
ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಜಯ ಭಾರತೀ ವಿದ್ಯಾಲಯ, ಶೃಂಗೇರಿಯಲ್ಲಿ 2026-27ನೇ ಶೈಕ್ಷಣಿಕ ಸಾಲಿನ ಪ್ರತಿಭಾನ್ವೇಷಣೆ, ಶಾಲಾ ವಿದ್ಯಾರ್ಥಿ ನಾಯಕ ಹಾಗೂ ಉಪನಾಯಕರ ಪ್ರತಿಜ್ಞಾವಿಧಿ ಸ್ವೀಕಾರ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭವನ್ನು ವಿಜೃಂಭಣೆಯಿಂದ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಆಡಳಿತ ಮಂಡಳಿಯ ಖಜಾಂಚಿಗಳಾದ ಜೆಸಿ ಎಚ್.ಎನ್. ವಿಶ್ವೇಶ್ವರ್ ವಹಿಸಿದ್ದರು. ವಿದ್ಯಾರ್ಥಿಗಳಲ್ಲಿ ಅಡಗಿರುವ ಸೂಕ್ತ ಪ್ರತಿಭೆಗಳನ್ನು ಅನಾವರಣಗೊಳಿಸಲು ಶಾಲೆಯು ಈ ವೇದಿಕೆಯನ್ನು ಕಲ್ಪಿಸಿದ್ದು, ಎಲ್ಲ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಬೇಕು ಎಂದು ಅವರು ಕರೆ ನೀಡಿದರು.

ಶೃಂಗೇರಿ ಜೆಸಿಐ ಅಧ್ಯಕ್ಷರಾದ ಜೆಸಿ ಕಾವ್ಯಶ್ರೀ ಅವರು ಜ್ಯೋತಿ ಬೆಳಗುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಭೆಯಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ವಿನಯ್ ಸಿ.ಜಿ. ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ನಿನ್ನೆ ನಡೆದ ಬ್ಯಾಲೆಟ್ ಪೇಪರ್ ಮಾದರಿಯ ಮತದಾನದಲ್ಲಿ ಆಯ್ಕೆಯಾದ ಶಾಲಾ ವಿದ್ಯಾರ್ಥಿ ನಾಯಕಿ ಹತ್ತನೇ ತರಗತಿಯ ರಂಜಿತಾ ಹಾಗೂ ವಿದ್ಯಾರ್ಥಿ ಉಪನಾಯಕನಾಗಿ ಆಯ್ಕೆಯಾದ ಒಂಬತ್ತನೇ ತರಗತಿಯ ಹರ್ಷ ಡಿ.ಎಚ್. ಅವರಿಗೆ ಪ್ರತಿಜ್ಞಾವಿಧಿ ಸ್ವೀಕಾರ ಕಾರ್ಯಕ್ರಮ ನಡೆಯಿತು. ಶಾಲಾ ಆಡಳಿತ ಮಂಡಳಿಯ ಖಜಾಂಚಿ ಜೇಸೀ ಎಚ್.ಎನ್. ವಿಶ್ವೇಶ್ವರ್ ಅವರು ನೂತನ ವಿದ್ಯಾರ್ಥಿ ನಾಯಕರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
ಕಾರ್ಯಕ್ರಮವನ್ನು ವಿದ್ಯಾರ್ಥಿನಿಯರಾದ ಅವನಿ ಮತ್ತು ಪುಣ್ಯ ನಿರೂಪಿಸಿದರು. ಆಪ್ತಿ ಸ್ವಾಗತಿಸಿ, ವರ್ಷಿಣಿ ವಂದಿಸಿದರು. ಶಾಲೆಯ ಶಿಕ್ಷಕ ವೃಂದ, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.












