ಕೊಟ್ಟಿಗೆಹಾರ: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಭಾಗದಲ್ಲಿ ಕಾಡಾನೆ ಭೀತಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ದೇವನಗೂಲ್ ಸಮೀಪದ ಗುಡ್ಡಗ್ರಾಮದ ಹಳ್ಳಿ ರಸ್ತೆಯಲ್ಲೇ ನಿನ್ನೆ (ಎ.18) ಬೆಳಿಗ್ಗೆ ಒಂಟಿ ಸಲಗ ಪ್ರತ್ಯಕ್ಷವಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಕಳೆದ 3-4 ದಿನಗಳಿಂದ ಇದೇ ಪ್ರದೇಶದ ಸುತ್ತಮುತ್ತಲೇ ಬೀಡುಬಿಟ್ಟಿರುವ ಈ ಕಾಡಾನೆ, ಹೋಂಸ್ಟೇ ಸಮೀಪಕ್ಕೂ ಬಂದು ಕೆಲ ಕಾಲ ಅಲೆದಾಡಿ ಬಳಿಕ ಕಾಡಿನೊಳಗೆ ಕಣ್ಮರೆಯಾಗಿತ್ತು. ಇದೀಗ ಮತ್ತೆ ಜನವಸತಿ ಪ್ರದೇಶದ ಬಳಿ ಕಾಣಿಸಿಕೊಂಡಿರುವುದರಿಂದ ಗ್ರಾಮಸ್ಥರು ಭಯಭೀತರಾಗಿದ್ದಾರೆ.

ಸ್ಥಳೀಯರು ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿ, ಕಾಡಾನೆಯನ್ನು ಕಾಡಿನೊಳಗೆ ಓಡಿಸುವಂತೆ ಹಾಗೂ ಗ್ರಾಮ ಪ್ರದೇಶಕ್ಕೆ ಮರುಪ್ರವೇಶ ಮಾಡದಂತೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಈ ಸಂಬಂಧ ಅರಣ್ಯ ಇಲಾಖೆ ಕೂಡ ಎಚ್ಚರಿಕೆಯಿಂದ ಕಾರ್ಯಾಚರಣೆ ನಡೆಸುತ್ತಿದ್ದು, ಗ್ರಾಮಸ್ಥರಿಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವಂತೆ ಸೂಚಿಸಿದೆ.












