ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಮರಗಸಿ ಕೆಲಸ ಮಾಡುವಾಗ 25 ಅಡಿ ಎತ್ತರದಿಂದ ಬಿದ್ದು ಕಾರ್ಮಿಕನೊಬ್ಬ ಸಾವನ್ನಪಿರುವ ಘಟನೆ ಸಂಭವಿಸಿದೆ. ಆಲ್ದೂರಿನ ಭೂತನಕಾಡು ನಿವಾಸಿಯಾದ ವಿಠಲ ಎಂಬುವವರು ಮೃತಪಟ್ಟ ದುರ್ದೈವಿ.
ಇವರು ಸೋಮವಾರಪೇಟೆಯ ತೋಟದಲ್ಲಿ ಸಿಲ್ವರ್ ಮರಗಸಿ ಕೆಲಸ ಮಾಡುತ್ತಿದ್ದಾಗ, ಸುಮಾರು 25 ಅಡಿ ಎತ್ತರದಿಂದ ಕಾಲು ಜಾರಿ ಕೆಳಗೆ ಬಿದ್ದಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಇವರನ್ನು ತಕ್ಷಣ ಚಿಕ್ಕಮಗಳೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಪರಿಸ್ಥಿತಿ ಗಂಭೀರವಾಗಿದ್ದರಿಂದ ವೈದ್ಯರ ಸಲಹೆಯ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಗೆ ಅಂಬುಲೆನ್ಸ್ನಲ್ಲಿ ಕರೆದೊಯ್ಯುವ ಮಾರ್ಗಮಧ್ಯದಲ್ಲಿಯೇ ವಿಠಲ ಅವರು ಕೊನೆಯುಸಿರೆಳೆದಿದ್ದಾರೆ.
ತೋಟದ ಮಾಲೀಕ ಮರ ಹತ್ತುವ ಕಾರ್ಮಿಕನಿಗೆ ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೆ ಹಾಗೂ ಸೂಕ್ತ ಸುರಕ್ಷತಾ ಸಲಕರಣೆಗಳನ್ನು ನೀಡದೆ ನಿರ್ಲಕ್ಷ್ಯ ವಹಿಸಿದ್ದೇ ತನ್ನ ಗಂಡನ ಸಾವಿಗೆ ನೇರ ಕಾರಣ ಎಂದು ಮೃತರ ಪತ್ನಿ ಅಶ್ವಿನಿ ದೂರು ನೀಡಿದ್ದು ಸದ್ಯ ಆಲ್ದೂರು ಪೊಲೀಸ್ ಠಾಣೆಯಲ್ಲಿ ತೋಟದ ಮಾಲೀಕನ ವಿರುದ್ಧ ನಿರ್ಲಕ್ಷ್ಯದ ಪ್ರಕರಣ ದಾಖಲಾಗಿದೆ.
ಚಿಕ್ಕಮಗಳೂರು: ಮರಗಸಿ ಕೆಲಸ ಮಾಡುವಾಗ 25 ಅಡಿ ಎತ್ತರದಿಂದ ಬಿದ್ದು ಕಾರ್ಮಿಕ ಸಾವು













