೃಂಗೇರಿ ತಾಲೂಕಿನಾದ್ಯಂತ ಮುಂಗಾರು ಮಳೆ ಚುರುಕಾಗಿದ್ದು, ಬುಧವಾರ ಗಾಳಿ ಸಹಿತ ಮಳೆ ಆರ್ಭಟಿಸಿತು. ಹಳ್ಳ, ಕಾಲುವೆಗಳಲ್ಲಿ, ಕಿರುನದಿಗಳಲ್ಲಿ ನೀರು ತುಂಬಿದ್ದು, ತುಂಗಾನದಿಯಲ್ಲಿ ನೀರು ತುಂಬಿ ಹರಿಯುತ್ತಿದೆ. ಕೆರೆಕಟ್ಟೆ ಸುತ್ತಮುತ್ತಲ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ತುಂಗಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಳವಾಗುತ್ತಿದೆ. ಹವಮಾನ ಇಲಾಖೆ ಜಿಲ್ಲೆಗೆ ರೆಡ್ ಅಲರ್ಟ್ ಘೋಷಣೆ ಮಾಡಿದೆ.

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ದುರುಪಯೋಗ: ಪ್ರತಿಭಟನೆ


ವಾಲ್ಮೀಕಿ ಅಭಿವೃದ್ಧಿ ನಿಗಮದ 187 ಕೋಟಿ ರೂ. ಹಗರಣದ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಲು ಆಗ್ರಹಿಸಿ ಜೂ. 28 ರಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದೆಂದು ಬಿಜೆಪಿ ಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷ ನಂದೀಶ್ ಮದಕರಿ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಶೋಷಣೆಗೆ ಒಳಗಾದ ತಳಮಟ್ಟದ ಎಸ್ಟಿ ಸಮುದಾಯದ ಜನರ ಜೀವನಮಟ್ಟ ಸುಧಾರಣೆಗೆ ಬಳಸಬೇಕಿದ್ದ ನಿಗಮದ ಹಣ ರಾಜಕೀಯ ದುರುದ್ದೇಶಕ್ಕೆ ಬಳಕೆಯಾಗಿದ್ದು, ಸೂಕ್ತ ತನಿಖೆಯಾಗಬೇಕೆಂದು ಆಗ್ರಹಿಸಿದರು.

ನೂತನ ಕಳಸ ತಾ. ಪಂ ಕಾರ್ಯಾಲಯ ಕಚೇರಿಯ ಕಟ್ಟಡ ಉದ್ಘಾಟನೆ


ಇಂದು ಕಳಸ ತಾಲ್ಲೂಕು ಪಂಚಾಯಿತಿ ಕಾರ್ಯಾಲಯ ಕಚೇರಿಯ ನೂತನ ಕಟ್ಟಡವನ್ನು ಶಾಸಕಿ ನಯನ ಮೋಟಮ್ಮ ಅವರು ಉದ್ಘಾಟಿಸಿದರು. ಈ ವೇಳೆ, ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ಸ್ಥಳೀಯ ಕಾಂಗ್ರೆಸ್ ಮುಖಂಡರು ಮತ್ತು ಸ್ಥಳೀಯರು ಜೊತೆಗಿದ್ದರು.

ಕಂದಕಕ್ಕೆ ಉರುಳಿದ ಆಂಬುಲೆನ್ಸ್


ರೋಗಿಯೊಬ್ಬರನ್ನು ಮಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋದ ಚಿಕ್ಕಮಗಳೂರಿನ ಆಂಬುಲೆನ್ಸ್ ಆಲ್ದೂರಿನ ಹಾಂದಿ ಗ್ರಾಮದ ರಸ್ತೆ ಬದಿಯ ಕಾಫಿ ತೋಟದ ಕಂದಕಕ್ಕೆ ಬಿದ್ದ ಘಟನೆ ಬುಧವಾರ ನಡೆದಿದೆ. ನಿಯಂತ್ರಣ ತಪ್ಪಿದ್ದರಿಂದ ಆಂಬುಲೆನ್ಸ್ ಪಲ್ಟಿ ಹೊಡೆದಿದ್ದು ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಮಾನವ ಹಕ್ಕುಗಳ ಆಯೋಗದಿಂದ ಅಹವಾಲು ಸ್ವೀಕಾರ ಇಂದಿನಿಂದ
ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರು 27, 28 ರಂದು ಜಿಲ್ಲೆಗೆ ಭೇಟಿ ನೀಡಿ ಅಹವಾಲು ಸ್ವೀಕರಿಸಲಿದ್ದಾರೆ. ಸಾರ್ವಜನಿಕರು ಯಾವುದೇ ದೂರು ಅಥವಾ ಅಹವಾಲುಗಳಿದ್ದಲ್ಲಿ ಸಲ್ಲಿಸಬಹುದು. ಜೂನ್‌ 27 ರಂದು ಸಂಜೆ 4.30ಕ್ಕೆ, 28ರಂದು ಬೆಳಿಗ್ಗೆ 9 ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಪ್ರಕರಣಗಳ ವಿಚಾರಣೆ ನಡೆಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಭತ್ತ ಬೆಳೆ ವಿಮೆಗೆ ನೋಂದಣಿ
ಎನ್ ಆರ್ ಪುರ ತಾಲೂಕಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ 2024-25 ನೇ ಸಾಲಿನ ಮುಂಗಾರು ಹಂಗಾಮಿಗೆ ಗ್ರಾಮ ಪಂಚಾಯಿತಿ ಮಟ್ಟಕ್ಕೆ ಭತ್ತದ ( ಮಳೆ ಆಶ್ರಿತ) ಬೆಳೆಯನ್ನು ಅಧಿಸೂಚಿಸಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ರೈತರು 2024ರ ಆಗಸ್ಟ್ 16 ಒಳಗೆ ಸಂಬಂಧಿಸಿದ ಬ್ಯಾಂಕ್‌ ನಲ್ಲಿ ನೋಂದಾಯಿಸಬಹುದು.

ವಿದ್ಯಾರ್ಥಿಗೆ ವಿದ್ಯುತ್ ಶಾಕ್
ಕೊಪ್ಪ ತಾಲೂಕಿನ ನುಗ್ಗಿ ಗ್ರಾಪಂ ವ್ಯಾಪ್ತಿಯ ಎಚ್.ಹೊಸೂರಿನಲ್ಲಿ ಶಾಲೆ ಮುಗಿಸಿ ಮನೆಗೆ ನಡೆದುಕೊಂಡು ಹೋಗುತ್ತಿದ್ದ ವಿದ್ಯಾರ್ಥಿಗೆ ರಸ್ತೆ ಮೇಲೆ ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತಗುಲಿ ಶಾಕ್ ಹೊಡೆದ ಪರಿಣಾಮ ತೀವ್ರ ಗಾಯಗಳಾಗಿವೆ.ಎಚ್.ಹೊಸೂರು ಗ್ರಾಮದ ಸಂತೋಷ್ ಅವರ ಪುತ್ರ ಎರಡನೇ ತರಗತಿ ವಿದ್ಯಾರ್ಥಿ ಕ್ರಿಶ್. ಬೆನ್ನು, ಕೈ ಭಾಗಕ್ಕೆ ಗಾಯಗಳಾಗಿದ್ದು, ಕೊಪ್ಪದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಮೆಸ್ಕಾ ನಿರ್ಲಕ್ಷ್ಯದಿಂದ ಈ ಅವಘಡ ಸಂಭವಿಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಶೃಂಗೇರಿ ಶ್ರೀಗಳು ಪೀಠ ಸ್ವೀಕಾರ ಮಾಡಿ 50 ವರ್ಷ: ಶಾಂಕರ ತತ್ವ ಪ್ರಸಾರ ಹಾಗೂ ಕಲ್ಯಾಣ ವೃಷ್ಢಿ ಅಭಿಯಾನ ಆರಂಭ

ಶೃಂಗೇರಿ ಶ್ರೀಗಳು ಸನ್ಯಾಸತ್ವ ಸ್ವೀಕಾರ ಮಾಡಿ 50 ವರ್ಷಗಳ ಸಂದ ಪ್ರಯುಕ್ತ ಶಾಂಕರ ತತ್ವ ಪ್ರಸಾರ ಹಾಗೂ ಕಲ್ಯಾಣ ವೃಷ್ಢಿ ಅಭಿಯಾನ ಆರಂಭಿಸಲಾಗಿದೆ ಎಂದು ಕೆ.ಆರ್.ನಗರ ಯಡತೊರೆ ಮಠದ ಶಂಕರ ಭಾರತೀ ಸ್ವಾಮೀಜಿ ಹೇಳಿದರು. ಆಶೀರ್ವಚನ ನೀಡಿದ ಅವರು, ಶೃಂಗೇರಿ ಕ್ಷೇತ್ರದ ವ್ಯಾಪ್ತಿಯಲ್ಲಿ ಕನಿಷ್ಠ 50 ಸಾವಿರ ಜನರು ಕಲ್ಯಾಣ ವೃಷ್ಠಿತೋತ್ಸವ ಸ್ತೊತ್ರದ ಬಗ್ಗೆ ಪಾರಾಯಣ ಮಾಡಿ ನ.10 ರೊಳಗೆ ಶೃಂಗೇರಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಮರ್ಪಣೆ ಮಾಡಬೇಕು ಎಂದರು.

ದಲಿತರಿಗೆ ವಿವಿಧ ಸ್ಥಾನಮಾನ ನೀಡುವಂತೆ ಒತ್ತಾಯ: ಕಾಂಗ್ರೆಸ್ ಮುಖಂಡರ ವಿರುದ್ಧ ಅಸಮಾಧಾನ

ಚಿಕ್ಕಮಗಳೂರು: ಮತ ನಮ್ಮದು ಅಧಿಕಾರ ನಿಮ್ಮದು ಕಾಂಗ್ರೆಸ್ ಪಕ್ಷದ ದಲಿತರನ್ನು ಒಗ್ಗರಣೆ ಸೊಪ್ಪೆಂದು ತಿಳಿದಂತಿದೆ. ಶಾಸಕ ಹೆಚ್.ಡಿ.ತಮ್ಮಯ್ಯ ದಲಿತ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ. ಸ್ವಜಾತಿ ಪ್ರೇಮ ಮೆರೆಯುತ್ತಿದ್ದಾರೆ ಎಂದು ದಲಿತ, ಪ್ರಗತಿಪರ ಚಿಂತಕರ ವೇದಿಕೆ ಮುಖಂಡರು ಆರೋಪಿಸಿದರು. ವಿಧಾನಸಭಾ ಚುನಾವಣೆ ವೇಳೆ ಕೆಲವು ಬೇಡಿಕೆಗಳನ್ನು ಮುಂದಿಡಲಾಗಿತ್ತು. ಅದಕ್ಕೆ ಸಮ್ಮತಿಸಿದ್ದ ಕಾಂಗ್ರೆಸ್ ಮುಖಂಡರು ಈಗ ಮೌನಕ್ಕೆ ಶರಣಾದಂತೆ ಕಾಣುತ್ತಿದೆ. ದಲಿತರಿಗೆ ವಿವಿಧ ಸ್ಥಾನಮಾನಗಳನ್ನು ನೀಡಲು ಕಾಂಗ್ರೆಸ್ ಮುಂದಾಗದಿದ್ದರೆ ಮುಂಬವರು ತಾಲೂಕು ಮತ್ತು ಜಿಲ್ಲಾ ಪಂಚಾಯಿತಿಗಳಲ್ಲಿ ದಲಿತರು ತಮ್ಮ ಶಕ್ತಿಯನ್ನು ತೋರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಉತ್ತರ ಕನ್ನಡ / UTTARA KANNADA:

10 ಟನ್ ತೂಕದ ಜಾಹೀರಾತು ಫಲಕ ಕುಸಿತ: ತಪ್ಪಿದ ಭಾರಿ ಅನಾಹುತ


ಅಂಕೋಲಾದ ಬಸ್ ನಿಲ್ದಾಣದ ಸಮೀಪ ಪುರಸಭೆಯ ಅಂಗಡಿ ಮಳಿಗೆಯ 3ನೇ ಮಹಡಿಯ ಮೇಲೆ ಅಳವಡಿಸಿದ ಜಾಹೀರಾತು ಫಲಕ ಬುಧವಾರ ಸಂಭವಿಸಿದ ಭೀಕರ ಮಳೆ-ಗಾಳಿಗೆ ಕಳಚಿ ಬಿದ್ದಿದೆ. ಆದರೆ ಸ್ಥಳದಲ್ಲಿದ್ದ ಸಾರ್ವಜನಿಕರಿಗೆ ಯಾವುದೇ ಅಪಾಯವಾಗಿಲ್ಲ. ಹಲವು ಜನರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬುಧವಾರ ತೀವ್ರವಾಗಿ ಬೀಸಿದ ಮಳೆ-ಗಾಳಿಗೆ ಫಲಕ ಕಳಚಿ ಬಿದ್ದಿದೆ. 10 ಟನ್ ತೂಕದ ಫಲಕವನ್ನು ಅಳವಡಿಸಿದ ಕಂಪನಿಯವರು ಗಟ್ಟಿಮುಟ್ಟಾಗಿ ಹಾಕಿರಲಿಲ್ಲ. ಬೀಳುವ ವೇಳೆಯಲ್ಲಿ ಯಾರೂ ಇಲ್ಲದ ಕಾರಣ ಭಾರಿ ಅನಾಹುತ ತಪ್ಪಿದಂತಾಗಿದೆ.

ಕಬ್ಬಿಣದ ಗೇಟ್‌ ನಲ್ಲಿ ಸಿಲುಕಿದ್ದ ಜಿಂಕೆ ರಕ್ಷಣೆ


ರಾಮನಗರದ ಕಲ್ಲು ಕ್ವಾರಿಯ ಕಾಂಪೌಂಡ್‌ ಕಬ್ಬಿಣದ ಗೇಟ್‌ ನಲ್ಲಿ ಸಿಲುಕಿದ್ದ ಜಿಂಕೆಯನ್ನು ಸ್ಥಳೀಯರು ರಕ್ಷಿಸಿ ಒಂದು ಮೂಕ ಪ್ರಾಣಿಯ ಜೀವ ಉಳಿಸಿದ್ದಾರೆ. ಬುಧವಾರ ರಾಮನಗರದ ಗಾಂಧಲೆ ಬ್ರದರ್ಸ್‌ನ ಜಲ್ಲಿಕಲ್ಲು ಕ್ವಾರಿಯಲ್ಲಿನ ಕಾಂಪೌಂಡ್‌ ನ ಕಬ್ಬಿಣದ ಗೇಟ್‌ ಗೆ ಜಿಂಕೆಯ ತಲೆ ಸಿಲುಕಿಕೊಂಡಿದ್ದು, ಕ್ವಾರಿಯಲ್ಲಿ ಕೆಲಸ ಮಾಡುತ್ತಿದ್ದ ಸ್ಥಳೀಯರು ಇದನ್ನು ಕಂಡು ಅರಚುತ್ತಿದ್ದ ಜಿಂಕೆಯ ಜೀವವನ್ನು ರಕ್ಷಿಸಿದ್ದಾರೆ.

ಟ್ರಾನ್ಸ್ ಫಾರ್ಮರ್ ಮೇಲೆ ಬಿದ್ದ ಮರ: ಅಪಾರ ಹಾನಿ


ಗೋಕರ್ಣ ಸ್ಮಶಾನ ಕಾಳಿ ಮಂದಿರಕ್ಕೆ ತೆರಳುವ ಮಾರ್ಗದ ಬ್ರಾಹ್ಮಣ ಪರಿಷತ್ ಬಳಿಯಿರುವ ವಿದ್ಯುತ್ ಟ್ರಾನ್ಸ್ ಫಾರ್ಮರ್ ಮೇಲೆ ತೆಂಗಿನ ಮರ ಬಿದ್ದು ವಿದ್ಯುತ್ ಕಂಬ ಹಾಗೂ ಟ್ರಾನ್ಸ್ ಫಾರ್ಮರ್ ರಸ್ತೆಗೆ ಉರುಳಿ ಬಿದ್ದ ಘಟನೆ ಬುಧವಾರ ಸಂಜೆ ನಡೆದಿದೆ. ಇದೇ ಮರದಿಂದ ಮಹಾಬಲೇಶ್ವರ ಮಂದಿರದ ಅಮೃತಾನ್ನ ಭೋಜನ ಶಾಲೆಯ ಕಟ್ಟಿಗೆ ಗೋದಾಮಿನ ಛಾವಣಿಗೆ ಹಾನಿಯಾಗಿದೆ. ನಿತ್ಯ ನೂರಾರು ಜನರು ಸಾಗುವ ಈ ಮಾರ್ಗದ ಮಧ್ಯದಲ್ಲೇ ಉರುಳಿ ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಅವಘಡ ನಡೆದಿಲ್ಲ.

ಏಳು ತಿಂಗಳ ಮಗು ಅಪಹರಣ: ಪ್ರಕರಣ ದಾಖಲು

ಪತ್ನಿಯನ್ನು ಬಿಟ್ಟು ಮಗುವಿನ ಅಪಹರಣ | udayavani
ಬಕ್ರೀದ್ ಹಬ್ಬಕ್ಕೆ ಉಡುಗೊರೆ ಕೊಡುವುದಾಗಿ ನಂಬಿಸಿ ಭಟ್ಕಳಕ್ಕೆ ಕರೆಯಿಸಿಕೊಂಡು 7 ತಿಂಗಳ ಗಂಡು ಮಗುವೊಂದನ್ನು ಅನಾಮಿಕರು ಅಪಹರಿಸಿಕೊಂಡು ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಕಳೆದುಕೊಂಡ ಮಗುವಿಗಾಗಿ ಅಲೆದಾಡಿದ ಮಗುವಿನ ತಂದೆ ದಾಂಡೇಲಿಯ ಹುಸೇನ್ ಸಾಬ್ ಹಾಗೂ ತಾಯಿ ಫಾತೀಮಾ ಕೊನೆಗೆ ಪೊಲೀಸ್ ಠಾಣೆಯ ಮೆಟ್ಟಿಲನ್ನು ಏರಿದ್ದು, ಕೂಡಲೇ ಎಚ್ಚೆತ್ತುಕೊಂಡ ಪೊಲೀಸರು ಆರೋಪಿಗಳ ಪತ್ತೆಗಾಗಿ ಶೋಧ ಆರಂಭಿಸಿದ್ದಾರೆ. ಆರೋಪಿಗಳು ಮಗುವಿನೊಂದಿಗೆ ತಲೆ ಮರೆಸಿಕೊಂಡಿದ್ದು, ಶೋಧ ಮುಂದುವರಿದಿದೆ.

ಟ್ರಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ


ಹಳಿಯಾಳ ದಾಂಡೇಲಿ ರಾಜ್ಯ ಹೆದ್ದಾರಿಯ ಡೋಮಗೇರಾ ಗ್ರಾಮದ ಬಳಿ ಎರಡು ಟ್ರಕ್ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಚಾಲಕ ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಎರಡು ಲಾರಿಗಳು ಅತಿವೇಗದ ಚಾಲನೆಯಲ್ಲಿದ್ದು, ನಿಯಂತ್ರಣ ತಪ್ಪಿ ಡಿಕ್ಕಿಯಾಗಿದೆ. ಈ ಕುರಿತು ಹಳಿಯಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕೊಡಗು / KODAGU:

ಕಾಡಾನೆ ದಾಳಿ: ಕೃಷಿ ನಷ್ಟ


ಸುಂಟಿಕೊಪ್ಪದ ಕೃಷಿಕರಾಗಿರುವ ತಾಲ್ಲೂಕು ಪಂಚಾಯತ್ ಮಾಜಿ ಸದಸ್ಯೆ ಓಡಿಯಪ್ಪನ ವಿಮಲಾವತಿ ಅವರಿಗೆ ಸೇರಿದ ಕಾಫಿ ತೋಟಕ್ಕೆ ನಿನ್ನೆ ರಾತ್ರಿ ದಾಳಿ ಮಾಡಿರುವ ಕಾಡಾನೆಗಳು ಕಾಫಿ, ಬಾಳೆ ಹಾಗೂ ತೆಂಗಿನ ಗಿಡಗಳನ್ನು ನಾಶಪಡಿಸಿವೆ. ಈ ಭಾಗದಲ್ಲಿ ಕಾಡಾನೆಗಳ ಉಪಟಳ ಮಿತಿಮೀರಿದ್ದು ಕೃಷಿಕರು ಆತಂಕಗೊಂಡಿದ್ದಾರೆ.

ಸೂರ್ಲಬ್ಬಿಯಲ್ಲಿ ರಸ್ತೆಗುರುಳಿದ ಮರ


ಭಾರೀ ಮಳೆ ಗಾಳಿಗೆ ಸೂರ್ಲಬ್ಬಿಯಲ್ಲಿ ಮರವೊಂದು ರಸ್ತೆಗೆ ಅಡ್ಡಲಾಗಿ ಉರುಳಿ ಬಿದ್ದು ಸಂಚಾರಕ್ಕೆ ಅಡಚಣೆಯಾಗಿತ್ತು. ಮುದ್ದಂಡ ಗಪ್ಪು ಎಂಬುವವರ ಮನೆ ಸಮೀಪ ಮರ ಬಿದ್ದಿದ್ದ ಸಂದರ್ಭ ಸೋಮವಾರಪೇಟೆಯಿಂದ ಸೂರ್ಲಬ್ಬಿ ಮಾರ್ಗವಾಗಿ ಮಡಿಕೇರಿಗೆ ತೆರಳುತ್ತಿದ್ದ ಬಸ್ ಕೆಲ ಕಾಲ ನಿಲ್ಲುವಂತಾಗಿತ್ತು. ಸಾಕಾಲಕ್ಕೆ ಧಾವಿಸಿ ಬಂದ ಸ್ಥಳೀಯರು ಮರವನ್ನು ಕತ್ತರಿಸಿ ವಾಹನಗಳ ಸುಗಮ ಸಂಚಾರಕ್ಕೆ ನೆರವಾದರು.

ಹಾಸನ / HASANA:

ಪ್ರಜ್ವಲ್ ಅಶ್ಲೀಲ ವಿಡಿಯೋ ಪೆನ್​​​​​ಡ್ರೈವ್​​​ ಕೇಸ್, ಸಚಿವ ಪರಂ ಸ್ಫೋಟಕ ಹೇಳಿಕೆ

Hassan Sex Tape : ಪ್ರಜ್ವಲ್ ಅಶ್ಲೀಲ ವಿಡಿಯೋ ಪೆನ್​​​​​ಡ್ರೈವ್​​​ ಕೇಸ್, ಸಚಿವ ಪರಂ ಸ್ಫೋಟಕ ಹೇಳಿಕೆ
ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣದ್ದು ಎನ್ನಲಾದ ಅಶ್ಲೀಲ ವಿಡಿಯೋಗಳ ಪೆನ್​​​​​ಡ್ರೈವ್ ಗಳನ್ನು ಯಾರು ಹಂಚಿದ್ದಾರೆಂದು ಗೊತ್ತಿದೆ ಎಂದು ಸಚಿವ ಡಾ.ಜಿ.ಪರಮೇಶ್ವರ್ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಸಾರ್ವಜನಿಕವಾಗಿ ಬಿಟ್ಟು ಕೊಡಲು ಆಗುವುದಿಲ್ಲ. ಎಸ್‌ಐಟಿ ತನಿಖೆಯು ಚುರುಕಾಗಿ ನಡೆಯುತ್ತಿದ್ದು, ತನಿಖೆ ಪೂರ್ಣವಾದ ಬಳಿಕ ಎಲ್ಲವೂ ಸಾರ್ವಜನಿಕವಾಗಿ ಗೊತ್ತಾಗಲಿದೆ ಎಂದರು.

ಸೂರಜ್ ರೇವಣ್ಣ ವಿರುದ್ಧದ ಎರಡನೇ ಕೇಸ್ ಕೂಡ ಸಿಐಡಿಗೆ ಹಸ್ತಾಂತರಿಸಿದ ಸರ್ಕಾರ

ಪ್ರಜ್ವಲ್​ ಸುಮಾರು ದಿನ ಪರಾರಿಯಾಗಿದ್ದ, ಈಗ ಸೂರಜ್‌ ಒಂದೇ ದಿನದಲ್ಲಿ ಪೊಲೀಸ್‌ ಬಲೆಗೆ ಬಿದ್ದಿದ್ದೇ ರೋಚಕ!
ಸೂರಜ್ ರೇವಣ್ಣ ವಿರುದ್ಧದ ಅಸಹಜ ಲೈಂಗಿಕ ದೌರ್ಜನ್ಯ ಆರೋಪದ ಎರಡನೇ ಕೇಸ್ ಕೂಡ ಸಿಐಡಿಗೆ ಹಸ್ತಾಂತರ ಮಾಡಿ ಸರ್ಕಾರ ಆದೇಶಿಸಿದೆ. ಇನ್ನು ಹೊಳೆನರಸೀಪುರ ಗ್ರಾ. ಠಾಣೆಯಲ್ಲಿ ಜೂ.25 ಮತ್ತೊಂದು ಕೇಸ್ ದಾಖಲಾದ ಹಿನ್ನಲೆ ಸಿಐಡಿಗೆ ಹಸ್ತಾಂತರ ಮಾಡಿ ಆದೇಶಿಸಲಾಗಿದೆ. ಮೊದಲ ಪ್ರಕರಣದಲ್ಲಿ ಅರಕಲಗೂಡು ಮೂಲದ ಯುವಕ ದೂರು ನೀಡಿದ್ದರೆ, 2ನೇ ಪ್ರಕರಣದಲ್ಲಿ ಹೊಳೆನರಸೀಪುರ ಮೂಲದ ಯುವಕ ದೂರು ನೀಡಿದ್ದ. ಇದೀಗ ಎರಡೂ ಪ್ರಕರಣಗಳ ತನಿಖೆ ಸಿಐಡಿಗೆ ಹಸ್ತಾಂತರ ಮಾಡಲಾಗಿದೆ.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.