
ಎನ್. ಆರ್. ಪುರ: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆ ಎನ್. ಆರ್. ಪುರದಲ್ಲಿರುವ ಕೆನರಾ ಬ್ಯಾಂಕ್ ಶಾಖೆಯಲ್ಲಿ ನಡೆದ ಗಲಾಟೆ ಸಾರ್ವಜನಿಕರಲ್ಲಿ ಚರ್ಚೆಗೆ ಗ್ರಾಸವಾಗಿದೆ. ಬ್ಯಾಂಕಿನ ಕಾರ್ಯನಿರ್ವಹಣೆಯ ವೇಳೆಯಲ್ಲೇ ಈ ಅಹಿತಕರ ಘಟನೆ ನಡೆದಿದ್ದು, ಅದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮಾಹಿತಿಯಂತೆ, ಆಂಧ್ರ ಮೂಲದ ಕ್ಯಾಶಿಯರ್ ತನ್ನೊಂದಿಗೆ ಅಸಭ್ಯವಾಗಿ ವರ್ತಿಸಿದ್ದು, ಹಣ ಸಂಬಂಧಿತ ಕೆಲಸದ ಸಂದರ್ಭದಲ್ಲಿ ತನ್ನ ಕೈ ಹಿಡಿದು ಎಳೆದಿದ್ದಾರೆ ಎಂದು ಬ್ಯಾಂಕಿಗೆ ಬಂದಿದ್ದ ಮಹಿಳೆ ಗಂಭೀರ ಆರೋಪ ಮಾಡಿದ್ದಾರೆ.

ಈ ಘಟನೆಗೆ ಆಕ್ರೋಶಗೊಂಡ ಮಹಿಳೆ ಗ್ರಾಹಕರ ಸಮ್ಮುಖದಲ್ಲೇ ಕ್ಯಾಶಿಯರ್‌ನ ಕೊರಳಪಟ್ಟಿ ಹಿಡಿದು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಇಬ್ಬರೂ ಪರಸ್ಪರ ಆರೋಪ-ಪ್ರತ್ಯಾರೋಪಗಳನ್ನು ಮಾಡಿಕೊಂಡಿದ್ದಾರೆ. ಬ್ಯಾಂಕ್ ಒಳಗೇ ನಡೆದ ಈ ಗಲಾಟೆಯನ್ನು ಅಲ್ಲಿದ್ದ ಕೆಲವರು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದು, ವಿಡಿಯೋ ಈಗ ವೈರಲ್ ಆಗಿದೆ.

ಘಟನೆ ಎನ್.ಆರ್. ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದರೂ, ಇದುವರೆಗೆ ಇಬ್ಬರೂ ಯಾವುದೇ ಅಧಿಕೃತ ದೂರು ದಾಖಲಿಸಿಲ್ಲ ಎಂದು ತಿಳಿದುಬಂದಿದೆ.













