ಮಡಿಕೇರಿ: (ನ್ಯೂಸ್ ಮಲ್ನಾಡ್ ವರದಿ) ಸ್ನಾನಕ್ಕೆ ತೆರಳಿದ್ದ ಯುವಕನೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಇಲ್ಲಿಗೆ ಸಮೀಪದ ಬಲಮುರಿ ಗ್ರಾಮದಲ್ಲಿ ರವಿವಾರ ಸಂಭವಿಸಿದೆ. ಬಲಮುರಿ ಗ್ರಾಮದ ವಾಟೆಕಾಡು ಪೈಸಾರಿ ನಿವಾಸಿ, ಕೂಲಿ ಕಾರ್ಮಿಕರಾದ ರಂಜು ಅವರ ಪುತ್ರ ಪುನೀತ್ (21) ಮೃತಪಟ್ಟ ಯುವಕ.
ರವಿವಾರ ಮಧ್ಯಾಹ್ನ ನಾಲ್ವರು ಹುಡುಗರ ತಂಡ ಬಲಮುರಿ ಕಾವೇರಿ ನದಿ ಸೇತುವೆಯ ಸಮೀಪ ಸ್ನಾನ ಮಾಡಲು ತೆರಳಿದ್ದರು. ಪುನೀತ್ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಇತರರು ರಕ್ಷಣೆಗೆ ಪ್ರಯತ್ನಿಸಿದರೂ ಅವರಿಂದ ಸಾಧ್ಯವಾಗಲಿಲ್ಲ. ಬಳಿಕ ಬಲಮುರಿ ನಿವಾಸಿ ಮುಳುಗು ತಜ್ಞ ಎಂ.ಆರ್. ಬಿಪಿನ್ ಅವರು ಮೃತದೇಹವನ್ನು ಪತ್ತೆಹಚ್ಚಿ ನೀರಿನಿಂದ ಮೇಲೆತ್ತಿದ್ದಾರೆ.

ನಾಪೋಕ್ಲು ಠಾಣೆ ಪೊಲೀಸರು ಘಟನ ಸ್ಥಳಕ್ಕೆ ತೆರಳಿ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.















