
ತೀರ್ಥಹಳ್ಳಿ: (ನ್ಯೂಸ್ ಮಲ್ನಾಡ್ ವರದಿ) ಹಸಿವಾಗಿದೆ ಎಂದು ಮನೆಯೊಂದರಲ್ಲಿ ಊಟ ಕೇಳಿ ಪಡೆದು, ಬಳಿಕ ಮೊಬೈಲ್ ಕದ್ದು ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿರುವ ಘಟನೆ ತೀರ್ಥಹಳ್ಳಿ ಪಟ್ಟಣದ ರಥಬೀದಿಯಲ್ಲಿ ನಡೆದಿದೆ.
ಅ. 27ರಂದು ಊಟದ ಸಮಯದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ರಥಬೀದಿಯ ಮನೆಯೊಂದಕ್ಕೆ ತೆರಳಿ, ತಾನು ಸುಸ್ತಾಗಿದ್ದು ಹಸಿವಾಗಿದೆ ಎಂದು ಹೇಳಿ ಊಟ ಕೇಳಿದ್ದಾನೆ. ಆತನ ಮಾತಿಗೆ ಸ್ಪಂದಿಸಿದ ಮನೆಯವರು ಮಾನವೀಯತೆಯಿಂದ ಊಟ ನೀಡಿದ್ದಾರೆ.

ಆದರೆ, ಊಟ ಮುಗಿಸಿ ಹೊರಡುವ ವೇಳೆ ಮನೆಯಲ್ಲಿದ್ದ ಮೊಬೈಲ್ ಫೋನ್ ಕದ್ದು ಪರಾರಿಯಾಗಿದ್ದಾನೆ. ಬಳಿಕ ಮೊಬೈಲ್ ಕಾಣೆಯಾಗಿರುವುದನ್ನು ಗಮನಿಸಿದ ಮನೆಯವರು ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡು ಆರೋಪಿಯನ್ನು ಪತ್ತೆಹಚ್ಚಿದ್ದಾರೆ. ಮಾಳೂರು ವ್ಯಾಪ್ತಿಯಲ್ಲಿ ಕದ್ದ ಮೊಬೈಲ್ ಮಾರಾಟ ಮಾಡಲು ಯತ್ನಿಸುತ್ತಿದ್ದ ವೇಳೆ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ.
ಕಳ್ಳತನವಾಗಿದ್ದ ಮೊಬೈಲ್ ಫೋನ್ ಅನ್ನು ವಶಪಡಿಸಿಕೊಂಡ ಪೊಲೀಸರು ವಾರಸುದಾರರಿಗೆ ಮರಳಿಸಿದ್ದಾರೆ.















