ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಹಾಗೂ ಹರಿಹರಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಾರ್ವಜನಿಕರನ್ನು ಭಯಭೀತರನ್ನಾಗಿಸಿದ್ದ ಅಂತರ್ ಜಿಲ್ಲಾ ಸರಗಳ್ಳನನ್ನು ಬಂಧಿಸುವಲ್ಲಿ ಕೊಪ್ಪ ಉಪವಿಭಾಗದ ವಿಶೇಷ ಪೊಲೀಸ್ ತನಿಖಾ ತಂಡ ಯಶಸ್ವಿಯಾಗಿದೆ. ಬಂಧಿತ ಆರೋಪಿಯಿಂದ ₹4,83,000 ಮೌಲ್ಯದ ಚಿನ್ನಾಭರಣ ಮತ್ತು ಕೃತ್ಯಕ್ಕೆ ಬಳಸಿದ್ದ ಬೈಕ್‌ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಹಾಸನ ಜಿಲ್ಲೆಯ ಆಲೂರು ತಾಲೂಕಿನ ಮಾದಿಹಳ್ಳಿ ಮೂಲದ ಹಾಗೂ ಪ್ರಸ್ತುತ ಕೊಪ್ಪ ತಾಲೂಕಿನ ಜಯಪುರದ ಲಾರೆನ್ಸ್ ಹೌಸ್‌ನಲ್ಲಿ ವಾಸವಿದ್ದ ಪ್ರವೀಣ್ ಎಂ.ಬಿ. (25) ಬಂಧಿತ ಆರೋಪಿಯಾಗಿದ್ದಾನೆ. ಈತ ಬಿಂದು ಜೀರಾ ಕಂಪನಿಯಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

ಕಳೆದ ಡಿಸೆಂಬರ್ 5, 2025ರಂದು ಶೃಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ವಿದ್ಯಾರಣ್ಯಪುರ ಗ್ರಾಮದ ಭವಾನಿ ಅವರು ನಡೆದುಕೊಂಡು ಹೋಗುತ್ತಿದ್ದ ವೇಳೆ ಬೈಕ್‌ನಲ್ಲಿ ಬಂದ ಅಪರಿಚಿತ ವ್ಯಕ್ತಿ ಅವರ ಕುತ್ತಿಗೆಯಲ್ಲಿದ್ದ ಸುಮಾರು 24 ಗ್ರಾಂ ತೂಕದ ಚಿನ್ನದ ಸರವನ್ನು ಕಸಿದು ಪರಾರಿಯಾಗಿದ್ದ. ಈ ಕುರಿತು ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಬಿ.ಎನ್.ಎಸ್. ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ಗಂಭೀರತೆಯನ್ನು ಪರಿಗಣಿಸಿದ ಜಿಲ್ಲಾ ಪೊಲೀಸ್ ಅಧೀಕ್ಷಕ ಜೀತೇಂದ್ರ ಕುಮಾರ್ ದಾಯಮ ಅವರ ನಿರ್ದೇಶನದಂತೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಯಕುಮಾರ್ ಸಿ.ಟಿ. ಹಾಗೂ ಕೊಪ್ಪ ಡಿವೈಎಸ್ಪಿ ಬಾಲಾಜಿ ಸಿಂಗ್ ಮಾರ್ಗದರ್ಶನದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿತ್ತು.
ಶೃಂಗೇರಿ ಪೊಲೀಸ್ ನಿರೀಕ್ಷಕ ಅಬ್ದುಲ್ ಖಾದರ್ ನೇತೃತ್ವದ ತಂಡದಲ್ಲಿ ಪಿಎಸ್‌ಐಗಳಾದ ನಾಗರಾಜ್ ಬಿ.ಆರ್., ಅಭಿಷೇಕ್ ಕೆ., ಮಧು ಬಿ., ಶ್ರೀಧರ ನಾಯ್ಕ ಸೇರಿದಂತೆ ಸಿಬ್ಬಂದಿ ವೈಜ್ಞಾನಿಕ ಹಾಗೂ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಯಿತು.
ತೀವ್ರ ವಿಚಾರಣೆ ವೇಳೆ ಆರೋಪಿಯು ಶೃಂಗೇರಿ ಪ್ರಕರಣದ ಜೊತೆಗೆ ಹರಿಹರಪುರ ಪೊಲೀಸ್ ಠಾಣಾ ವ್ಯಾಪ್ತಿಯ ಹಾಲ್ಕತ್ತೂರು ಗ್ರಾಮದ ಲೋಕಪರಮೇಶ್ವರಿ ದೇವಸ್ಥಾನದ ರಸ್ತೆಯಲ್ಲಿ ಮಹಿಳೆಯೊಬ್ಬರ ಚಿನ್ನದ ಸರ ಕಳ್ಳತನ ಮಾಡಿರುವುದನ್ನೂ ಒಪ್ಪಿಕೊಂಡಿದ್ದಾನೆ.
ನ್ಯಾಯಾಲಯದ ಅನುಮತಿ ಮೇರೆಗೆ ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದ ಅಧಿಕಾರಿಗಳು, ಆತ ಶಿವಮೊಗ್ಗದಲ್ಲಿ ಮಾರಾಟ ಮಾಡಿದ್ದ ಒಟ್ಟು 30.830 ಗ್ರಾಂ ತೂಕದ ಚಿನ್ನದ ಸರವನ್ನು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ. ಜೊತೆಗೆ ಒಂದು ವಿವೋ ಮೊಬೈಲ್ ಫೋನ್ ಹಾಗೂ ಕೃತ್ಯಕ್ಕೆ ಬಳಸಿದ್ದ ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್‌ನ್ನೂ ಜಪ್ತಿ ಮಾಡಿದ್ದಾರೆ.
ಎರಡು ಪ್ರಮುಖ ಸರಗಳ್ಳತನ ಪ್ರಕರಣಗಳನ್ನು ಭೇದಿಸಿ ಕದ್ದ ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಶ್ರಮಿಸಿದ ಕೊಪ್ಪ ಉಪವಿಭಾಗದ ವಿಶೇಷ ಅಪರಾಧ ತನಿಖಾ ತಂಡದ ಅಧಿಕಾರಿಗಳು ಮತ್ತು ಸಿಬ್ಬಂದಿಯ ಸಮಯಪ್ರಜ್ಞೆ ಹಾಗೂ ಕರ್ತವ್ಯನಿಷ್ಠೆಯನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘಿಸಿದ್ದು, ಸೂಕ್ತ ಬಹುಮಾನ ಘೋಷಿಸಿದ್ದಾರೆ.












