ಬಾಳೆಹೊನ್ನೂರು: (ನ್ಯೂಸ್ ಮಲ್ನಾಡ್ ವರದಿ) ಮಲೆನಾಡು ನಾಗರಿಕ ರೈತ ಹಿತರಕ್ಷಣಾ ಸಮಿತಿ ಶೃಂಗೇರಿ ಕ್ಷೇತ್ರ ವತಿಯಿಂದ ಮಲೆನಾಡಿನ ಜ್ವಲಂತ ಸಮಸ್ಯೆಗಳ ಕುರಿತು ಮತ್ತು ರೈತ ಹೋರಾಟದ ಕೇಸ್ ವಿಚಾರದಲ್ಲಿ ಬಾಳೆಹೊನ್ನೂರಿನ ನಾರಾಯಣ ಗುರು ಸಮುದಾಯ ಭವನದಲ್ಲಿನ ಸಂವಾದ ಸಭೆಯಲ್ಲಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಒಂದು ವಾರದ ಅಂತರದಲ್ಲಿ 2 ಸಾವಾಗಿದ್ದು, ಅದರಲ್ಲಿ 22/02/2026 ರಂದು ಆನೆ ದಾಳಿಗೆ ಸಂಭವಿಸಿದ ಸಾವಿನ ಸಂದರ್ಭದಲ್ಲಿ ರೈತರು ಮತ್ತು ಕಾರ್ಮಿಕರು ಪ್ರತಿಭಟನೆ ನಡೆಸಿದ್ದಾಗ, ಈ ವೇಳೆ ಪೋಲಿಸ್ ಇಲಾಖೆ ರೈತರು ಮತ್ತು ಕಾರ್ಮಿಕರ ಮೇಲೆ ಲಾಠಿ ಚಾರ್ಜ್ ನಡೆಸಿದ್ದು ಹಾಗೂ ಪ್ರತಿಭಟನಾ ನಿರತರ ಮೇಲೆ ಸುಳ್ಳು ಕೇಸ್ ಹಾಕಿದ್ದಾರೆ. ಲಾಠಿ ಚಾರ್ಜ್ ಖಂಡಿಸಿ ಸರ್ಕಾರದ ಪರವಾಗಿ ಪೋಲಿಸ್ ಇಲಾಖೆಗೆ ದಾಖಲಿಸಿರುವ ಸುಳ್ಳು ಕೇಸ್ಗಳನ್ನು ವಾಪಸ್ ತೆಗೆದುಕೊಳ್ಳುವಂತೆ ಸೂಚನೆ ನೀಡಬೇಕೆಂದು ಅರಣ್ಯ ಇಲಾಖೆ ಸಚಿವ ಈಶ್ವರ್ ಖಂಡ್ರೆ ಅವರಿಗೆ ಒತ್ತಾಯಿಸಿದರು

ಮಲೆನಾಡಿನ ಜ್ವಲಂತ ಸಮಸ್ಯೆಗಳ ಕುರಿತ ಮನವಿ ಪತ್ರದ ಅಂಶಗಳು ಇಂತಿವೆ:
ಮಲೆನಾಡು ಇಂದು ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದು ಇದು ಇಲ್ಲಿನ ಸಮಾಜೋ ಆರ್ಥಿಕ ಸ್ಥಿತಿಯ ಮೇಲೆ ಗಂಭೀರವಾಗಿ ಪರಿಣಾಮ ಬೀರುತ್ತಿದ್ದು ಮಲೆನಾಡಿನ ಸಮಸ್ಯೆಗಳ ಬಗ್ಗೆ ವೈಜ್ಞಾನಿಕವಾಗಿ ಅಧ್ಯಯನ ನಡೆಸಿ ಸಮಸ್ಯೆಗಳ ಪರಿಹಾರ ನೀಡಬೇಕಾಗಿ ಒತ್ತಾಯಿಸಿದೆ.
• ಮಾನವ ಮತ್ತು ವನ್ಯಜೀವಿ ಸಂಘರ್ಷ
• ಸಾಗುವಳಿ ಭೂಮಿ ಮತ್ತು ಅರಣ್ಯ ಇಲಾಖೆಯ ನಡುವಿನ ಸಂಘರ್ಷ.
• ಅಡಿಕೆಗೆ ಬಾಧಿಸುತ್ತಿರುವ ಹಳದಿ ಎಲೆ ಹಾಗೂ ಎಲೆ ಚುಕ್ಕಿ ರೋಗ.
ಶೃಂಗೇರಿ ವಿಧಾನಸಭಾ ಕ್ಷೇತ್ರ ಕುದುರೆಮುಖ ರಾಷ್ಟ್ರೀಯ ಉದ್ಯಾನವನಕ್ಕೆ, ಭದ್ರಾ ಹಿನ್ನೀರಿಗೆ ಮತ್ತು ತುಂಗಾ ತಿರುವಿಗೆ ನಮ್ಮಲ್ಲಿನ ಅಮೂಲ್ಯ ಭೂಮಿಯನ್ನು ಬಿಟ್ಟು ಕೊಟ್ಟಿದ್ದೇವೆ. ಆದರೆ ನಮ್ಮಮೇಲೆ ಅನೇಕ ಕಾರಣಗಳಿಂದ ಗಧಾ ಪ್ರಹಾರ ನಡೆಯುತ್ತಿದೆ.
ಇದನ್ನೂ ಓದಿ: ರೈತರಿಗೆ ಸಿಹಿ ಸುದ್ದಿ ಕೊಟ್ಟ ರಾಜ್ಯ ಸರ್ಕಾರ; ಬೆಂಬಲ ಬೆಲೆ ಯೋಜನೆಯಡಿಯಲ್ಲಿ ವಿವಿಧ ಬೆಳೆಗಳ ಖರೀದಿ ಅವಧಿ ವಿಸ್ತರಣೆ
ಮಾನವ ಮತ್ತು ವನ್ಯಜೀವಿ ಸಂಘರ್ಷ ; ಕಳೆದ ಒಂದು ವರ್ಷದಲ್ಲಿ ಕಾಡಾನೆ ದಾಳಿಗೆ 12 ಜನರು ಜೀವ ಕಳೆದುಕೊಂಡಿದ್ದಾರೆ. ದೊಡ್ಡ ಪ್ರಮಾಣದ ಕೃಷಿ ಭೂಮಿ ಮತ್ತು ಬೆಳೆ ಕೂಡ ಹಾನಿ ಆಗಿದೆ. ಮೇಲ್ನೋಟಕ್ಕೆ ಇದು ಅರಣ್ಯ ಭೂಮಿ ಒತ್ತುವರಿಯಿಂದ ಆಗಿದೆ ಎನ್ನುವ ತೀರ್ಮಾನಕ್ಕೆ ಸರ್ಕಾರಗಳು ಬಂದಿದೆ. ಆದರೆ ವಾಸ್ತವದ ಸತ್ಯ ಬೇರೆಯೇ ಇದೆ. ನಾವು ಹಿಂದಿನಿಂದಲೂ ವನ್ಯ ಜೀವಿಗಳ ಜೊತೆ ಜೊತೆಗೆ ಬದುಕನ್ನು ಕಟ್ಟಿಕೊಂಡವರು, ಆದರೆ ಈ ರೀತಿಯ ಬೆಳೆ ಹಾನಿ ಮತ್ತು ಪ್ರಾಣಿ ಹಾನಿ ಆಗುತ್ತಿರುವುದು ಕಳೆದ ಎರಡು ವರ್ಷದಿಂದ, ಕಾರಣ ಹಾಸನ ಭಾಗದಿಂದ ಬರುತ್ತಿರುವ ಆನೆಗಳು ನೇರವಾಗಿ ನಮ್ಮ ಕ್ಷೇತ್ರದಲ್ಲಿ ಬೀಡು ಬಿಡುತ್ತಿವೆ. ಜೊತೆಗೆ ಭದ್ರಾ ವನ್ಯ ಜೀವಿ ಅಭಯಾರಣ್ಯದಿಂದ ಡಿಸೆಂಬರ್ ತಿಂಗಳಿಂದ ಹೊರಬರುತ್ತಿರುವ ಆನೆಗಳು ಇಲ್ಲಿಯೇ ಉಳಿಯುತ್ತಿದೆ. ಈ ಹಿಂದೆ ಹೀಗೆ ಹೊರ ಬರುತ್ತಿರುವ ಆನೆಗಳು ಶೆಟ್ಟಿಹಳ್ಳಿ ಕಡೆಗೆ ವಲಸೆ ಹೋಗುತ್ತಿದ್ದವು ಆದರೆ ತುಂಗಾ ತಿರುವು ಆದ ಪರಿಣಾಮ ಸೂಕ್ಷ್ಮ ಹಾಗೂ ಬುದ್ಧಿವಂತ ಪ್ರಾಣಿ ಆದ ಆನೆಗಳು ಚಾನಲ್ ದಾಟಿ ಹೋಗುತ್ತಿಲ್ಲ. ಇದರ ದುಷ್ಪರಿಣಾಮ ನಮ್ಮ ಕ್ಷೇತ್ರದ ಮೇಲೆ ಆಗುತ್ತಿದೆ. ಹಾಗಾಗಿ ಈಗ ಆಗಿರುವ ಸಾವಿಗೆ ಇನ್ನೊಂದು ಸಾವಿನ ಸಂಖ್ಯೆ ಸೇರ್ಪಡೆ ಆಗದಿರಲಿ. ಹಾಗಾಗಿ ತಕ್ಷಣಕ್ಕೆ ನಮ್ಮ ಕ್ಷೇತ್ರಕ್ಕೆ ಹೆಚ್ಚಿನ ನಾಲ್ಕು ಆನೆ ನಿಗ್ರಹ ತಂಡ ಅಗತ್ಯ ಇದ್ದು ಅದನ್ನು ಸರ್ಕಾರದ ಗಮನಕ್ಕೆ ತಂದು ಆನೆ ನಿಗ್ರಹ ದಳ ವನ್ನು ಆಯಾ ತಾಲ್ಲೂಕು ಕೇಂದ್ರದಲ್ಲಿ ನಿಯೋಜನೆ ಮಾಡಬೇಕು, ಭದ್ರಾ ವನ್ಯ ಜೀವಿ ಅಭಯಾರಣ್ಯದಿಂದ ಹಾಗೂ ಹಾಸನ ಬೇಲೂರು ಭಾಗದಿಂದ ಬರುತ್ತಿರುವ ಆನೆಗಳನ್ನು ತಡೆಯಲು ಶಾಶ್ವತ ರೈಲ್ವೆ ಬೇಲಿ ಮಾಡಿಕೊಡಬೇಕು.
ಇಲ್ಲಿರುವ ಆನೆಗಳನ್ನು ಭದ್ರಾ ಅಭಯಾರಣ್ಯದ ಒಳಗೆ ಸ್ಥಳಾಂತರ ಮಾಡಬೇಕು. ಹಾಗೂ ಆನೆ ದಾಳಿಯಿಂದ ಮೃತ ಪಟ್ಟ ವ್ಯಕ್ತಿಗಳಿಗೆ ಪರಿಹಾರ ಮೊತ್ತವನ್ನು 50 ಲಕ್ಷಕ್ಕೆ ಏರಿಸಬೇಕು. ಅಂತಹ ಕುಟುಂಬವನ್ನು ನಿರಾಶ್ರಿತರು ಎಂದು ಪರಿಗಣಿಸಿ ಕುಟುಂಬದ ಒಬ್ಬರಿಗೆ ಸರಕಾರಿ ಉದ್ಯೋಗ ನೀಡಬೇಕು, ಬೆಳೆ ಪರಿಹಾರವನ್ನು ಪರಿಷ್ಕರಿಸಿ ಇಂದಿನ ಜೀವನ ಮಟ್ಟಕ್ಕೆ ತಕ್ಕಂತೆ ಏರಿಸಬೇಕು. ಇದರ ಜೊತೆಗೆ ಕಾಡು ಕೋಣ , ಮಂಗ , ನವಿಲು ಮತ್ತು ಇತರ ಕಾಡು ಪ್ರಾಣಿಗಳ ಹಾವಳಿ ಕೂಡ ಮಿತಿ ಮೀರಿದ್ದು ಇದಕ್ಕೂ ಪರಿಹಾರ ಒದಗಿಸಬೇಕು ಮತ್ತು ವನ್ಯ ಪ್ರಾಣಿಗಳಿಂದ ಬೆಳೆ ಹಾನಿ ಆಗದಂತೆ ರಕ್ಷಿಸಿಕೊಳ್ಳಲು ಬಂದೂಕು ಪರವಾನಿಗೆ ನೀತಿಯನ್ನು ಸರಳ ಗೊಳಿಸಿ , ಹೆಚ್ಚು ಜನರಿಗೆ ಪರವಾನಿಗೆ ನೀಡಬೇಕು.
ಸಾಗುವಳಿ ಭೂಮಿ ಮತ್ತು ಅರಣ್ಯ ಇಲಾಖೆಯ ಸಂಘರ್ಷ; ಕ್ಷೇತ್ರದಲ್ಲಿ ಈಗಾಗಲೇ ಸೆಕ್ಷನ್ 4 ,ಸೆಕ್ಷನ್ 17, ಡೀಮ್ಡ್ ಅರಣ್ಯ ದ ಹೆಸರಿನಲ್ಲಿ ಇರುವ ಎಲ್ಲಾ ಭೂಮಿಯನ್ನು ಗುರುತಿಸಿದೆ. ಇದರಲ್ಲಿ ಜೀವನೋಪಾಯಕ್ಕಾಗಿ ಮಾಡಿಕೊಂಡಿರುವ ಸಾಗುವಳಿ ಭೂಮಿ, ಮಠ ಮಂದಿರ, ಶಾಲೆ, ಗ್ರಾಮ ಪಂಚಾಯತಿ ಕಟ್ಟಡಗಳು, ವಾಸದ ಮನೆಗಳು ಇರುವ ಜಾಗಗಳು ಸೇರಿದೆ. ಗ್ರಾಮ ಪಂಚಾಯತಿಗಳಲ್ಲಿ ನಿವೇಶನ ರಹಿತರಿಗೆ ನಿವೇಶನ ನೀಡಲು, ಸರ್ಕಾರದಿಂದ ಬರುವ ವಸತಿ ಯೋಜನೆ ನೀಡಲು ಕೂಡ ಭೂಮಿ ಇಲ್ಲದೆ ಇರುವುದರಿಂದ ಇಲ್ಲಿ ವಾಸಿಸುವ ಮಧ್ಯಮ, ಚಿಕ್ಕ ಮತ್ತು ಅತಿ ಚಿಕ್ಕ ರೈತರ ಸಾಗುವಳಿ ಭೂಮಿಗೆ ಮತ್ತು ಕ್ಷೇತ್ರದಲ್ಲಿ ವಾಸಿಸುವ ಅತಿ ಹೆಚ್ಚು ಸಂಖ್ಯೆಯಲ್ಲಿ ಇರುವ ಕಾರ್ಮಿಕರಿಗೆ ಮನೆ ನಿರ್ಮಾಣ ಮಾಡಿಕೊಳ್ಳಲು ಹಕ್ಕು ಪತ್ರ ಪಡೆಯಲು ಅರಣ್ಯ ಇಲಾಖೆಯ ನಿರಪೇಕ್ಷಣ ಪ್ರಮಾಣ ಪತ್ರ ಸಿಗುತ್ತಿಲ್ಲ. ಹಾಗಾಗಿ ಸೆಕ್ಷನ್ 4 ಸೆಕ್ಷನ್ 17 ಮತ್ತು ಪರಿಭಾವಿತ ಅರಣ್ಯಗಳ ಹೊಸದಾಗಿ ಸರ್ವೇ ನಡೆಸಿ ಮೇಲ್ಕಂಡ ಭೂಮಿಗಳನ್ನು ಅದರಿಂದ ಕೈ ಬಿಡಬೇಕು. ಮತ್ತು ಜೀವನ ಉಪಯೋಗಕ್ಕಾಗಿ ಬದುಕುವ ರೈತರಿಗೆ ಸರ್ಕಾರ ನಿಗದಿ ಮಾಡಿರುವ 3 ಎಕರೆ ಭೂಮಿಯನ್ನು ಪರಿಶೀಲನೆ ಮಾಡಬೇಕು ಏಕೆಂದರೆ, ಪಹಣಿ ಇರುವ 3 ಎಕರೆ ಭೂಮಿ ಎಲೆ ಚುಕ್ಕಿ ರೋಗ ಮತ್ತು ಹಳದಿ ರೋಗ ಕ್ಕೆ ತುತ್ತಾಗಿದೆ. ಭತ್ತದ ಗದ್ದೆಗಳು ವನ್ಯ ಜೀವಿ ದಾಳಿಯಿಂದ ಕೃಷಿ ಮಾಡುವ ಸ್ಥಿತಿಯಿಂದ ದೂರ ಉಳಿದಿದೆ. ಹಾಗಾಗಿ 3 ಎಕರೆ ಎನ್ನುವ ನಿಲುವು ಬದಲಾವಣೆ ಮಾಡಿಕೊಳ್ಳಬೇಕು . ಜೊತೆಗೆ ಮಲೆನಾಡಿನಲ್ಲಿ ಪರ್ಯಾಯ ಕೃಷಿಗೆ ಅನುಕೂಲ ಆಗುವಂತೆ ಸರ್ಕಾರ ಅಧ್ಯಯನ ನಡೆಸಿ, ಮಲೆನಾಡನ್ನು ವಿಶೇಷ ಆದ್ಯತಾ ವಲಯವಾಗಿ ಪರಿಗಣಿಸಿ ಅರಣ್ಯ ಕೃಷಿ ಮತ್ತು ಪರ್ಯಾಯ ಕೃಷಿಗೆ ಪ್ರೋತ್ಸಾಹ ನೀಡಬೇಕು. ಜೊತೆಗೆ ಇರುವ ಗೋಮಾಳ ಹಾಗೂ ಸೊಪ್ಪಿನ ಬೆಟ್ಟ ಜಾಗವು ಅರಣ್ಯ ಇಲಾಖೆ ತಮ್ಮ ಯೋಜನೆಗಳಿಗೆ ಸೇರಿಸಿಕೊಂಡಿರುವುದನ್ನು ಕೈ ಬಿಡಬೇಕು.
ಈಗಾಗಲೇ ಹಳದಿ ರೋಗ ಮತ್ತು ಎಲೆ ಚುಕ್ಕಿ ರೋಗಕ್ಕೆ ಕ್ಷೇತ್ರದ ಬಹುಪಾಲು ತೋಟಗಳು ಆಹುತಿ ಆಗಿದ್ದು. ಹಳದಿ ರೋಗ ನಿಯಂತ್ರಣ ಸಂಶೋಧನ ಕೇಂದ್ರ ಕೈಚೆಲ್ಲಿ ಕೂತಿದೆ. ಇದರಿಂದ ಮಲೆನಾಡಿನ ಆರ್ಥಿಕ ಹಾಗೂ ಸಾಮಾಜಿಕ ಜೀವನ ದುಸ್ಥಿತಿಗೆ ಬಂದಿದ್ದು, ಯುವಕರು ನಗರಗಳತ್ತ ವಲಸೆ ಹೋಗುತ್ತಿದ್ದು ಮಲೆನಾಡು ವೃದ್ಧಾಶ್ರಮ ಆಗುತ್ತಿದೆ. ಹಾಗಾಗಿ ಎಲೆ ಚುಕ್ಕಿ ರೋಗ ಮತ್ತು ಹಳದಿ ರೋಗವನ್ನು ಗಂಭೀರ ಸಮಸ್ಯೆ ಎಂದು ಪರಿಗಣಿಸಿ ಅಧ್ಯಯನ ನಡೆಸಿ ಪರಿಹಾರ ನೀಡಬೇಕು. ಹಳದಿ ರೋಗ ಸಂಶೋಧನಾ ಕೇಂದ್ರ ಸಕ್ರಿಯವಾಗುವಂತೆ ಸರ್ಕಾರ ಗಮನ ಹರಿಸಬೇಕು.
ಕುದುರೆಮುಖ ಅಭಯಾರಣ್ಯ ಮತ್ತು ಭದ್ರಾ ಹಿನ್ನೀರಿಗೆ ಜಾಗ ಬಿಟ್ಟು ಕೊಟ್ಟಿರುವ ಜನರಿಗೆ ಇನ್ನೂ ನೆಮ್ಮದಿಯಿಂದ ಬದುಕುವ ಕಟ್ಟಿಕೊಳ್ಳಲು ಸಾಧ್ಯವಾಗಿಲ್ಲ, ಹಾಗಾಗಿ ಈ ಸಂತ್ರಸ್ಥರಿಗೆ ಮೊದಲು ಹಕ್ಕು ಪತ್ರ ನೀಡಬೇಕು ನಂತರ ಪರಿಹಾರ ನೀಡಬೇಕು. ಭದ್ರಾ ಹಿನ್ನೀರಿಗೆ ಜಾಗ ಬಿಟ್ಟು ಕೊಟ್ಟಿರುವ ಜನರ ಭೂಮಿಗೆ ಇಂದಿಗೂ ಹಕ್ಕುಪತ್ರಕ್ಕೆ ಪೋಡ್ ಆಗಿಲ್ಲ ಹಾಗಾಗಿ ಸರ್ಕಾರ ಇದನ್ನು ತಕ್ಷಣಕ್ಕೆ ಕಾರ್ಯ ಪ್ರವೃತ್ತವಾಗಿ ಕೆರೆಕಟ್ಟೆ ಹಾಗೂ ಭದ್ರ ಹಿನ್ನೀರಿನ ಜನರ ಸಮಸ್ಯೆಯನ್ನು ಪರಿಹರಿಸಬೇಕು.
ಏಕಪಕ್ಷೀಯವಾಗಿ ಸೆಕ್ಷನ್ 17 ಮಾಡುತ್ತಿರುವುದು; ಸೆಕ್ಷನ್ 4(1) ಅನ್ನು ಹಕ್ಕುದಾರರ ಅಭಿಪ್ರಾಯವನ್ನು ಪರಿಗಣನೆಗೆ ತೆಗೆದುಕೊಳ್ಳದೆ ಏಕಪಕ್ಷೀಯವಾಗಿ ಸೆಕ್ಷನ್ 17 ಮಾಡಲಾಗುತ್ತಿದೆ, ಈ ಮೂಲಕ ರೈತರು ಹಾಗೂ ಕಾರ್ಮಿಕರ ಹಕ್ಕುಗಳನ್ನು ಕಿತ್ತುಕೊಳ್ಳಲಾಗುತ್ತಿದೆ. ಇದನ್ನು ನ್ಯಾಯಬದ್ಧವಾಗಿ ಮಾಡಬೇಕು.
ಇದನ್ನೂ ಓದಿ: ಭಾಗ್ಯಲಕ್ಷ್ಮೀ ಫಲಾನುಭವಿಗಳ ಗಮನಕ್ಕೆ; ಪರಿಪಕ್ವ ಮೊತ್ತ ಪಡೆಯಲು ಅರ್ಜಿ ಆಹ್ವಾನ
ಪಶ್ಚಿಮ ಘಟ್ಟದ ಮೇಲಿನ ಅವಲಂಬನೆಗೆ ಪರ್ಯಾಯ: ಪರಿಸರ ಉಳಿಸುವ ಹಾಗೂ ಅರಣ್ಯ ಉಳಿಸುವ ಎಲ್ಲಾ ಯೋಜನೆಗಳನ್ನು ಪಶ್ಚಿಮ ಘಟ್ಟದ ಮೇಲೆ ಮಾತ್ರ ಹೇರುತಾತಿರುವುದರಿಂದ ಇಲ್ಲಿನ ಮೂಲನಿವಾಸಿಗಳ ಹಕ್ಕುಗಳು ದಿನೇದಿನೇ ದಮನವಾಗುತ್ತಿದೆ, ಪರ್ಯಾಯವಾಗಿ ರಾಜ್ಯದಲ್ಲಿನ ಇತರೆ ಭಾಗಗಳಲ್ಲಿ ಸಹ ಅರಣ್ಯ ಭೂಮಿಯನ್ನು ಕಳಿಸಬೇಕು ಹಾಗೂ ಬೆಳೆಸಬೇಕು.
ಪರಿಸ್ಥಿತಿಯ ಸಂಧಿಗ್ಧತೆಗೆ ಸಿಲುಕಿಸಿ ಹೊರ ಹಾಕುವ ಪ್ರಯತ್ನ: ಜನವಸತಿ ಪ್ರದೇಶಗಳಲ್ಲಿ ಸಹ ಅರಣ್ಯ ಯೋಜನೆಗಳನ್ನು ಹೇರುವುದು ಹಾಗೂ ಅಭಿವೃದ್ಧಿ ಚಟುವಟಿಕೆಗಳಿಗೆ ಸಹ ಭೂಮಿ ಇಲ್ಲದಂತೆ ಮಾಡುವ ಮೂಲಕ ಪರಿಸ್ಥಿತಿಯ ಸಂಧಿಗ್ಧತೆಗೆ ಸಿಲುಕಿಸಿ ಮಲೆನಾಡಿಗರನ್ನು ಹೊರ ಹಾಕುವ ಪ್ರಯತ್ನ ಮಾಡಲಾಗುತ್ತಿದೆ.
ಓವರ್ ಲ್ಯಾಪ್ ಸಮಸ್ಯೆ: ವಿವಿಧ ಅರಣ್ಯ ಯೋಜನೆಗಳನ್ನು ಹಾಗೂ ಕಾಯ್ದೆಗಳನ್ನು ಒಂದೇ ಭೂಮಿಯ ಮೇಲೆ ಹೇರುವ ಮೂಲಕ, ಆ ಭೂಮಿಯನ್ನು ಯಾವುದೇ ಮೂಲಭೂತ ಅಭಿವೃದ್ಧಿ ಗಳಿಗೆ ಸಹ ಬಳಸದಂತೆ ಮಾಡಲಾಗುತ್ತಿದೆ, ಇದು ಆಸ್ಪತ್ರೆ, ಬಸ್ ನಿಲ್ದಾಣ, ಕಸ ವಿಲೇವಾರಿ ಘಟಕ, ಶಾಲೆ ಸೇರಿದಂತೆ ಹಲವು ಕಾರ್ಯಗಳಿಗೆ ತೊಡಕುಂಟು ಮಾಡಿದೆ.
ಪಟ್ಟಣದಿಂದ ಕನಿಷ್ಠ 5 ಕಿಲೋಮೀಟರ್ ವ್ಯಾಪ್ತಿಯನ್ನು ವ್ಯಾಪಾರ ಹಾಗೂ ಜನವಸತಿ ವಲಯ: ತಾಲ್ಲೂಕು ಕೇಂದ್ರ, ಹೋಬಳಿ ಕೇಂದ್ರ ಹಾಗೂ ಗ್ರಾಮ ಪಂಚಾಯಿತಿ ಮಟ್ಟದ ಪಟ್ಟಣ ಭಾಗದಿಂದ 5 ಕಿಲೋಮೀಟರ್ ವ್ಯಾಪ್ತಿಯನ್ನು ವ್ಯಾಪಾರ ಹಾಗೂ ಜನವಸತಿ ಪ್ರದೇಶ ಎಂದು ಗುರುತಿಸಿ, ಅಲ್ಲಿರುವ ಕಂದಾಯ ಭೂಮಿಯನ್ನು ಅರಣ್ಯ ಇಲಾಖೆಯಿಂದ ರಕ್ಷಿಸುವುದು ಹಾಗೂ ಸೆಕ್ಷನ್ 4, ಡೀಮ್ಡ್ ವ್ಯಾಪ್ತಿಯಿಂದ ಹೊರಗಿಟ್ಟು ಅದನ್ನು ವಸತಿ ಯೋಜನೆಗಳಿಗೆ, ಸರ್ಕಾರದ ಅಭಿವೃದ್ಧಿ ಯೋಜನೆಗಳಿಗೆ ಬಳಕೆಗೆ ಮೀಸಲಿರಿಸುವುದು
ದೊಡ್ಡ ಒತ್ತುವರಿದಾರರ ಮನವೊಲಿಕೆ : ದೊಡ್ಡ ಒತ್ತುವರಿದಾರರ ತೆರವು ಕಾರ್ಯಾಚರಣೆಯು ಇಲ್ಲಿನ ನಿವಾಸಿಗಳ ಮಧ್ಯೆ ದ್ವೇಷಮಯ ವಾತಾವರಣ ಸೃಷ್ಟಿಗೆ ಕಾರಣವಾಗಬಹುದು ಆದ್ದರಿಂದ ದೊಡ್ಡ ಒತ್ತುವರಿದಾರರ ಮನವೊಲಿಕೆ ಮಾಡುವ ಮೂಲಕ ಸ್ವಯಂಚಾಲಿತವಾಗಿ ಬಿಟ್ಟುಕೊಡಲು ಪ್ರಯತ್ನಿಸುವುದು ಹಾಗೂ ಅದರ ವರದಿಯನ್ನು ಸಂಬಂಧಪಟ್ಟ ನ್ಯಾಯಾಲಯಕ್ಕೆ ಸಲ್ಲಿಸಿದಲ್ಲಿ ಬದುಕಿಗಾಗಿ ಒತ್ತುವರಿ ಮಾಡಿಕೊಂಡವರಿಗೆ ರಿಲೀಫ್ ಸಿಗಬಹುದು.
ಪಾರಂಪರಿಕ ಅರಣ್ಯ ಹಕ್ಕು: ಮಿತಿಯನ್ನು 75 ವರ್ಷದಿಂದ 25 ವರ್ಷಕ್ಕೆ ಇಳಿಸಬೇಕು. ನಾವು ಅರಣ್ಯ ಮತ್ತು ಇಲ್ಲಿನ ಜೀವ ವೈವಿಧ್ಯದ ಸುಸ್ಥಿರ ಬೆಳವಣಿಗೆಯ ಜೊತೆಗೆ ಮಾನವನನ್ನು ಕೂಡ ಜೀವ ವೈವಿಧ್ಯದ ಒಂದು ಭಾಗವೆಂದು ಪರಿಗಣಿಸಬೇಕು ಮತ್ತು ಜೀವ ವೈವಿಧ್ಯ ಮತ್ತು ಮಾನವ ಸಹಬಾಳ್ವೆ ಯಿಂದ ಬದುಕುವಂತೆ ಕ್ರಿಯಾತ್ಮಕ ಯೋಜನೆಯನ್ನು ಸರ್ಕಾರ ಜಾರಿಗೆ ತರಬೇಕು.
ನಮ್ಮ ಈ ಮನವಿಯನ್ನು ಅಗತ್ಯವಾಗಿ ಅಧ್ಯಯನ ಮಾಡಿ ಪರಿಹಾರ ನೀಡಬೇಕು ಎಂದು ಮಲೆನಾಡು ನಾಗರಿಕ ರೈತ ಹಿತರಕ್ಷಣಾ ಸಮಿತಿ, ಶೃಂಗೇರಿ ಕ್ಷೇತ್ರ ಒತ್ತಾಯಿಸಿದೆ. ಈ ಸಂದರ್ಭದಲ್ಲಿ ರತ್ನಾಕರ್ ಗಡಿಗೇಶ್ವರ, SV ಶಂಕರ್, ರಂಜಿತ್ ಶೃಂಗೇರಿ, ನವೀನ್ ಕರಗಣೆ, ಚರಣ ಕರ್ಕುಟ, ಸಂದೇಶ್ ಕರ್ಗಣೆ , ಪ್ರದೀಪ್ ಹುಯಿಗೆರೆ, ಮಂಜ ನಾಯ್ಕ್, ಶಿವಣ್ಣ ಆಡುವಳ್ಳಿ ಇದ್ದರು.
ಇನ್ನುಳಿದಂತೆ ಶೃಂಗೇರಿ ರೈತ ಒಕ್ಕೂಟ, ಅಡಿಕೆ ಬೆಳೆಗಾರರ ಸಂಘ, ಕರಾವಳಿ ಜನಪರ ಒಕ್ಕೂಟ, ಕಾಫಿ ಬೆಳೆಗಾರರ ಸಂಘ, ಕರ್ನಾಟಕ ರಾಜ್ಯ ಬೆಳೆಗಾರರ ಸಂಘ, ದಲಿತ ಸಂಘರ್ಷ ಸಮಿತಿ, ರೈತ ಸಂಘ, ಜನಶಕ್ತಿ ಸೇರಿದಂತೆ ಹಲವಾರು ಸಂಘಟನೆಗಳು ಮನವಿಯನ್ನು ಸಲ್ಲಿಸಿದರು.












