ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಆನೆ, ಹುಲಿ, ಕಾಡುಕೋಣ ಜೊತೆ 16 ಕುಟುಂಬಗಳನ್ನು ಅರಣ್ಯದೊಳಗೆ ಬಿಟ್ಟು ಸುತ್ತ ಸೋಲಾರ್ ಆಧಾರಿತ ಟೆಂಟಕಲ್ ಬೇಲಿ ನಿರ್ಮಿಸಲಾಗಿದೆ.

ಸಾರಗೋಡು ಮೀಸಲು ಅರಣ್ಯ ಘೋಷಣೆ ಸಂದರ್ಭದಲ್ಲಿ ಮಂಡುಗುಳಿಹಾರ ಮತ್ತು ಬೈರಿಗದ್ದೆ ಸುತ್ತಮುತ್ತಲ 70ಕ್ಕೂ ಹೆಚ್ಚು ಕುಟುಂಬಗಳನ್ನು 2006ರಲ್ಲೇ ಸ್ಥಳಾಂತರ ಮಾಡಿದ್ದು, 1978ಕ್ಕೂ ಪೂರ್ವದಿಂದ ನೆಲೆಸಿರುವ ಕುಟುಂಬಗಳು ಎಂಬ ಕಾರಣಕ್ಕೆ ಪಾರಂಪರಿಕ ಅರಣ್ಯವಾಸಿಗಳು ಎಂದು ತೀರ್ಮಾನಿಸಿ 16 ಕುಟುಂಬಗಳನ್ನು ಇಲ್ಲೇ ಉಳಿಸಲಾಯಿತು. ಅರಣ್ಯದಿಂದ ಹೊರ ಬರಲು ಒಪ್ಪಿದ್ದರೂ ಕೂಡ ಈ 16 ಕುಟುಂಬಗಳ ಸ್ಥಳಾಂತರವಾಗಿಲ್ಲ.
ಮನೆಯ ಬಳಿ ಆನೆ, ಹುಲಿ, ಕಾಡುಕೋಣಗಳು ಬಂದು ಹೋಗುತ್ತಿದ್ದು, ಆನೆಗಳು ಅರಣ್ಯ ದಾಟಿ ಊರಿನತ್ತ ಬರದಂತೆ ಸೋಲಾರ್ ಅಧಾರಿತ ಟೆಂಟಕಲ್ ಬೇಲಿಯನ್ನು ಅರಣ್ಯ ಇಲಾಖೆ ನಿರ್ಮಿಸಿದೆ. ಊರಿನ ಸಂಪರ್ಕ ರಸ್ತೆಗೆ ಬರಬೇಕೆಂದರೆ ಕನಿಷ್ಠ ಮೂರು ಕಿಲೋ ಮೀಟರ್ ನಡೆದು ಸಾಗಬೇಕು. ನಂತರ ಟೆಂಟಕಲ್ ಬೇಲಿ ದಾಟಿ ರಸ್ತೆಗೆ ಬರಬೇಕು. ಜೀವಭಯದಿಂದ ವಯೋವೃದ್ದರು ಮನೆಯಿಂದ ಹೊರಗೆ ಬರುತ್ತಿಲ್ಲ. ಯುವಕರು ಮಾತ್ರ ಹಳ್ಳಿಗಳಿಗೆ ಹೋಗಿ ಮನೆಗೆ ಬೇಕಿರುವ ವಸ್ತುಗಳನ್ನು ಖರೀದಿಸಿಕೊಂಡು ಬರುತ್ತಾರೆ.
ಆನೆ, ಹುಲಿ, ಕಾಡುಕೋಣ ಮತ್ತು ನಮ್ಮನ್ನು ಒಟ್ಟಿಗೆ ಕೂಡಿ ಹಾಕಲಾಗಿದೆ. ನಾವು ಈ ನಾಗರಿಕ ಸಮಾಜದ ಭಾಗ ಅಲ್ಲ ಎಂಬ ಭಾವನೆ ಮೂಡಿದೆ. ಕಾಡು ಪ್ರಾಣಿಗಳ ಬಾಯಿಗೆ ತುತ್ತಾಗುವ ಮುನ್ನ ನಮ್ಮನ್ನು ಇಲ್ಲಿಂದ ಸ್ಥಳಾಂತರ ಮಾಡಿ ಎಂದು ಇಲ್ಲಿನ ನಿವಾಸಿಗಳು ಮನವಿ ಮಾಡಿಕೊಂಡಿದ್ದಾರೆ.
“ಮನೆಗೆ ಹೋಗುವ ದಾರಿಯಲ್ಲಿ ಹಲವು ಬಾರಿ ಆನೆ ಅಟ್ಟಾಡಿಸಿವೆ. ತಪ್ಪಿಸಿಕೊಂಡು ಓಡಿದ್ದರಿಂದ ಜೀವ ಉಳಿದಿದೆ. ನಮ್ಮ ಕಣ್ಣೆದುರೇ ಇಬ್ಬರ ಪ್ರಾಣ ಹೋಗಿದೆ. ಮಗನಿಗೆ ಈಗ ನಾಲ್ಕು ವರ್ಷ ಪೂರ್ಣಗೊಂಡಿದೆ. ಅಂಗನವಾಡಿಗೆ ಕಳುಹಿಸಲೂ ಸಾಧ್ಯವಾಗುತ್ತಿಲ್ಲ. ಜೀವ ಉಳಿದರೆ ಸಾಕು ಎನ್ನುವಂತಾಗಿದೆ”– ಕಾರ್ತಿಕ್, ಮುಂಡಗುಳಿಹಾರ












