ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ತಾಯಿಯ ಮೇಲೆ ಕುಡಿದ ಮತ್ತಿನಲ್ಲಿ ಹಲ್ಲೆ ಮಾಡಿದ ತಂದೆಯನ್ನು ಮಗನೇ ಕೊಲೆ ಮಾಡಿ, ಬಳಿಕ ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದಾರೆ ಎಂದು ನಾಟಕವಾಡಿದ ಘಟನೆ ಚಿಕ್ಕಮಗಳೂರು ತಾಲೂಕಿನ ಮರ್ಲೆ ಸಮೀಪದ ಹನುಮನಹಳ್ಳಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಮೃತರನ್ನು 50 ವರ್ಷದ ಕೆಂಚೇಗೌಡ ಎಂದು ಗುರುತಿಸಲಾಗಿದೆ. ಆರೋಪಿ ಮಗ ಕುಮಾರ್ (22)ನನ್ನು ಚಿಕ್ಕಮಗಳೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

ಏನಿದು ಘಟನೆ:
ಜೂನ್ 10ರ ಸಂಜೆ ಕೆಂಚೇಗೌಡ ಮತ್ತು ಪತ್ನಿ ರಾಜಮ್ಮ ನಡುವೆ ಗಲಾಟೆ ನಡೆದಿದ್ದು, ಮದ್ಯದ ಅಮಲಿನಲ್ಲಿ ಕೆಂಚೇಗೌಡ ಪತ್ನಿಯ ಮೇಲೆ ಹಲ್ಲೆ ನಡೆಸಿದ್ದರು. ಗಾಯಗೊಂಡ ರಾಜಮ್ಮ ಅವರನ್ನು ಮಗ ಕುಮಾರ್ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ ಮನೆಗೆ ಕರೆತಂದಿದ್ದನು.

ಆದರೆ ಮನೆಗೆ ಮರಳಿದ ಬಳಿಕವೂ ಕೆಂಚೇಗೌಡ ಪತ್ನಿಯ ಮೇಲೆ ಹಲ್ಲೆ ಮುಂದುವರಿಸಿದ್ದಾನೆ ಎನ್ನಲಾಗಿದೆ. ಇದರಿಂದ ಆಕ್ರೋಶಗೊಂಡ ಕುಮಾರ್, ಮರದ ಮಣೆಯಿಂದ ತಂದೆಯ ತಲೆ ಹಾಗೂ ಮುಖದ ಭಾಗಕ್ಕೆ ಹೊಡೆದಿದ್ದಾನೆ. ಗಂಭೀರವಾಗಿ ಗಾಯಗೊಂಡ ಕೆಂಚೇಗೌಡನನ್ನು ಹಾಸನದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲು ಯತ್ನಿಸಿದ ವೇಳೆ ಮಾರ್ಗಮಧ್ಯೆಯೇ ಅವರು ಮೃತಪಟ್ಟಿದ್ದಾರೆ.
ಇದಾದ ಬಳಿಕ ಘಟನೆ ಮುಚ್ಚಿಹಾಕಲು ಕುಮಾರ್ ಹಾಗೂ ರಾಜಮ್ಮ, ಕೆಂಚೇಗೌಡ ಮನೆ ಸಮೀಪ ಬೈಕ್‌ನಲ್ಲಿ ಹೋಗುವಾಗ ಬಿದ್ದು ಗಾಯಗೊಂಡಿದ್ದಾರೆ ಎಂದು ಪೊಲೀಸರ ಮುಂದೆ ಹೇಳಿಕೆ ನೀಡಿದ್ದರು. ಆದರೆ ಮೃತದೇಹದ ಮೇಲಿದ್ದ ಗಾಯಗಳ ಸ್ವರೂಪ ಕಂಡ ಪೊಲೀಸರಿಗೆ ಅನುಮಾನ ಮೂಡಿದ್ದು, ತನಿಖೆ ನಡೆಸಿದ ವೇಳೆ ಕೊಲೆ ಪ್ರಕರಣ ಎಂಬುದು ಬಹಿರಂಗವಾಗಿದೆ.
ಆರಂಭದಲ್ಲಿ ಮಗನನ್ನು ರಕ್ಷಿಸಲು ಮುಂದಾದ ರಾಜಮ್ಮ, “ನನ್ನ ಮೇಲೆ ಹಲ್ಲೆ ಮಾಡುತ್ತಿದ್ದ ಗಂಡನನ್ನು ನಾನೇ ಹೊಡೆದು ಕೊಂದಿದ್ದೇನೆ, ಮಗನಿಗೆ ಸಂಬಂಧ ಇಲ್ಲ, ನನ್ನನ್ನು ಜೈಲಿಗೆ ಕಳುಹಿಸಿ” ಎಂದು ಪೊಲೀಸರ ಮುಂದೆ ಹೇಳಿದ್ದಾರಂತೆ. ಆದರೆ ವಿಚಾರಣೆ ವೇಳೆ ಕುಮಾರ್ ಕೃತ್ಯ ಬೆಳಕಿಗೆ ಬಂದಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಪ್ರಕರಣ ಸಂಬಂಧ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.













