ಶಿವಮೊಗ್ಗ: (ನ್ಯೂಸ್ ಮಲ್ನಾಡ್ ವರದಿ) ಜಿಲ್ಲೆಯ ಸವಳಂಗ ರಸ್ತೆಯ ಕೊಮ್ಮನಾಳು ತಿರುವಿನ ಬಳಿ ಖಾಸಗಿ ಬಸ್ ಹಾಗೂ ದ್ವಿಚಕ್ರ ವಾಹನದ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು, ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲ್ಲೂಕಿನ ಹಳೇ ಜೋಗ ನಿವಾಸಿ ಶಿವಕುಮಾರ್ (32) ಮೃತ ದುರ್ದೈವಿ.
ರವಿವಾರ ರಾತ್ರಿ ಸುಮಾರು 9:30ರ ವೇಳೆಗೆ ಶಿವಕುಮಾರ್ ಅವರು ಶಿವಮೊಗ್ಗದಿಂದ ತಮ್ಮ ಸ್ವಗ್ರಾಮ ಹಳೇ ಜೋಗಕ್ಕೆ ಬೈಕ್‌ನಲ್ಲಿ ತೆರಳುತ್ತಿದ್ದರು. ಈ ವೇಳೆ ಹೊನ್ನಾಳಿಯಿಂದ ಶಿವಮೊಗ್ಗದ ಕಡೆಗೆ ಬರುತ್ತಿದ್ದ ಖಾಸಗಿ ಬಸ್ ಹಾಗೂ ಬೈಕ್ ನಡುವೆ ಕೊಮ್ಮನಾಳು ತಿರುವಿನಲ್ಲಿ ಮುಖಾಮುಖಿ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಶಿವಕುಮಾರ್ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಅಪಘಾತದ ವಿಷಯ ತಿಳಿಯುತ್ತಿದ್ದಂತೆಯೇ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ರಾಘವೇಂದ್ರ ಕಾಂಡಿಕೆ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

















