ಆನೆಗೆ ವಿಹಾರಧಾಮ, ಇಲ್ಲಿನ ನಿವಾಸಿಗಳಿಗೆ ಪಂಗನಾಮ

ಆನೆಗೆ ವಿಹಾರಧಾಮ, ಇಲ್ಲಿನ ವಾಸಿಗಳಿಗೆ ಪಂಗನಾಮ. ಭದ್ರಾ ಹುಲಿ ಯೋಜನೆಯ ರಜತ ಮಹೋತ್ಸವದಲ್ಲಿ ಸನ್ಮಾನ್ಯ ಅರಣ್ಯ ಸಚಿವರು ಭದ್ರಾ ಅಭಯಾರಣ್ಯದಲ್ಲಿ ಆನೆ ವಿಹಾರ ಧಾಮ” ಮಾಡುವುದಾಗಿ, ಅದಕ್ಕೆ ಬೇಕಾದ 2000 ಹೆಕ್ಟೇರ್ ಭೂಮಿ ಗುರುತಿಸಿರುವುದಾಗಿ, ತಕ್ಷಣಕ್ಕೆ ಅದನ್ನು ಕಾರ್ಯರೂಪಕ್ಕೆ ತರಲು ಅಧಿಕಾರಿಗಳಿಗೆ ಸೂಚನೆ ನೀಡುವ ಮೂಲಕ ಘೋಷಿಸಿ ಬಿಟ್ಟರು. ಅಲ್ಲಿದ್ದ ಜನಸ್ತೋಮ ಮತ್ತು ಮಲೆನಾಡನ್ನು ಪ್ರತಿನಿಧಿಸುವ ಜನ ಪ್ರತಿನಿಧಿಗಳು ಒಕ್ಕೊರಲ ಚಪ್ಪಾಳೆ ಮೂಲಕ ಸ್ವಾಗತ ಮಾಡಿತು…


ಇದನ್ನೂ ಓದಿ; ಗ್ರಾಮ ಪಂಚಾಯಿತಿ ಸದಸ್ಯರಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್; ಏನದು? ಇಲ್ಲಿದೆ ನೋಡಿ


ಇದರಿಂದ ಚಿಕ್ಕಮಗಳೂರು ಮೂಡಿಗೆರೆ ಹಾಸನ, ಕೊಡಗು ಮುಂತಾದ ಪ್ರದೇಶಗಳಲ್ಲಿ ಉಪಟಳ ಕೊಡುತ್ತಿರುವ ಆನೆಗಳನ್ನು ತಂದು ಇಲ್ಲಿ ಪುನರ್ವಸತಿ ಮಾಡುವುದು ತನ್ಮೂಲಕ ಆನೆ ಮತ್ತು ಮಾನವ ಸಂಘರ್ಷಕ್ಕೆ ಕಡಿವಾಣ ಹಾಕುವುದು ಯೋಜನೆಯ ಉದ್ದೇಶ ಎಂದು ಬಿಟ್ಟರು.

ಅಲ್ಲಿದ್ದ ರೈತರು ಆನೆ ದಾಳಿಗೆ ಒಳಗಾಗಿ ಮೃತ ಪಟ್ಟರೆ 25 ಲಕ್ಷ ಪರಿಹಾರ ಕೊಡಬೇಕು ಎಂಬ ಮನವಿಗೆ ಸಚಿವರು ಪರಿಶೀಲನೆ ಮಾಡುವುದಾಗಿ ಭರವಸೆ ಇತ್ತರು. 25 ಲಕ್ಷ ಮನೆಯ ಯಜಮಾನ ಕಳೆದು ಕೊಂಡ ಕುಟುಂಬಕ್ಕೆ ನೆಮ್ಮದಿ ಕೊಡಬಲ್ಲದೆ???, ಬದುಕು ಕಳೆದ ಕೊಂಡ ಕುಟುಂಬ ಹೇಳಬೇಕಷ್ಟೇ!,

ಆನೆ ನಮಗೆಲ್ಲ ಪೂಜನೀಯ ಪ್ರಾಣಿ, ಗೌರವಿಸಲ್ಪಟ್ಟ ಪ್ರಾಣಿ, ಅತಿ ಸೂಕ್ಷ್ಮ ಸಂವೇದನೆಯ ಅತಿ ಬುದ್ದಿವಂತ ಜೀವಿ. ಒಂದು ಆನೆ ದಿನಕ್ಕೆ ಕನಿಷ್ಠ 140 ಕೆಜಿ ಇಂದ 250 ಕೆಜಿಯಷ್ಟು ಆಹಾರ, 30 ರಿಂದ 40 ಗ್ಯಾಲನ್ ವರೆಗೆ ನೀರು ಕುಡಿಯುತ್ತದೆ. ಅದಕ್ಕಾಗಿ ದಿನದ 14 ರಿಂದ 16 ಗಂಟೆ ಸಮಯ ವ್ಯಯ ಮಾಡುತ್ತದೆ. ತಾನು ತಿಂದ ಆಹಾರದಲ್ಲಿ ಸುಮಾರು ಶೇಕಡಾ 60 ರಷ್ಟನ್ನು ಮಾತ್ರ ಜೀರ್ಣ ಮಾಡಿಕೊಳ್ಳುತ್ತದೆ.

ಆನೆಗಳು ಮಾತೃ ಪ್ರಧಾನ ಕುಟುಂಬ ವ್ಯವಸ್ಥೆಯ ಕುಡಿಗಳು. ಹೆಣ್ಣಾನೆಗಳು ಸಹಜವಾಗಿ ಗುಂಪಿನಲ್ಲೇ ಇದ್ದರೆ. ಗಂಡು ಆನೆಗಳು 10 ವರ್ಷದ ಬಳಿಕ ಗುಂಪಿನಿಂದ ಕ್ರಮೇಣ ಹೊರ ಹೋಗುತ್ತ. 14 ವರ್ಷ ಪ್ರಾಯಕ್ಕೆ ಸಂಪೂರ್ಣ ಒಂಟಿಯಾಗಿ ಜೀವನ ಮಾಡಲು ಶುರು ಮಾಡುತ್ತದೆ. ಸಂತಾನೋತ್ಪತ್ತಿ ಸಮಯದಲ್ಲಿ ಮಾತ್ರ ಹೆಣ್ಣಾನೆ ಹಿಂಡು ಹುಡುಕಿ ಹೊರಡುವ ಆನೆ. ಕೆಲಸ ಮುಗಿದ ಬಳಿಕ ವಾಪಸ್ ಒಂಟಿಯಾಗಿ ಬದುಕಲು ಶುರು ಮಾಡುತ್ತದೆ. ಒಂದು ಗಂಡಾನೆ ವರ್ಷಕ್ಕೆ ಸುಮಾರು ಕನಿಷ್ಠ 1000 ಚದರ ಕಿಮೀ ಅಷ್ಟು ನಡೆದಾಡುತ್ತದೆ.


ಇದನ್ನೂ ಓದಿ; ಅಕ್ರಮ ಪಂಪ್ ಸೆಟ್ ಹೊಂದಿರುವವರಿಗೆ ಸಿಎಂ ನಿಂದ ಗುಡ್ ನ್ಯೂಸ್; ಮುಖ್ಯಮಂತ್ರಿ ಹೇಳಿದ್ದೇನು?


ಆನೆ ಅದೆಷ್ಟು ಸೂಕ್ಷ್ಮ ಮತಿ ಎಂದರೆ, ಸಾಕಾನೆ ಶಿಬಿರಗಳಲ್ಲಿ ಪುಟ್ ಬಾಲ್ ಆಡುವುದರಿಂದ ಹಿಡಿದು. ಕಾಡಿನಲ್ಲಿ ಮದವೇರಿದ ಗಜವನ್ನು ಸೆರೆ ಹಿಡಿಯುವಷ್ಟು ಯೋಚನಾಮತಿ ಆಗಿರುತ್ತದೆ.

ಆನೆ ನಡೆದಿದ್ದೇ ದಾರಿ:
ಆನೆ ತನ್ನ ಆಹಾರಕ್ಕಾಗಿ ತನ್ನದೇ ಆದ ದಾರಿ ನಿರ್ಮಾಣ ಮಾಡಿಕೊಳ್ಳುತ್ತದೆ. ಮತ್ತು ಅದನ್ನು ತನ್ನ ಜೀವಿತ ಅವಧಿ ಇರುವ ತನಕ ನೆನಪಿನಲ್ಲಿ ಇಟ್ಟುಕೊಳ್ಳುತ್ತದೆ. ತನ್ನ ಪೂರ್ವಜರು ನಡೆದ ದಾರಿ ಕೂಡ ಗುರುತಿಸುತ್ತದೆ. ಇದಕ್ಕೆ ಆನೆ ಕಾರಿಡಾರ್ ಎಂದು ಹೆಸರು 2023 ರ ಅಧ್ಯಯನ ಅಂಕಿ ಅಂಶದಂತೆ ಭಾರತದಲ್ಲಿ ಸುಮಾರು 150 ಕಾರಿಡಾರ್ ಇದೆ ಎಂದು ಕೇಂದ್ರ ಅರಣ್ಯ ಸಚಿವಾಲಯ ಹೇಳಿದೆ. ಇನ್ನು ಹೆಚ್ಚು ಇರಬಹುದು ಎಂದು ಅಭಿಪ್ರಾಯ ಪಟ್ಟಿದೆ.

ಬದುಕುವುದಕ್ಕಾಗಿ ಆಹಾರ;
ನಾನು ಮೊದಲೇ ಉಲ್ಲೇಖ ಮಾಡಿದಂತೆ ಆನೆ ತನ್ನ ದಿನದ ಬಹುಪಾಲು ಸಮಯವನ್ನು ಆಹಾರ ಸಂಗ್ರಹಣೆಗೆ ಮೀಸಲು ಇಡುತ್ತದೆ. ಮತ್ತು ದೈತ್ಯರಾಗಾತ್ರದ ಹೊಟ್ಟೆ ತುಂಬಿಸಲು ಸಾಹಸ ಪಡುತ್ತೇದೆ. ಆಹಾರಕ್ಕಾಗಿ ಎಂತಹ ದುಸ್ಸಾಹಸಕ್ಕೆ ಕೈ ಹಾಕಲು ಆನೆ ಹಿಂದೆ ನೋಡುವುದಿಲ್ಲ. ರೈಲೇ ಕಂಬಿ ಗಳ ಬೇಲಿಯನ್ನೇ ದಾಟಿ ಬಂದ ನಿದರ್ಶನ ಅನೇಕ ಇದೆ(ಉಲ್ಲೇಖಿತ). ಹಾಗು ಬೇಸಿಗೆ ಸಮಯದಲ್ಲಿ ನೀರಿನ ಮೂಲ ಇರುವ ಸ್ಥಳದ ಒಂದರಿಂದ ಒಂದು ಮುಕ್ಕಾಲು ಕಿ. ಮೀ ವ್ಯಾಪ್ತಿಯೊಳಗೆ ಬದುಕಲು ಪ್ರಯತ್ನ ಪಡುತ್ತದೆ.(ಉಲ್ಲೇಖಿತ).

ಹೀಗಿರುವಾಗ??;
ಭದ್ರಾ ಅಭಯಾರಣ್ಯ ದೊಳಗೆ ಆನೆ ವಿಹಾರಧಾಮ (ಎಲಿಫೆಂಟ್ ರಿಲೀಪ್ ಸೆಂಟರ್) ಸ್ಥಾಪಿಸಲು ಹೊರಟಿರುವುದು ಎಷ್ಟು ಸೂಕ್ತ??, ‘ಅಂದ ಹಾಗೆ ಚಪ್ಪಾಳೆ ತಟ್ಟಿದ ಜನರೇ..ಜನಪ್ರತಿನಿಧಿಗಳೇ ಆನೆ ಬಿಡಾರಕ್ಕೂ, ಸಕ್ರೀಬೈಲಿನಂತ ಸಾಕಾನೆ ಶಿಬಿರಕ್ಕೂ, ಭದ್ರಾ ಅಭಯಾರಣ್ಯದಲ್ಲಿ ಸ್ಥಾಪಿಸಲು ಹೊರಟಿರುವ ವಿಹಾರ ಧಾಮಕ್ಕೂ ಸಾಕಷ್ಟು ವ್ಯತ್ಯಾಸ ಇದೆ. ಇದನ್ನು ಗಮನಿಸಬೇಕು.


ಇದನ್ನೂ ಓದಿ; ಅಪ್ರಾಪ್ತ ದ್ವಿಚಕ್ರ ಚಾಲಕರಿಗೆ ಸಿಹಿ ಸುದ್ದಿ; ವಾಹನ ಚಲಾವಣೆಯಲ್ಲಿ ನಿಯಮ ಬದಲು- ಹೊಸ ನಿಯಮವೇನು..?


ಅಧ್ಯಯನ ವರದಿ ಏನು ಹೇಳುತ್ತದೆ?:
ನನಗೆ ಸಿಕ್ಕ ಮಾಹಿತಿ ಪ್ರಕಾರ ಭಾರತದಲ್ಲಿ ಪುನರ್ವಸತಿ ಗೊಂಡ ಆನೆಗಳ ಬಗ್ಗೆ ಸಾಕಷ್ಟು ಅಧ್ಯಯನ ನಡೆದಿಲ್ಲ. ಆಫ್ರಿಕಾ ದಲ್ಲಿ ಈ ಪ್ರಯತ್ನ ನಡೆದಿದ್ದು, ರಿಸರ್ಚ್ ಪೇಪರ್ ಆಗಿ ಕೂಡ ಮಂಡನೆ ಆಗಿದೆ. ಅದರ ಪ್ರಕಾರ “ ಪುನರ್ವಸತಿ ಗೊಂಡ ಯಾವ ಪ್ರಾಣಿ ಅಥವಾ ಮಾನವ ನೆಮ್ಮದಿಯಿಂದ ಬದುಕುವುದಿಲ್ಲ” ಎಂದು ಹೇಳಿದೆ. ಅದಕ್ಕೆ ಕಾರಣ ಒಂದು ನಿರ್ದಿಷ್ಟ ಪ್ರದೇಶದಲ್ಲಿ ವಾಸಿಸುವ ಒಂದು ಜೀವಿಯನ್ನು ಸೆರೆ ಹಿಡಿದು ಅದಕ್ಕೆ ತಿಳಿಯದ ಪ್ರದೇಶಕ್ಕೆ ಅಥವಾ ಸೆರೆಮನೆಗೆ ಹಾಕಿದರೆ ಅದು ಮೂಲ ಜಾಗದ ಬಗ್ಗೆಯೇ ಯೋಚನೆ ಮಾಡುತ್ತದೆ. ಅಪರಾಧ ಮಾಡಿದ ಕಾರಣಕ್ಕೆ ಮನುಷ್ಯನನ್ನು ಜೈಲಿಗೆ ಹಾಕಿದರೆ ಅವನ್ನು ಅಲ್ಲಿ ನೆಮ್ಮದಿ ಇಂದ ಇರಲು ಸಾದ್ಯವೇ. ಹಾಗೆ ಭದ್ರಾ ಅಭಯಾರಣ್ಯ ದೊಳಗೆ, ಸೆರೆ ಸಿಕ್ಕ ಆನೆಯನ್ನು ತಂದು ಬಿಟ್ಟರೆ ಅವು ನೆಮ್ಮದಿ ಇಂದ ಇರಲು ಸಾಧ್ಯವ? ಒಂದು ಅಧ್ಯಯನದ ಪ್ರಕಾರ ಕೀನ್ಯಾದ ಅಭಯಾರಣ್ಯ ಒಂದರಲ್ಲಿ 16 ಸೆರೆ ಹಿಡಿಯಲ್ಪಟ್ಟ ಆನೆಗಳನ್ನು ಎಲಿಪೆಂಟ್ ರೀಲಿಪ್ ಸೆಂಟರ್ ಒಳಗೆ ಬಿಟ್ಟು ಅವುಗಳಿಗೆ ಜಿಪಿಎಸ್ ಅಳವಡಿಸಿ ಅಧ್ಯಯನಕೆ ಒಳಪಡಿಸಿದಾಗ, 10 ಆನೆಗಳು ತಮ್ಮ ಮೂಲ ನೆಲೆಯ ಕಡೆ ಪ್ರಯಾಣ ಬೆಳಸಿದವು. ಉಳಿದವು ಸಾವನ್ನು ಅಪ್ಪಿದವು. ಅಧ್ಯಯನ ತಂಡ ವಿವರಿಸಿದಂತೆ. ಪ್ರತಿಯೊಂದು ಪ್ರಾಣಿಗೂ ತನ್ನದೇ ಆದ ಸರ ಹದ್ದು ಇರತ್ತದೆ. ಅದರೊಳಗೆ ತನ್ನ ಜಾತಿಯ ಇತರ ಪ್ರಾಣಿ ಬಂದರೆ ಅವುಗಳ ನಡುವೆ ಜಾಗಕ್ಕಾಗಿ ಕದನ ಏರ್ಪಡುತ್ತದೆ. ಹಾಗೂ ಸೋತ ಆನೆ ಪಲಾಯನ ಮಾಡಿ ಹೊಸ ಜಾಗಕ್ಕೆ ಹೋಗುತ್ತದೆ. ಕದನದಲ್ಲಿ ಕೆಲವೊಮ್ಮೆ ಸಾವು ಕೂಡ ಸಂಭವಿಸುತ್ತದೆ. ಮಾನಸಿಕವಾಗಿ ಕೂಡ ಕುಗ್ಗಲ್ಪಡುತ್ತದೆ. ಎಂದಿದ್ದಾರೆ. ಅದಲ್ಲದೆ ಆನೆಗಳಲ್ಲಿ ಸಂತಾನೋತ್ಪತ್ತಿ ಸಮಯದಲ್ಲಿ ಸಹಜವಾಗಿ ಬಲಿಷ್ಠ ಆನೆಯೊಂದಿಗೆ ಹೆಣ್ಣು ಆನೆ ಕೂಡುವುದರಿಂದ ಸಾಕಷ್ಟು ಕದನ ಏರ್ಪಡುತ್ತದೆ. ಆಗ ಅವುಗಳ ಬದುಕುವ ಜಾಗದ ವಿಸ್ತಾರ ಕೂಡ ಹೆಚ್ಚುತ್ತದೆ.

ಈಗ ಭದ್ರಾ ಅಭಯಾರಣ್ಯದ ಒಳಗೆ 2000 ಹೆಕ್ಟೇರ್ ಭೂಮಿ ಆನೆ ವಿಹಾರ ಧಾಮಕ್ಕೆ ಇಡುವುದಾಗಿ ಘೋಷಣೆ ಮಾಡಿದೆ. ಅಂಕಿ ಅಂಶದ ಪ್ರಕಾರ ಕನಿಷ್ಠ 445 ಆನೆ ಭದ್ರಾ ಅಭಯಾರಣ್ಯದ ಒಳಗೆ ಇದೆ ಎಂದು ವನ್ಯ ಜೀವಿ ಇಲಾಖೆ ಹೇಳಿದೆ. ಕನಿಷ್ಠ ಒಂದು ಆನೆಗೆ.5 ಹೆಕ್ಟೇರ್ ಭೂಮಿ ಅನ್ನುವುದೇ ಆದರೂ ಈಗ ಇರುವ ಆನೆಗಳಿಗೆ ಜಾಗ ಕೊರತೆ ಆಗಬಹುದು. ಒಂದು ಗಂಡು ಆನೆ ವರ್ಷಕ್ಕೆ 1000 ಕಿಮೀ ಚಲಿಸುತ್ತದೆ ಅಂದರೆ ಎಷ್ಟು ಜಾಗ ಬೇಕಾಗಬಹುದು ನೀವೇ ಊಹಿಸಿ. ? ಈಗಾಗಲೇ ಗುರುತಿಸಲ್ಪಟ್ಟ ಬಾಳೆಹೊನ್ನೂರು ಸಮೀಪ ಎಂದು ಭದ್ರಾ ವನ್ಯಜೀವಿ ವಿಭಾಗದ ಹಿರಿಯ ಅಧಿಕಾರಿ ಮಾದ್ಯಮದ ಮೂಲಕ ಹೇಳಿದ್ದಾರೆ.. ಈ ಬಾರಿ ಬಾಳೆಹೊನ್ನೂರು ಅಕ್ಕ ಪಕ್ಕ ಹಾಗು ಕೂಸ್ಕಲ್ ರಕ್ಷಿತಾ ಅರಣ್ಯದ ಅಸುಪಾಸಿನ ಜನರು ಎಷ್ಟು ಸಂಕಷ್ಟ ಪಟ್ಟಿದ್ದಾರೆ ಎಂಬುದನ್ನು ಮಾದ್ಯಮ ಕೂಡ ಪ್ರಕಟ ಮಾಡಿದೆ.

ಈ ಹಿಂದೆ ಭದ್ರಾ ಹಿನ್ನೀರಿಗಾಗಿ ನಾವು ಜಾಗ ಕಳೆದು ಕೊಂಡಿದ್ದೇವೆ. ಇವರ ಹಣೆ ಬರಹಕ್ಕೆ 1956 ರಲ್ಲಿ ರಿಲೀಸ್ ಆಗಿರುವ ಜಾಗಕ್ಕೆ ಇನ್ನೂ ಪಕ್ಕ ಪೋಡ್ ಮಾಡಿ ಕೊಡಲು ಆಗಿಲ್ಲ. ಇನ್ನೂ ಪಹಣಿಯಲ್ಲಿ ಕೇಂದ್ರ ಮೀಸಲು ಅರಣ್ಯ ಎಂದೇ ಬರುತ್ತಿರುವ ಸಂಕಟದಲ್ಲಿ ಇಲ್ಲಿನ ಮೂಲ ನಿವಾಸಿಗಳು ಇದ್ದಾರೆ. ಭದ್ರಾ ಹುಲಿ ಯೋಜನೆ ಅತ್ಯಂತ ಯಶಸ್ವಿ ಪುನರ್ವಸತಿ ಪ್ಯಾಕೇಜ್ ಎನ್ನುವ ಅಧಿಕಾರಿಗಳೇ,, ಅಧ್ಯಯನ ಮಾಡಿ ನೋಡಿ ಬಹುತೇಕ ಕುಟುಂಬಗಳು ಇನ್ನೂ ನೆಮ್ಮದಿ ಪಡೆದುಕೊಂಡಿಲ್ಲ. ನಿಮ್ಮ ಪ್ರಕಾರ ಕೊಡುವ ದುಡ್ಡು ನೆಮ್ಮದಿಯ ಕೇಂದ್ರವು ಅಲ್ಲ. ಆಗಲೂ ಜಾಗ ಕಳೆದು ಕೊಂಡಿದ್ದೇವೆ. ಈಗ ಮತ್ತೆ ಅನೆ ವಿಹಾರ ಧಾಮ ಮಾಡಲು ಹೊರಟಿದ್ದೇವೆ. ಪ್ರಶ್ನಿಸಬೇಕಿದ್ದ ವಿರೋಧ ಮಾಡಬೇಕಿದ್ದ ಜನ ಪ್ರತಿನಿಧಿ ಕೂಡ ಚಪ್ಪಾಳೆ ತಟ್ಟಿ ಸ್ವಾಗತ ಮಾಡಿದ್ದಾರೆ. ನಿಮ್ಮನ್ನು ಮತ ಹಾಕಿ ಗೆಲ್ಲಿಸಿದ್ದು ಇಲ್ಲಿನ ಜನರು ಕಾಡು ಪ್ರಾಣಿಗಳು ಅಲ್ಲ ಎಂಬುದನ್ನು ಮರೆಯಬಾರದು.


ಇದನ್ನೂ ಓದಿ; ಅನ್ನಭಾಗ್ಯ ಯೋಜನೆ ಫಲಾನುಭವಿಗಳಿಗೆ ಗುಡ್ ನ್ಯೂಸ್; ಈ ದಿನ ಅಕ್ಕಿ ಹಣ ಖಾತೆಗೆ ಜಮಾ!


ಈಗಾಗಲೇ ಅರಣ್ಯ ಇಲಾಖೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಕೆಲಸಗಾರರಿಗೆ ಸರಿಯಾಗಿ ಸಂಬಳ ಕೊಡಲು ಆಗುತ್ತಿಲ್ಲ. ಬೆಂಕಿ ಬಿದ್ದರೆ ನಂದಿಸಲು ನಿಮ್ಮ ಬಳಿ ಆಧುನಿಕ ಉಪಕರಣ ಇಲ್ಲಾ. ಆನೆ ಅಥವಾ ವನ್ಯ ಜೀವಿ ಊರಿನ ಕಡೆ ಬರುತ್ತಿದ್ದರೆ. ಅದನ್ನು ಟ್ರ್ಯಾಕ್ ಮಾಡಿ ಜನರಿಗೆ ಮಾಹಿತಿ ಕೊಡಲು ನಿಮ್ಮಂದ ಸಾದ್ಯ ಆಗುತ್ತಿಲ್ಲ. ವನ್ಯ ಜೀವಿ ಅಭಯಾರಣ್ಯದಲ್ಲಿ ಹಲಸಿನ ಗಿಡ,ಹುಲ್ಲು, ಬಿದಿರು ನೆಟ್ಟು ಆನೆ ಗಳಿಗೆ ಆಹಾರ ಒದಗಿಸುತ್ತೇವೆ ಎನ್ನುತ್ತೀರಲ್ಲ. ಬೇಸಿಗೆ ಸಮಯ ಭದರ ಹಿನ್ನೀರ ಪಕ್ಕ ಪ್ರತ್ಯಕ್ಷ ಆಗುವ ಆನೆ ಹಿಂಡಿನ ಕಾರಣ ಏನು? ರೈತರ ತೋಟಕ್ಕೆ ಬರುವುದಾದರೂ ಏಕೆ? ಅಸಮರ್ಪಕ ಆಹಾರ ಮತ್ತು ನೀರಿನ ಕೊರತೆ ತಾನೇ? ಹಲಸಿನ ಮರ ನೆಟ್ಟು ಹಣ್ಣು ಬಿಡಲು ಎಷ್ಟು ವರ್ಷ ಕಾಯಬೇಕು ಸ್ವಾಮಿ? ಬೇಸಿಗೆಯಲ್ಲಿ ಹುಲ್ಲು ಬೆಳೆಯಲು ಅಭಯಾರಣ್ಯದ ಒಳಗೆ ತುಂತುರು ನೀರಾವರಿ ಪದ್ಧತಿ ಏನಾದರೂ ಮಾಡುತ್ತೀರಾ? ಅಂದ ಹಾಗೆ ಎರಡು ಸಾವಿರ ಹೆಕ್ಟೇರ್ ಜಾಗಕ್ಕೆ ರೈಲ್ವೆ ಕಂಬಿ ಅಳವಡಿಸಿ ಬೇಲಿ ಮಾಡುವುದಕ್ಕೆ ಬೇಕಾದ ಮೊತ್ತ ಎಷ್ಟು.? ಈಗಾಗಲೇ ಕೇಂದ್ರದಿಂದ ಹುಲಿ ಯೋಜನೆಯ ಎರಡನೇ ಮೂರನೇ ಕಂತು ಬಂದಿಲ್ಲ ಎನ್ನುತ್ತ ಇರುವಾಗಲೇ ಇದಕ್ಕೆಲ್ಲ ದುಡ್ಡು ಹೊಂದಿಸದೆ ಯೋಜನೆ ಜಾರಿ ಮಾಡಲು ಹೊರಟಿದ್ದು ಹಾಸ್ಯಾಸ್ಪದ ಅಲ್ಲವೇ ??.

ಈ ಭಾಗದ ನಾಗರಿಕರೇ ಇನ್ನೂ ಮಲೆನಾಡಿಗರು ಎಚ್ಚೆತ್ತು ಕೊಳ್ಳದೆ ಹೋದರೆ ನಮ್ಮನ್ನು ನುಂಗಿ ಬಿಡುತ್ತಾರೆ. ಹೇಳುತ್ತೇನೆ ಕೇಳಿ 1951 ರಲ್ಲಿ 124.63 ಚದರ ಕಿಮೀ ಇದ್ದ ಅಭಯಾರಣ್ಯ ಜಾಗ, 1974 ರಲ್ಲಿ 492.42 ಚದರ ಕಿಮೀ ಹೆಚ್ಚಳ ಆಯಿತು. ಪ್ರಸ್ತುತ 500.16.ಚದರ ಕಿಮೀ. ಹುಲಿ ಆವಾಸ ಸ್ಥಾನ(ಕೋರ್) 571.84ಚ ಕಿಮೀ ಬಫರ್ ರೋನ್ ಇದೆ. ವರ್ಷದಿಂದ ವರ್ಷಕ್ಕೆ ಜಾಗ ಹೆಚ್ಚಳ ಆಗುತ್ತಲೇ ಹೋಗಿದೆ. ಈಗ 2000 ಹೆಕ್ಟೇ‌ರ್ ಜಾಗ ಆನೆಗೆ ಎಂದು ವಿಸ್ತರಣೆ ಮಾಡಿದ್ದೀರಿ. ಮುಂದೆ ಆನೆ ಸಂಖ್ಯೆ ಹುಲಿ ಸಂಖ್ಯೆ ಹೆಚ್ಚಳ ಆದಂತೆ, ಅಭಯಾರಣ್ಯದ ಜಾಗ ವಿಸ್ತರಣೆ ಮಾಡುವುದಿಲ್ಲ ಎನ್ನುವ ಖಾತ್ರಿ ಯಾವುದು.? ಹಾಗಾದರೆ ಅಭಯಾರಣ್ಯದ ಅಂಚೆಗೆ ವಾಸಿಸುತ್ತಿರುವ ಈಗಾಗಲೇ ವನ್ಯ ಜೀವಿ ಹಾಗು ವನ್ಯಜೀವಿ ಪರಿಪಾಲಕರಿಂದ ಸಾಕಷ್ಟು ನೋವು ಅನುಭವಿಸುತ್ತಾ ಇರುವ ನಾವು ಏನು ಮಾಡಬೇಕು? ಆನೆ ಹುಲಿ ಜೀವಕ್ಕೆ ಬೆಲೆ ಕೊಡುವ ನೀವು ಇಲ್ಲಿ ವಾಸಿಸುವ ಮಾನವನಿಗೆ ಯಾಕೆ ಅವನಿಗೆ ಬದುಕುವ ಹಕ್ಕಿದೆ ಎಂದು ಯೋಚಿಸುತ್ತಾ ಇಲ್ಲಾ, ರಸ್ತೆ ಶಾಲೆ,ವಿದ್ಯುತ್, ಆರೋಗ್ಯ, ಮುಂತಾದ ಮೂಲ ಸೌಲಭ್ಯ ಇಲ್ಲದೆ ಬದುಕುತ್ತಿರುವ ಮಲೆನಾಡಿಗರ ಬದುಕು ನಿಮಗೆ ಯಾಕೆ ಕಾಣಿಸುತ್ತಿಲ್ಲ. ಮಲೆನಾಡಿಗಾರೆ ಇದು ಭದ್ರಾ ಅಭಯಾರಣ್ಯದ ಅಂಚಿನ ಜನರ ಸಮಸ್ಯೆ ಎಂದು ಕೈ ಕಟ್ಟಿ ಕೂರಬೇಡಿ. ಹಿಂದೆ ಜಯಪುರ ಬಳಿ ಹಿಡಿದ ಆನೆಯ ಟ್ರ್ಯಾಕ್ ರೆಕಾರ್ಡ್ ಆಗಲಿ. ಕೇರಳದಲ್ಲಿ ಆನೆ ದಾಳಿ ಇಂದ ಸತ್ತ ವ್ಯಕ್ತಿಗೆ ಕರ್ನಾಟಕ ಸರಕಾರ ಪರಿಹಾರ ಕೊಡುವ ಗೊಂದಲವಾಗಲಿ ನೋಡಿದರೆ, ಆನೆ ಬೇಲಿ ಒಳಗೆ ಕೂರಲು ಸಾಕಿದ ಕುರಿ ಮರಿ ಅಲ್ಲ. ನೆನಪಿಡಿ

ಇತ್ತ ತಂದು ಬಿಡುವ ಆನೆಗಳಿಗೂ ಇಲ್ಲಿ ಈಗಾಗಲೇ ಇರುವ ಆನೆಗಳಿಗೂ, ಇಲ್ಲಿನ ಜನರಿಗೂ ನೆಮ್ಮದಿ ಕೊಡದ ಆನೆ ವಿಹಾರ ಧಾಮ ಬೇಕ?? ಎಂದು ಯೋಚಿಸಬೇಕಿದೆ. ಪ್ರಶ್ನಿಸಬೇಕಿದೆ. ವಿರೋದಿಸಬೇಕಿದೆ?. ಅಂದ ಹಾಗೆ ಈ ಯೋಜನೆಯನ್ನು ಸಮರ್ಥಿಸುವ ಯಾರು ಈ ಹಳ್ಳಿಯಲ್ಲಿ ಬಂದು ಜಿಗಣೆ ನವಿಲು,ಮಂಗ. ವನ್ಯ ಪ್ರಾಣಿ. ಆನೆ ಮಳೆ,ಬಿಸಿಲಿಗೆ ಒಣಗಿದ ಸಂತ್ರಸ್ಥರಲ್ಲ. ನಗರದಲ್ಲಿ ಬೆಚ್ಚಗೆ ಕುಳಿತವರು ಮಾತ್ರ . – ರತ್ನಾಕರ ಗಡಿಗೇಶ್ವರ, ಕೃಷಿಕರು ಹಾಗೂ ಸಾಮಾಜಿಕ ಚಿಂತಕರು

 

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.