ಹೊಳೆಹೊನ್ನೂರು: (ನ್ಯೂಸ್ ಮಲ್ನಾಡ್ ವರದಿ) ಸಮೀಪದ ಆನವೇರಿ ಗ್ರಾಮದ ಚಿನ್ನದ ಅಂಗಡಿಯಲ್ಲಿ ನಕಲಿ ಬಂಗಾರ ನೀಡಿ 1.60 ಲಕ್ಷ ರೂ. ಮೌಲ್ಯದ 11 ಗ್ರಾಂ ಅಸಲಿ ಚಿನ್ನಾಭರಣಗಳನ್ನು ಪಡೆದು ಮಹಿಳೆಯರ ತಂಡವೊಂದು ವಂಚಿಸಿರುವ ಘಟನೆ ಶನಿವಾರ (ಜು.25) ನಡೆದಿದೆ.
ಆನವೇರಿಯ ಪ್ರಕಾಶ್ ಜ್ಯುವೆಲ್ಲರ್ಸ್ ಮಾಲೀಕ ರಾಘವೇಂದ್ರ ಎಂ. ಶೆಟ್ ಅವರ ಪತ್ನಿ ಶೋಭಾ ಅವರು ಅಂಗಡಿಯಲ್ಲಿ ವ್ಯವಹಾರ ನೋಡಿಕೊಳ್ಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಮೊದಲು ಅಂಗಡಿಗೆ ಬಂದ ಮಹಿಳೆಯೊಬ್ಬಳು ತನ್ನ ಬಳಿಯಿದ್ದ ಹಳೆಯ ಚಿನ್ನದ ಬಳೆಯನ್ನು ನೀಡಿ, ಅದರ ಬದಲಿಗೆ ಕಿವಿಯೋಲೆ ಸೇರಿದಂತೆ ಇತರ ಚಿನ್ನಾಭರಣಗಳನ್ನು ಪಡೆದು ತೆರಳಿದ್ದಾಳೆ. ಕೆಲವೇ ಸಮಯದ ಬಳಿಕ ಅದೇ ಮಹಿಳೆ ಇನ್ನಿಬ್ಬರು ಮಹಿಳೆಯರನ್ನು ಕರೆದುಕೊಂಡು ಬಂದು, ತಮ್ಮ ಬಳಿಯೂ ಹಳೆಯ ಚಿನ್ನದ ಗುಂಡುಗಳಿವೆ ಎಂದು ನಂಬಿಸಿದ್ದಾರೆ. ಅವರು ಒಟ್ಟು 35 ಗ್ರಾಂ ತೂಕದ ಚಿನ್ನದ ಗುಂಡುಗಳನ್ನು ನೀಡಿ, ಅದರ ಬದಲಿಗೆ ಎರಡು ಚಿನ್ನದ ಉಂಗುರಗಳನ್ನು ಪಡೆದ ನಂತರ ಸ್ಥಳದಿಂದ ಪರಾರಿಯಾಗಿದ್ದಾರೆ.

ಸಂಜೆ ವೇಳೆ ಅಂಗಡಿಗೆ ಬಂದ ಮಾಲೀಕ ರಾಘವೇಂದ್ರ ಎಂ. ಶೆಟ್ ಅವರು ಮಹಿಳೆಯರು ನೀಡಿ ಹೋದ ಚಿನ್ನದ ಗುಂಡುಗಳನ್ನು ಪರೀಕ್ಷಿಸಿದಾಗ ಅವು ನಕಲಿ ಎಂಬುದು ಬೆಳಕಿಗೆ ಬಂದಿದೆ. ಈ ವಂಚನೆಯಿಂದ ಸುಮಾರು 1.60 ಲಕ್ಷ ರೂ. ಮೌಲ್ಯದ 11 ಗ್ರಾಂ ಅಸಲಿ ಚಿನ್ನಾಭರಣ ಕಳೆದು ಹೋಗಿರುವುದಾಗಿ ತಿಳಿದುಬಂದಿದೆ.

ಘಟನೆ ಸಂಬಂಧ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಅಂಗಡಿಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುವ ಮೂಲಕ ಮಹಿಳೆಯರ ತಂಡದ ಸುಳಿವು ಪತ್ತೆಹಚ್ಚಲು ಪೊಲೀಸರು ಮುಂದಾಗಿದ್ದಾರೆ.
















