ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಜಮೀನಿನ ಸರ್ವೇ ಮಾಡಿ ಸ್ಕೆಚ್ ಮಾಡಿಕೊಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಮೂಡಿಗೆರೆ ತಾಲೂಕಿನ ಎ.ಡಿ.ಎಲ್.ಆರ್. (ADLR) ಕಚೇರಿಯ ಸರ್ಕಾರಿ ಸರ್ವೇಯರ್ ಸುಮಾ ಎಂಬುವವರು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಕಚೇರಿಯಲ್ಲೇ ಲಂಚದ ಹಣ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ದೇವವೃಂದ ಗ್ರಾಮದ ನಿವಾಸಿ ಮಂಜುನಾಥ್ ಎಂಬವರು ತಮ್ಮ ಜಮೀನಿನ ಸರ್ವೇ ನಡೆಸಿ ಸ್ಕೆಚ್ ಮಾಡಿಕೊಡುವಂತೆ ಮೂಡಿಗೆರೆ ಪಟ್ಟಣದ ಎ.ಡಿ.ಎಲ್.ಆರ್. ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಈ ಕೆಲಸ ಮಾಡಿಕೊಡಲು ಸರ್ಕಾರಿ ಸರ್ವೇಯರ್ ಸುಮಾ ಅವರು ಮಂಜುನಾಥ್ ಅವರ ಬಳಿ 20 ಸಾವಿರ ರೂ. ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು. ಈ ಕುರಿತು ಮಂಜುನಾಥ್ ಅವರು ಚಿಕ್ಕಮಗಳೂರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.

ದೂರಿನ ಅನ್ವಯ ಜೂ. 10ರ ಬುಧವಾರ ಲೋಕಾಯುಕ್ತ ಡಿವೈಎಸ್.ಪಿ ತಿರುಮಲೇಶ್ ಅವರ ನೇತೃತ್ವದ ತಂಡ ಮೂಡಿಗೆರೆಯ ಎ.ಡಿ.ಎಲ್.ಆರ್. ಕಚೇರಿಯ ಮೇಲೆ ನಿಗಾ ಇಟ್ಟಿತ್ತು. ಮಂಜುನಾಥ್ ಅವರಿಂದ ಮೊದಲ ಕಂತಿನ ರೂಪದಲ್ಲಿ 15 ಸಾವಿರ ರೂ. ಲಂಚದ ಹಣ ಪಡೆಯುತ್ತಿದ್ದಾಗ ಸರ್ವೇಯರ್ ಸುಮಾ ಅವರನ್ನು ಲೋಕಾಯುಕ್ತ ಅಧಿಕಾರಿಗಳು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.
ಲೋಕಾಯುಕ್ತ ಪೊಲೀಸರು ಲಂಚದ ಹಣವನ್ನು ವಶಪಡಿಸಿಕೊಂಡಿದ್ದು, ಆರೋಪಿ ಸುಮಾ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.












