ತರೀಕೆರೆ: (ನ್ಯೂಸ್ ಮಲ್ನಾಡ್ ವರದಿ ) ವಸತಿ ಶಾಲೆಯ ವಿದ್ಯಾರ್ಥಿಗಳಿಗಾಗಿ ಸರ್ಕಾರ ಪೂರೈಸಿದ್ದ ಸಾವಿರಾರು ರೂಪಾಯಿ ಮೌಲ್ಯದ ಗೋಧಿಯನ್ನು ಯಾರಿಗೂ ತಿಳಿಯದಂತೆ ಭೂಮಿಯ ಆಳದಲ್ಲಿ ಹೂತು ಹಾಕಿರುವ ಗಂಭೀರ ಪ್ರಕರಣವೊಂದು ತರೀಕೆರೆ ತಾಲೂಕಿನ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಬಯಲಾಗಿದೆ.
ಸಾರ್ವಜನಿಕರು ನೀಡಿದ ದೂರಿನ ಮೇರೆಗೆ ಶಾಲೆಯ ಆವರಣದಲ್ಲಿ ಜೆಸಿಬಿ ಮೂಲಕ ಗುಂಡಿ ತೆಗೆದಾಗ, ಸುಮಾರು 10 ಅಡಿ ಆಳದಲ್ಲಿ ಹೂತು ಹಾಕಲಾಗಿದ್ದ 70 ಚೀಲ ಗೋಧಿ ಮೂಟೆಗಳು ಪತ್ತೆಯಾಗಿವೆ. 2 ವರ್ಷಗಳ ಹಿಂದೆ ಬೇಸಿಗೆಯ ಸಮಯದಲ್ಲಿ ಅಂದಿನ ಪ್ರಾಂಶುಪಾಲರಾಗಿದ್ದ ಹರೀಶ್ ಎಂಬುವರ ಅವಧಿಯಲ್ಲಿ ಈ ಗೋಧಿಯನ್ನು ಭೂಮಿಯಲ್ಲಿ ಹೂಳಲಾಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ.
70 ಮೂಟೆಗಳಷ್ಟು ಗೋಧಿ ಉಳಿಯಲು ಕಾರಣವೇನು? ಮಕ್ಕಳಿಗೆ ಸರಿಯಾಗಿ ಆಹಾರ ನೀಡುತ್ತಿರಲಿಲ್ಲವೇ,ಒಂದು ವೇಳೆ ಗೋಧಿ ತಿನ್ನಲು ಯೋಗ್ಯವಾಗಿಲ್ಲದಿದ್ದರೆ, ಆಹಾರ ನಿರೀಕ್ಷಕರಿಂದ ದೃಢೀಕರಿಸಿ ಸರ್ಕಾರಕ್ಕೆ ವಾಪಸ್ ಕಳಿಸಬೇಕಿತ್ತು. ಅದನ್ನು ಬಿಟ್ಟು ಗುಟ್ಟಾಗಿ ಹೂತಿದ್ದೇಕೆ? ಎಂಬ ಸಂಶಯ ವ್ಯಕ್ತವಾಗಿದೆ.
ಯಾವುದೇ ಉನ್ನತ ಅಧಿಕಾರಿಗಳ ಗಮನಕ್ಕೆ ತರದೆ, ಕಾನೂನುಬಾಹಿರವಾಗಿ ಇಷ್ಟೊಂದು ದೊಡ್ಡ ಪ್ರಮಾಣದ ಆಹಾರ ಧಾನ್ಯವನ್ನು ಮಣ್ಣು ಪಾಲು ಮಾಡಿರುವುದು ಸರ್ಕಾರದ ಹಣದ ದುರುಪಯೋಗಕ್ಕೆ ಸಾಕ್ಷಿಯಾಗಿದೆ. ಗೋಧಿ ಹಾಳಾಗಿದೆ ಎಂಬ ನೆಪವೊಡ್ಡಿ ಹೂಳಲಾಗಿದ್ದರೂ, ಅಸಲಿ ಕಾರಣವೇನು ಎಂಬುದು ತನಿಖೆಯಿಂದ ಹೊರಬರಬೇಕಿದೆ.
ತರೀಕೆರೆ: ವಸತಿ ಶಾಲೆಯ ಮಕ್ಕಳಿಗೆ ಬಂದಿದ್ದ ಗೋಧಿಯನ್ನ ಭೂಮಿಯಡಿ ಹೊತಿಟ್ಟ ಪ್ರಾಂಶುಪಾಲರು!













