ಒಡಹುಟ್ಟಿದ ತಮ್ಮನನ್ನೇ ದೊಣ್ಣೆಯಿಂದ ಹೊಡೆದು ಕೊಂದ ಅಣ್ಣ!

ಆನಂದಪುರ: (ನ್ಯೂಸ್ ಮಲ್ನಾಡ್ ವರದಿ) ಬ್ಯಾಂಕ್ ಸಾಲದ ನೋಟಿಸ್ ಬಂದ ವಿಚಾರಕ್ಕೆ ಸಂಬಂಧಿಸಿದಂತೆ ಉಂಟಾದ ಹಳೇ ದ್ವೇಷದ ಹಿನ್ನೆಲೆ, ಒಡಹುಟ್ಟಿದ ಅಣ್ಣನೇ ತನ್ನ ತಮ್ಮನಿಗೆ ದೊಣ್ಣೆಯಿಂದ ಭೀಕರವಾಗಿ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ಆನಂದಪುರ ಸಮೀಪದ ಮಾದರಸನಕೊಪ್ಪ ಗ್ರಾಮದಲ್ಲಿ ಸಂಭವಿಸಿದೆ.

ಅಣ್ಣನ ಮಾರಣಾಂತಿಕ ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಮ್ಮ ರಾಘವೇಂದ್ರ (39) ಚಿಕಿತ್ಸೆ ಫಲಿಸದೆ ಜೂನ್ 9ರಂದು ಮುಂಜಾನೆ ಕೊನೆಯುಸಿರೆಳೆದಿದ್ದಾರೆ.

ಕೊಲೆಗೆ ಕಾರಣವಾದ ಬ್ಯಾಂಕ್ ಸಾಲದ ನೋಟಿಸ್‌!:
ಮಾದರಸನಕೊಪ್ಪ ಗ್ರಾಮದ ನಿವಾಸಿಗಳಾದ ಮಹೇಶ (49) ಮತ್ತು ರಾಘವೇಂದ್ರ (39) ಇಬ್ಬರೂ ಸಹೋದರರು. ಅಣ್ಣ ಮಹೇಶನ ಹೆಸರಿಗೆ ಬ್ಯಾಂಕ್ ಲೋನ್ ವಿಚಾರವಾಗಿ ಇತ್ತೀಚೆಗೆ ಬ್ಯಾಂಕಿನಿಂದ ನೋಟಿಸ್ ಬಂದಿತ್ತು. ಈ ನೋಟಿಸ್ ವಿಚಾರವಾಗಿ ಇಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಿ, ಮಹೇಶ್ ತನ್ನ ತಮ್ಮ ರಾಘವೇಂದ್ರನ ಮೇಲೆ ತೀವ್ರ ದ್ವೇಷ ಸಾಧಿಸುತ್ತಿದ್ದ ಎನ್ನಲಾಗಿದೆ.

ಕಳೆದ ಮೇ 23ರಂದು ರಾತ್ರಿ 10:30ರ ಸುಮಾರಿಗೆ ರಾಘವೇಂದ್ರ ಅವರು ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ, ನಡುರಸ್ತೆಯಲ್ಲೇ ಹೊಂಚು ಹಾಕಿ ಕುಳಿತಿದ್ದ ಅಣ್ಣ ಮಹೇಶ, ತಮ್ಮನನ್ನು ಅಡ್ಡಗಟ್ಟಿದ್ದಾನೆ. ಈ ವೇಳೆ ಜಗಳ ತೆಗೆದು, ಕೆಟ್ಟದಾಗಿ ಬೈದು ದೊಣ್ಣೆಯಿಂದ ರಾಘವೇಂದ್ರನ ತಲೆ ಹಾಗೂ ದೇಹದ ಭಾಗಗಳಿಗೆ ಮನಬಂದಂತೆ ಭೀಕರವಾಗಿ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.

ಹಲ್ಲೆಯಿಂದ ರಕ್ತದ ಮಡುವಿನಲ್ಲಿ ಬಿದ್ದು ತೀವ್ರವಾಗಿ ಗಾಯಗೊಂಡಿದ್ದ ರಾಘವೇಂದ್ರ ಅವರನ್ನು ತಕ್ಷಣವೇ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಹಾಗೂ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ತಲೆಗೆ ಬಲವಾದ ಪೆಟ್ಟು ಬಿದ್ದಿದ್ದರಿಂದ ಅವರು ಗುಣಮುಖರಾಗುವ ಲಕ್ಷಣಗಳು ಕಂಡುಬಂದಿರಲಿಲ್ಲ. ಆ ಬಳಿಕ ವೈದ್ಯರ ಸಲಹೆಯಂತೆ ಮನೆಗೆ ಕರೆತಂದು ಆರೈಕೆ ಮಾಡಲಾಗುತ್ತಿತ್ತಾದರೂ, ಜೂನ್ 9ರಂದು ಮುಂಜಾನೆ ಚಿಕಿತ್ಸೆ ಫಲಿಸದೇ ರಾಘವೇಂದ್ರ ಮನೆಯಲ್ಲೇ ಮೃತಪಟ್ಟಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಆನಂದಪುರ ಪೊಲೀಸ್ ಠಾಣೆಯಲ್ಲಿ ಕೊಲೆ ಮೊಕದ್ದಮೆ ದಾಖಲಾಗಿದ್ದು, ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿ ಅಣ್ಣ ಮಹೇಶನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.