
ಕೊಪ್ಪ: (ನ್ಯೂಸ್ ಮಲ್ನಾಡ್ ವರದಿ) ಮಲೆನಾಡು ಮತ್ತು ಕರಾವಳಿ ಭಾಗದ ಹೆಮ್ಮೆಯ ಕ್ರೀಡಾ ಸಾಧಕಿಯರಾದ ಸ್ನೇಹಾ ಶಾನುವಳ್ಳಿ ಹಾಗೂ ಪೂವಮ್ಮ ಅವರಿಗೆ ನಾಳೆ (ಅ.31) ಕೊಪ್ಪದಲ್ಲಿ ನಾಗರಿಕ ಅಭಿನಂದನೆ ಕಾರ್ಯಕ್ರಮ ಆಯೋಜಿಸಲಾಗಿದೆ.
ಶೃಂಗೇರಿ ಕ್ಷೇತ್ರ ನಾಗರಿಕ ಅಭಿನಂದನಾ ಸಮಿತಿ ಹಾಗೂ ಈಶ-ಸ್ನೇಹ ಕ್ರೀಡಾ ನಿಧಿ ಸಂಸ್ಥೆಯ ವತಿಯಿಂದ ಮಧ್ಯಾಹ್ನ 2.30ಕ್ಕೆ ಪಟ್ಟಣದ ಲಾಲ್ ಬಹದ್ದೂರ್ ಶಾಸ್ತ್ರಿ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದೆ.

ಈ ಕುರಿತು ಮಾಹಿತಿ ನೀಡಿದ ಕಾರ್ಯಕ್ರಮದ ಸಂಚಾಲಕ ಸುಧೀರ್ ಕುಮಾರ್ ಮುರೊಳ್ಳಿ, ಏಷ್ಯಾಡ್ನಲ್ಲಿ ಸಾಧನೆ ಮಾಡಿದ ತಾಲ್ಲೂಕಿನ ಎಸ್.ಡಿ. ಈಶನ್ ಹಾಗೂ ಇತ್ತೀಚೆಗೆ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸ್ನೇಹಾ ಅವರ ಹೆಸರಿನಲ್ಲಿ ಈಶ-ಸ್ನೇಹ ಕ್ರೀಡಾ ನಿಧಿಯನ್ನು ಸ್ಥಾಪಿಸಿ, ವಿದ್ಯಾರ್ಥಿಗಳ ಕ್ರೀಡಾ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶ ಹೊಂದಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕ್ರೀಡಾ ಪ್ರೋತ್ಸಾಹಕರಾಗಿರುವ ಸಚಿವ ಸತೀಶ್ ಜಾರಕಿಹೊಳಿ, ಏಷ್ಯಾಡ್ ಸಾಧಕ ಎಸ್.ಡಿ. ಈಶನ್ ಹಾಗೂ ಪೂವಮ್ಮ ಭಾಗವಹಿಸಲಿದ್ದಾರೆ. ಶೃಂಗೇರಿ ಕ್ಷೇತ್ರದ ಕ್ರೀಡಾ ಸಾಧಕರನ್ನು ಗೌರವಿಸುವ ಮೂಲಕ ಮುಂದಿನ ಪೀಳಿಗೆಯ ಕ್ರೀಡಾಪಟುಗಳಿಗೆ ಪ್ರೇರಣೆ ನೀಡುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.













