ಬಾಳೆಹೊನ್ನೂರು: (ನ್ಯೂಸ್ ಮಲ್ನಾಡ್ ವರದಿ) ಹಳ್ಳಿಗಳ ಮನೆಗಳಿಗೆ ತೆರಳಿ ಅನಾರೋಗ್ಯ ಪೀಡಿತರಿಗೆ ಔಷಧಿ ಹಾಗೂ ಸರ್ಕಾರಿ ಸೌಲಭ್ಯಗಳನ್ನು ಒದಗಿಸುವುದಾಗಿ ನಂಬಿಸಿ ಹಣ ಪಡೆದು ವಂಚನೆ ಮಾಡುತ್ತಿದ್ದ ಏಳು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದು, ಸಂಬಂಧಪಟ್ಟವರಿಗೆ ಹಣವನ್ನು ವಾಪಸ್ಸು ಕೊಡಿಸಿದ್ದಾರೆ.
ಕೊಪ್ಪ ತಾಲ್ಲೂಕಿನ ಹೇರೂರು ಗ್ರಾಮದ ವೀರಗಲ್ಲುಮಕ್ಕಿ, ಹೀರೇಗದ್ದೆ ಸೇರಿದಂತೆ ನಾಲ್ಕು ಕಡೆಗಳಿಗೆ ತೆರಳಿದ್ದ ವಂಚಕರು, ಔಷಧಿ ನೀಡುವುದಾಗಿ ಹಾಗೂ ಸರ್ಕಾರದಿಂದ ಸೌಲಭ್ಯ ದೊರಕಿಸಿಕೊಡುವುದಾಗಿ ಹೇಳಿ ಗ್ರಾಮಸ್ಥರಿಂದ ಸಾವಿರಾರು ರೂಪಾಯಿ ಹಣ ಪಡೆದುಕೊಂಡಿದ್ದರು. ಬಳಿಕ ಮೊಬೈಲ್ ಫೋನ್‌ಗಳನ್ನು ಸ್ವಿಚ್ ಆಫ್ ಮಾಡಿಕೊಂಡು ಪರಾರಿಯಾಗಿದ್ದರು ಎಂದು ತಿಳಿದುಬಂದಿದೆ.

ಈ ಕುರಿತು ಸ್ಥಳೀಯರು ಪೊಲೀಸ್ ಠಾಣೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ತನಿಖೆ ಕೈಗೊಂಡ ಪೊಲೀಸರು, ಶಿವಮೊಗ್ಗ ಸಮೀಪದ ಸಿದ್ದಾಪುರ ಮೂಲದ ಏಳು ಮಂದಿಯನ್ನು ಪತ್ತೆಹಚ್ಚಿ ಬಾಳೆಹೊನ್ನೂರಿಗೆ ಕರೆತಂದಿದ್ದರು.

ಹಣ ಕಳೆದುಕೊಂಡವರು ಠಾಣೆಗೆ ಆಗಮಿಸಿ, ಪೊಲೀಸರ ಸಮ್ಮುಖದಲ್ಲಿ ವಂಚಕರಿಂದ ತಮ್ಮ ಹಣವನ್ನು ವಾಪಸ್ಸು ಪಡೆದುಕೊಂಡರು. ಇಂತಹ ವಂಚನೆ ಪ್ರಕರಣಗಳು ಮರುಕಳಿಸಿದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಯಾವುದೇ ಸಮಯದಲ್ಲಿ ಕರೆದರೂ ಠಾಣೆಗೆ ಹಾಜರಾಗಬೇಕು ಎಂದು ಸೂಚನೆ ನೀಡಿ, ಠಾಣಾಧಿಕಾರಿ ಅಂಬರೀಷ್ ಆರೋಪಿಗಳಿಂದ ಹೇಳಿಕೆ ಪಡೆದು ಪ್ರಕರಣವನ್ನು ಇತ್ಯರ್ಥಗೊಳಿಸಿದರು.













