ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ತಾಲೂಕಿನ ಹಲಗಾರ್–ಅಲಂದೂರು ರಸ್ತೆಯಲ್ಲಿರುವ ಕೃಷ್ಣಪ್ಪ ಅವರ ಜಾಗದ ಬಾವಿಗೆ ಬಿದ್ದಿದ್ದ ಎರಡು ಹೋರಿಗಳನ್ನು ಶೃಂಗೇರಿ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ.
ಸುಮಾರು 10 ಅಡಿ ಅಗಲ ಹಾಗೂ 20 ಅಡಿ ಆಳದ ಬಾವಿಯಲ್ಲಿ ನೀರು ಮತ್ತು ಕೆಸರು ತುಂಬಿಕೊಂಡಿದ್ದರಿಂದ ಹೋರಿಗಳ ರಕ್ಷಣೆ ಕಾರ್ಯಾಚರಣೆ ಸವಾಲಿನದ್ದಾಗಿತ್ತು. ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ, ಪಶುವೈದ್ಯರು ಹಾಗೂ ಸ್ಥಳೀಯರ ಸಹಕಾರದೊಂದಿಗೆ ಹಗ್ಗ ಮತ್ತು ವಿಶೇಷ ರಕ್ಷಣಾ ಉಪಕರಣಗಳನ್ನು ಬಳಸಿ ಎರಡೂ ಹೋರಿಗಳನ್ನು ಸುರಕ್ಷಿತವಾಗಿ ಮೇಲಕ್ಕೆತ್ತುವಲ್ಲಿ ಯಶಸ್ವಿಯಾದರು.

ಕಾರ್ಯಾಚರಣೆಯಲ್ಲಿ ಶೃಂಗೇರಿ ಅಗ್ನಿಶಾಮಕ ಠಾಣೆಯ ಪ್ರಮುಖರಾದ ಸತೀಶ್, ರಾಜೇಶ್ ವಿ.ಜಿ., ಮೋಹನ್ ರಾಜ್, ಯಮನಪ್ಪ ಪಿ. ಛಲವಾದಿ, ಸುನಿಲ್ ಎಸ್. ತಂಡೇಲಾ ಹಾಗೂ ಶಿವಾನಂದ ವಿ. ಭಾಗವಹಿಸಿ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಿರ್ವಹಿಸಿದರು.
















