ಎತ್ತ ಸಾಗುತ್ತಿದೆ ಶೃಂಗೇರಿ ಕಾಂಗ್ರೆಸ್ ರಾಜಕಾರಣ?

ಎತ್ತ ಸಾಗುತ್ತಿದೆ ಶೃಂಗೇರಿಯ ಕಾಂಗ್ರೆಸ್ ರಾಜಕಾರಣ..? ಎಂದು ಕಾಂಗ್ರೆಸ್ ಮುಖಂಡ ಹಾಗೂ ಶೃಂಗೇರಿ ತಾಲೂಕಿನ ವಿದ್ಯಾರಣ್ಯಪುರ ಗ್ರಾಮ ಪಂಚಾಯಿತಿ ಸದಸ್ಯ ಶಬರೀಶ್ ಬಹಿರಂಗ ಪತ್ರದೊಂದಿಗೆ ತಮ್ಮ ಪಕ್ಷದ ಮುಖಂಡರು ಹಾಗೂ ಶಾಸಕರಿಗೆ ಒಂದಷ್ಟು ಪ್ರಶ್ನೆಗಳನ್ನು ಕೇಳುವುದರೊಂದಿಗೆ ಸ್ವಪಕ್ಷದ ಆಂತರಿಕ ವ್ಯವಸ್ಥೆ ವಿರುದ್ಧವೇ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.

 

ಇದನ್ನೂ ಓದಿ; ಫಾರೆಸ್ಟ್ ಗಾರ್ಡ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ;  540 ಹುದ್ದೆಗಳ ಭರ್ತಿಗೆ ಅಧಿಸೂಚನೆ; ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹುದ್ದೆ

ಏನಿದೆ ಅವರ ಪತ್ರಿಕಾ ಪ್ರಕಟಣೆಯಲ್ಲಿ?
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ಉಚಿತ ಯೋಜನೆಗಳ ಮೂಲಕ ಮನೆ, ಮನಕ್ಕೂ ಮುಟ್ಟಿ ಬಡವರ ಬದುಕು ಹಸನಾಗುವಲ್ಲಿ ಪರಿಣಾಮಕಾರಿ ಕೆಲಸ ಮಾಡಿದ್ದರೂ ಸಹ ಶೃಂಗೇರಿ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಲ್ಲಿ ಹತಾಶಾ ಮನೋಭಾವನೆ ಎದ್ದು ಕಾಣುತ್ತಿದೆ. ತಮ್ಮ ಪಕ್ಷದ ಸಾಧನೆಯನ್ನು ತಮ್ಮ ವಿರೋಧ ಪಕ್ಷದ ಕಾರ್ಯಕರ್ತರ ಮುಂದೆ ಗತ್ತಿನಿಂದ ಹೇಳಿಕೊಳ್ಳುವ ಬದಲು ಏನನ್ನೋ ಕಳೆದುಕೊಂಡಂತೆ ನಿರಸನರಾಗಿರುವುದಂತೂ ಸತ್ಯ.

ಇದನ್ನೂ ಓದಿ; 8 ಬಾರಿ ಅಂಬಾರಿ ಹೊತ್ತಿದ್ದ ಎಲ್ಲರ ಪ್ರೀತಿಯ ಅರ್ಜುನ ಸಾವು;  ಕಾಡಾನೆಯ ಭೀಕರ ದಾಳಿ, ಅರ್ಜುನನ ಮೇಲಿಂದ ಇಳಿದು ಓಡಿದ್ದ ಮಾವುತರು

ಕ್ಷೇತ್ರದಲ್ಲಿ ಸುಮಾರು ಎರಡು ದಶಕಗಳ ನಂತರ ರಾಜ್ಯದಲ್ಲಿ ಪಕ್ಷ ಆಡಳಿತದಲ್ಲಿರುವಾಗಲೇ ಕ್ಷೇತ್ರದಲ್ಲಿ ನಮ್ಮ ಪಕ್ಷದ ಶಾಸಕರನ್ನು ಪಡೆಯುವಂತಹ ಅವಕಾಶ ಕಾರ್ಯಕರ್ತರಲ್ಲಿ ಸಹಜವಾಗಿಯೇ ರೋಮಾಂಚನವನ್ನು ಮೂಡಿಸಿತ್ತು. ಬಿಜೆಪಿಯ ಸತತ ಗೆಲುವಿನ ನಂತರ ಡಿ.ಬಿ.ಚಂದ್ರೇಗೌಡರ ಕಾಲದಲ್ಲಿದ್ದ ಮುಂಚೂಣಿ ನಾಯಕರು ಮತ್ತು ಕಾರ್ಯಕರ್ತರು ನೇಪತ್ಯಕ್ಕೆ ಸರಿದು ಹೊಸ ತಲೆಮಾರಿನ ಜಾತ್ಯಾತೀತ ಮನಸ್ಸಿನ ಕಾರ್ಯಕರ್ತರು ಅಧಿಕಾರ ಇರಲಿ ಬಿಡಲಿ ನಾವು ಮಾತ್ರ ಕಾಂಗ್ರೆಸ್ ನಲ್ಲೇ ಇರುತ್ತೇವೆ ಎಂಬ ದೃಢ ಸಂಕಲ್ಪದಲ್ಲಿದ್ದರೂ ಪಕ್ಷ ಇಳಿಜಾರಿನಲ್ಲಿ ಚಲಿಸಲಾರಂಭಿಸಿದಾಗ (2010-11 ರ ಸಮಯದಲ್ಲಿ) ಒತ್ತಾಸೆಯಾಗಿ ನಿಂತವರೆ ಹಾಲಿ ಶಾಸಕ ಟಿ.ಡಿ.ರಾಜೇಗೌಡರು.

 

ಇದನ್ನೂ ಓದಿ; ಬರ ಸಂತ್ರಸ್ತ ರೈತರಿಗೆ ಗುಡ್‌ ನ್ಯೂಸ್‌; ಮೊದಲ ಕಂತಿನ ಬರ ಪರಿಹಾರ ಘೋಷಿಸಿದ ಸಿಎಂ; ಮೊದಲನೇ ಕಂತಿನಲ್ಲಿ ಎಷ್ಟು ಹಣ ಸಿಗಲಿದೆ?

ಸುಮಾರು 2011 ರ ಸುಮಾರಿಗೆ ಕ್ಷೇತ್ರಕ್ಕೆ ಬಹುತೇಕ ಹೊಸ ಮುಖದಂತೆಯೇ ಕಾಣಿಸಿಕೊಂಡ ಟಿ.ಡಿ.ರಾಜೇಗೌಡರು ಪ್ರಮುಖವಾಗಿ ಕ್ರೀಡೆ, ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳಿಗೆ ದೇಣಿಗೆ ನೀಡುವ ಮೂಲಕ ಹೊಸ ರೀತಿಯ ದೇಣಿಗೆ ರಾಜಕೀಯದಿಂದ ಕ್ಷೇತ್ರಾದ್ಯಂತ ಪರಿಚಿತರಾಗಿ ಕಾರ್ಯಕರ್ತರು ನಾನು ಕಾಂಗ್ರೆಸ್ ಪಕ್ಷದವನು ಅನ್ನುವುದಕ್ಕಿಂತ ನಾನು ರಾಜೇಗೌಡರಿಗಾಗಿ ಕೆಲಸ ಮಾಡಬೇಕು ಎನ್ನುವ ಸಮೂಹ ಸನ್ನಿಯನ್ನು ಸೃಷ್ಟಿಸುವಲ್ಲಿ ಯಶಸ್ವಿಯಾದರು.

 

2013 ರ ವಿಧಾನಸಭಾ ಚುನಾವಣೆಯಲ್ಲಿ ಕೆಲವೇ ಕೆಲವು ಮತಗಳ ಅಂತರದಿಂದ ಚುನಾವಣೆಯಲ್ಲಿ ಪರಾಜಿತರಾದರೂ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬಂದ ಪರಿಣಾಮ ಕ್ಷೇತ್ರದಲ್ಲಿ ಬಿಜೆಪಿಯ ಡಿ.ಎನ್.ಜೀವರಾಜ್ ಶಾಸಕರಾದರೂ ಸಹ ಕಾಂಗ್ರೆಸ್ ಕಾರ್ಯಕರ್ತರ ಹಿತರಕ್ಷಣೆ ಮಾಡುವಲ್ಲಿ ಟಿ.ಡಿ.ರಾಜೇಗೌಡರು ಯಶಸ್ವಿಯಾದರು. ಇದರಿಂದ 2018 ರ ಚುನಾವಣೆಯಲ್ಲಿ ಟಿ.ಡಿ.ರಾಜೇಗೌಡರು ಶಾಸಕರಾಗಿ ಆಯ್ಕೆಯಾದರೂ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಬಂದ ಕಾರಣ ಕಾರ್ಯಕರ್ತರ ನಿರೀಕ್ಷೆಗೆ ತಕ್ಕ ಮಟ್ಟಿನ ತೃಪ್ತಿ ನೀಡುವಲ್ಲಿ ಯಶಸ್ವಿಯಾದರು. ಆದರೆ, ಸಮ್ಮಿಶ್ರ ಸರ್ಕಾರ ಪತನವಾಗಿ ಬಿಜೆಪಿ ಸರ್ಕಾರ ಬಂದ ನಂತರ ಮಾಜಿ ಶಾಸಕ ಜೀವರಾಜ್ ಅವರು ಅಭಿವೃದ್ಧಿ ಕಾಮಗಾರಿ ಮಾಡಲು ಬಿಡುತ್ತಿಲ್ಲ ಅಡ್ಡಿ ಮಾಡುತ್ತಿದ್ದಾರೆ ಎಂದು ನಿರಂತರ ಆರೋಪಿಸಿ ಕಾರ್ಯಕರ್ತರ ಪಡೆಯನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾದರು.

ಆದರೆ, ಇದೀಗ 2023 ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಭೂತಪೂರ್ವ ಗೆಲುವನ್ನು ಸಾಧಿಸುವ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಆಡಳಿತದಲ್ಲಿದೆ. ಕ್ಷೇತ್ರದಲ್ಲೂ ಅವರೇ ಶಾಸಕರಾಗಿದ್ದಾರೆ. ಆದರೆ, ಟಿ.ಡಿ.ರಾಜೇಗೌಡರ ವಿರುದ್ಧ ಸ್ವಪಕ್ಷದ ಕಾರ್ಯಕರ್ತರೇ ಸಿಟ್ಟು, ವಿರೋಧ, ದುಗುಡ ಹೊರಹಾಕುತ್ತಿರುವುದು ದಿನದಿಂದ ದಿನಕ್ಕೆ ಹೆಚ್ಚಾಗಿ ಕಾಣುತ್ತಿದೆ.

ಇದನ್ನೂ ಓದಿ; ಏರಿಕೆಯಾಗಿದ್ದ ಚಿನ್ನದ ಬೆಲೆ ಇಂದು ಅಗ್ಗ; ಮುಂದಿನ ದಿನಗಳಲ್ಲಿ ಮತ್ತೆ ಏರುವ ಸಾಧ್ಯತೆ

ಇದಕ್ಕೆ ಕಾರಣವಾದರೂ ಏನು..? ಶಾಸಕ ಟಿ.ಡಿ.ರಾಜೇಗೌಡರು ಚುನಾವಣೆಯ ನಂತರ, ಹೊಳೆ ದಾಟುವ ತನಕ ಅಂಬಿಗ ನನ್ನ ಗಂಡ, ಹೊಳೆ ದಾಟಿದ ಮೇಲೆ ಎಂಬ ಗಾದೆ ಮಾತಿನಂತೆ ನೈಜ ಕಾರ್ಯಕರ್ತರೊಂದಿಗೆ ವರ್ತಿಸಿದರೆ..? ಕಾರ್ಯಕರ್ತರ ಆಶಾಕಿರಣ ಆಗಿದ್ದ ರಾಜೇಗೌಡರು ಎರಡನೇ ಬಾರಿಗೆ ಗೆದ್ದ ನಂತರ ತಮ್ಮ ಅಸಲಿ ಮುಖದ ಪ್ರದರ್ಶನ ಮಾಡಿದರೆ..? ಸಾಮಾನ್ಯ ಕಾರ್ಯಕರ್ತರ ಮುಂದೆ ಎಸ್ಟೇಟ್ ಕಲ್ಚರ್ ತೋರಿಸಲು ಆರಂಭಿಸಿದರೆ..? ಅಸಲಿಗೆ ಶೃಂಗೇರಿ ಕ್ಷೇತ್ರದಲ್ಲಿ ನಡೆಯುತ್ತಿರುವುದಾದರೂ ಏನು..? ಚುನಾವಣೆಯ ವೆಚ್ಚದ ಭಾರಕ್ಕೆ ಟಿ.ಡಿ.ರಾಜೇಗೌಡರು ಕುಸಿದು ಹೋದರೆ..? ತಾವೇ ಆಯ್ಕೆ ಮಾಡಿಕೊಂಡ ಡೊನೇಷನ್ ಎಂಬ ಗೆಲುವಿನ ಕುದುರೆಯನ್ನು ಓಡಿಸುವ ಸಾಮರ್ಥ್ಯ ಕಳೆದುಕೊಂಡರೆ..?

ಅಥವಾ ದಶಕದಿಂದ ಕುರ್ಚಿಗೆ ಅಂಟಿಕೊಂಡಿರುವ ಪಕ್ಷ ಸಂಘಟನೆಯಲ್ಲಿ ತಮಗೆ ಸರಿಯಾಗಿ ಸಾಥ್ ನೀಡದೆ ಕ್ಷೇತ್ರದಲ್ಲಿ ತಾವು ಎಷ್ಟೇ ವರ್ಚಸ್ಸು ಇಟ್ಟುಕೊಂಡರೂ ಎರಡನೇ ಬಾರಿ ಪ್ರಯಾಸದ ಗೆಲುವಿಗೆ ಕಾರಣರಾದ ಬರೀ ಸ್ವಾರ್ಥ ರಾಜಕಾರಣವನ್ನೇ ಮಾಡುವ ಶೃಂಗೇರಿ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರು ಹಾಗೂ ಅವರ ಕಂಟ್ರಾಕ್ಟರ್ ತಂಡಗಳ ಮೇಲೆ ಮುನಿಸೇ..?

ಆದರೆ, ಈ ಎಲ್ಲಾ ವಿಚಾರಗಳಿಗೂ ತಮ್ಮ ತಲೆಯ ಮೇಲೆ ಟಿ.ಡಿ.ರಾಜೇಗೌಡರನ್ನು ಹೊತ್ತುಕೊಂಡು, ತಮ್ಮ ತಮ್ಮ ಊರಿನ ಬೇರೆ ಬೇರೆ ಪಕ್ಷದವರೊಂದಿಗೆ ಕಿತ್ತಾಡಿಕೊಂಡು ನಿಷ್ಕರ ಮಾಡಿಕೊಂಡು ಪಕ್ಷದ, ಅಭ್ಯರ್ಥಿಯ ಕರಪತ್ರ ಹಿಡಿದು ಗಲ್ಲಿ ಗಲ್ಲಿ ಮನೆ ಮನೆ ಹತ್ತಿಳಿಯುವ ನಿಷ್ಠಾವಂತ ಕಾರ್ಯಕರ್ತರು ಮಾಡಿದ ತಪ್ಪಾದರೂ ಏನು..? ಅವರನ್ನೇಕೆ ಕೇವಲವಾಗಿ ನೋಡಿ ಬಲಿಪಶು ಮಾಡಬೇಕು ಎಂಬ ಕಾರ್ಯಕರ್ತರ ಪ್ರಶ್ನೆ ಸರಿಯಾಗಿಯೇ ಇದೆ..!

ಇದನ್ನೂ ಓದಿ; FID ಸರ್ವೆ ನಂಬರ್ ಗಳಿಗೆ ಮಾತ್ರ ಸಿಗಲಿದೆ ಬೆಳೆಹಾನಿ ಪರಿಹಾರ; ನಿಮ್ಮ FID ಗೆ ಎಷ್ಟು ಸರ್ವೆ ನಂಬ‌ರ್ ಜೋಡಣೆ ಆಗಿದೆ; ನಿಮ್ಮ ಮೊಬೈಲ್ ನಲ್ಲಿ ಹೀಗೆ ಚೆಕ್ ಮಾಡಿ

ಈ ನಡುವೆ ವಿವಿಧ ಇಲಾಖೆಗಳಿಗೆ ಪಕ್ಷದ ಮುಖಂಡರ, ಕಾರ್ಯಕರ್ತರ ನಾಮ ನಿರ್ದೇಶನಗಳು ಆರಂಭಗೊಂಡಿದೆ. ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರು ನೀಡಿದ ಪಟ್ಟಿಗೆ ಕಣ್ಣುಮುಚ್ಚಿ ಶಾಸಕರು ಒಪ್ಪಿಗೆ ಸೂಚಿಸುತ್ತಿದ್ದಾರೆ. ಪಟ್ಟಭದ್ರ ಹಿತಾಸಕ್ತಿಗಳು ಎಂದಿನಂತೆ ತಮ್ಮ ವರಸೆ ತೋರಿಸಿ ವಿರೋಧ ಪಕ್ಷದವರೊಂದಿಗೆ ಭಾವ, ನೆಂಟರ ಹೊಂದಾಣಿಕೆ ರಾಜಕೀಯ ಆರಂಭಿಸಿದ್ದಾರೆ. ನಿಷ್ಠಾವಂತ ನೈಜ ಕಾರ್ಯಕರ್ತರನ್ನು ಕೇಳುವವರೇ ಇಲ್ಲವಾಗಿದ್ದಾರೆ.

ಇತ್ತೀಚಿನ ದಿನಗಳಲ್ಲಿ ನಾಮ ನಿರ್ದೇಶನದ ಹೆಸರಿನಲ್ಲಿ ಪಟ್ಟಭದ್ರ ಹಿತಾಸಕ್ತಿಗಳು ತಮಗೆ ಬೇಕಾದಂತೆ ತಮ್ಮ ಎದುರು ನಿಂತು ಮಾತನಾಡಲು ಹೆದರುವ ಪರಿಶಿಷ್ಟ ಜಾತಿ, ಪಂಗಡ ಮತ್ತು ಅಲ್ಪಸಂಖ್ಯಾತರನ್ನೂ ತಾವು ಹೇಳಿದಂತೆಲ್ಲಾ ಕೇಳುವ ಮತ್ತು ತಮ್ಮ ಭ್ರಷ್ಟಾಚಾರಕ್ಕೆ ಸಂಪೂರ್ಣ ಸಹಕರಿಸಿ ಭಾಗಿಯಾಗುವ ಸಾಮಾನ್ಯ ವರ್ಗದವರನ್ನು ಆಯ್ಕೆ ಮಾಡಿಕೊಂಡು ನಾಮನಿರ್ದೇಶನ ನೀಡಿ ಈ ಹಿಂದಿನ ಅವಧಿಗಳಲ್ಲಿ ನೂರಾರು ಎಕರೆ ಸರ್ಕಾರಿ ಭೂಮಿಯನ್ನು ಹಿಂದಿನ ಅವಧಿಗಳ ನಾಮ ನಿರ್ದೆಶನ ಸದಸ್ಯರುಗಳು ಅವರು ಮತ್ತು ಅವರ ಕುಟುಂಬದ ಎಲ್ಲರ ಹೆಸರಿಗೆ ಅಕ್ರಮವಾಗಿ ಸುಳ್ಳು ದಾಖಲೆಗಳನ್ನು ಸೃಷ್ಟಿ ಮಾಡಿ ಕಾನೂನು ಬಾಹಿರಬಾಹಿರವಾಗಿ ಮಂಜೂರಿ ಮಾಡಿಸಿಕೊಂಡು ಅರಣ್ಯ ನಾಶ ಮಾಡುತ್ತಾ ಸರ್ಕಾರಕ್ಕೆ ಮತ್ತು ಬಡ ಜನರಿಗೆ ಮೋಸ ಮಾಡಿದ್ದರೂ ಸಹ ಮತ್ತೆ ಮತ್ತೆ ಅವರಿಗೆ ಬೇಕಾದವರನ್ನೇ ನಾಮನಿರ್ದೇಶನ ಮಾಡುತ್ತಿರುವ ಉದ್ದೇಶವಾದರೂ ಏನು ಎಂಬುದು ನೈಜ ಕಾರ್ಯಕರ್ತರ ಪ್ರಶ್ನೆಯಾದರೂ ಸಹ ಟಿ.ಡಿ.ರಾಜೇಗೌಡರು ಯಾವುದೇ ಉತ್ತರ ನೀಡಲಾಗದೆ ನೈಜ ಕಾರ್ಯಕರ್ತರನ್ನೇ ದೂರುವ ಸ್ಥಿತಿಗೆ ತಲುಪಿರುವುದಾದರೂ ಏಕೆ..?

ಶೃಂಗೇರಿ ಕ್ಷೇತ್ರದಲ್ಲಿ ಅಭಿವೃದ್ದಿ ಕೆಲಸಗಳು ಕುಂಠಿತವಾಗಿದೆ. ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಚಿಂತೆ ಮಾಡದೆ ಶಾಸಕರು, ವಿರೋಧ ಪಕ್ಷದವರಾದರೂ ಸರಿ ಭಾವ ನೆಂಟರ ಯೋಗಕ್ಷೇಮವೇ ಮುಖ್ಯ ಎಂಬಂತೆ ಕಾನೂನುಬಾಹಿರ ಚಟುವಟಿಕೆಗಳಿಗೆ ಬೆಂಬಲ ಸೂಚಿಸುತ್ತಿರುವುದು ಟಿ.ಡಿ.ರಾಜೇಗೌಡರನ್ನು ನಂಬಿ ಮತ ನೀಡಿ ಗೆಲ್ಲಿಸಿದ ನಿಷ್ಠಾವಂತ ನೈಜ ಕಾರ್ಯಕರ್ತರ ದೌರ್ಭಾಗ್ಯವೇ ಸರಿ.

ಟಿ.ಡಿ. ರಾಜೇಗೌಡರ ಈ ವರ್ತನೆಗೆ ನೈಜ ಕಾರಣವಾದರೂ ಏನು..? ನಿರೀಕ್ಷಿತ ಮಂತ್ರಿಗಿರಿ ಸಿಕ್ಕಿಲ್ಲವೆಂಬ ಬೇಸರವೇ..? ಇನ್ನು ಪಕ್ಷದಲ್ಲಿ 135 ಶಾಸಕರು ಆಯ್ಕೆಯಾದ ಕಾರಣ ಬೆಂಗಳೂರಿನಲ್ಲಿ ಇವರನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲವೇ..? ಕ್ಷೇತ್ರದ ಅಭಿವೃದ್ಧಿ ಯೋಜನೆಗಳಿಗೆ ವಿವಿಧ ಸಚಿವರುಗಳು ಸ್ಪಂದಿಸುತ್ತಿಲ್ಲವೇ..? ಅಥವಾ ಇದೇ ನನ್ನ ಕೊನೆ ಚುನಾವಣೆ ಕಾರ್ಯಕರ್ತರು ಏನಾದರೂ ಮಾಡಿಕೊಳ್ಳಲಿ, ನಾನು ಮಾತ್ರ ಅಧಿಕಾರವನ್ನು ಅನುಭವಿಸುತ್ತಾ ಹಾಯಾಗಿ ಇರುತ್ತೇನೆ ಎಂಬ ತೀರ್ಮಾನಕ್ಕೆ ಬಂದಿದ್ದಾರೆಯೇ..? ಇಲ್ಲ ಟಿ.ಡಿ.ರಾಜೇಗೌಡರು ಇದುವರೆಗೂ ಅದುಮಿಟ್ಟುಕೊಂಡಿದ್ದ ತಮ್ಮ ಅಸಲೀ ಮುಖ ಇದುವೇನಾ..? ಎಂಬ ಹತ್ತು ಹಲವು ಪ್ರಶ್ನೆಗಳಿಗೆ ಉತ್ತರಗಳೇ ಸಿಗದೇ ಕಾರ್ಯಕರ್ತರು ವಿಚಲಿತರಾಗಿರುವುದಂತೂ ನೂರಕ್ಕೆ ನೂರು ಸತ್ಯ..!

ಹಾಗೆಂದು ಕ್ಷೇತ್ರದಲ್ಲಿ ಬಿಜೆಪಿಯೇನೂ ಬಲಿಷ್ಠವಾಗುತ್ತಿಲ್ಲ ಬಿಜೆಪಿ ಕಾರ್ಯಕರ್ತರು ಹೆದರಿ ಮನೆ ಸೇರಿಕೊಂಡಿರುವ ವಾತಾವರಣ ಸೃಷ್ಟಿಯಾಗಿದೆ. ಇನ್ನು ಜಾತ್ಯಾತೀತ ಜನತಾದಳ ಇದುವರೆಗಿನ ಸಾಧನೆಗಿಂತ ಹೆಚ್ಚನ್ನು ಮುಂದಿನ ದಿನ ನಿರೀಕ್ಷಿಸಲಿಕ್ಕಿಲ್ಲ ಹೇಳ ಹೆಸರಿಲ್ಲದಂತೆ ಆಗಬಹುದು. ಆದರೆ, ಹಾಲಿ ಶಾಸಕರಾದ ಟಿ.ಡಿ.ರಾಜೇಗೌಡರು ತಮ್ಮ ಹಿಂದಿನ ಉತ್ಸಾಹಕ್ಕೆ ಮರಳಿ ಕಾರ್ಯಕರ್ತರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡದಿದ್ದರೇ ಇತಿಹಾಸದಲ್ಲಿ ಜನದ್ರೋಹಿಯಾಗಿ ಉಳಿದುಕೊಳ್ಳುವುದಂತೂ ನೂರಕ್ಕೆ ನೂರು ಸತ್ಯ.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

ಕಾಫಿನಾಡು ಚಿಕ್ಕಮಗಳೂರು ಹುಟ್ಟೂರು. ಬರವಣಿಗೆ, ಪ್ರವಾಸ ಆಸಕ್ತ ವಿಷಯಗಳು. ಕನ್ನಡ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಸುಮಾರು 5 ವರ್ಷಗಳ ಅನುಭವ.