ಹೊಳೆಹೊನ್ನೂರು: (ನ್ಯೂಸ್ ಮಲ್ನಾಡ್ ವರದಿ) ಇಟ್ಟಿಗೆ ತುಂಬಿದ್ದ ಬೊಲೆರೋ ವಾಹನದ ಟಯರ್ ಸ್ಪೋಟಗೊಂಡು ಸಂಭವಿಸಿದ ಸರಣಿ ಅಪಘಾತದಲ್ಲಿ ಬುಲೆಟ್ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಪಟ್ಟಣ ಸಮೀಪದ ಜಾವಳ್ಳಿಯ ಜ್ಞಾನದೀಪ ಶಾಲೆ ಬಳಿ ಶನಿವಾರ ನಡೆದಿದೆ. ಶಿವಮೊಗ್ಗ ನಗರದ ಬಾಲಾಜಿ ಲೇಔಟ್ ನಿವಾಸಿ ಡಾ.ಎಸ್. ಸಂಪತ್ ಕುಮಾರ್ (33) ಮೃತ ದುದೈವಿ.
ಸಂಪತ್ ಶಿವಮೊಗ್ಗ ಜೆಎನ್ಎನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸಹ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದರು. ಪಟ್ಟಣದ ಕಡೆಯಿಂದ ಶಿವಮೊಗ್ಗ ಹೋಗುವಾಗ ಎದುರಿನಿಂದ ಇಟ್ಟಿಗೆ ತುಂಬಿಕೊಂಡು ಬರುತ್ತಿದ್ದ ಬೊಲೆರೋ ವಾಹನದ ಟಯರ್ ಬ್ಲಾಸ್ಟ್ ಆಗಿದೆ. ಪರಿಣಾಮ ಬೊಲೆರೋ ವಾಹನ ಚಾಲಕನ ನಿಯಂತ್ರಣ ತಪ್ಪಿದ ಸಂಪತ್ ಕುಮಾರ್ ಅವರ ಬುಲೆಟ್ ಬೈಕ್ಗೆ ಡಿಕ್ಕಿಯಾಗಿದೆ. ಬಳಿಕ ಎದುರಿನಿಂದ ಬರುತ್ತಿದ್ದ ಕಾರಿಗೂ ಡಿಕ್ಕಿ ಹೊಡೆದಿದೆ. ಈ ವೇಳೆ ಸಂಪತ್ ಕುಮಾರ್ ಅವರು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಕಾರಿನಲ್ಲಿದ್ದ 5ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.














