
ಕಡೂರು: (ನ್ಯೂಸ್ ಮಲ್ನಾಡ್ ವರದಿ) ದಾಖಲೆ ಇಲ್ಲದ ರಾಗಿಯನ್ನು ಸರ್ಕಾರದ ಕನಿಷ್ಠ ಬೆಂಬಲ ಬೆಲೆಯಲ್ಲಿ ಮಾರಾಟ ಮಾಡಲು ದಾಸ್ತಾನು ಮಾಡುತ್ತಿರುವ ಮಾಹಿತಿ ಆಧರಿಸಿ ತಾಲ್ಲೂಕಿನ ಪಂಚನಹಳ್ಳಿ ಗ್ರಾಮದ ಬೀರಲಿಂಗೇಶ್ವರ ದೇವಾಲಯ ಸಮೀಪದ ಸಾವೆ ಮರುಳಪ್ಪ ಎಂಬುವರ ಮನೆಯ ಮೇಲೆ ದಾಳಿ ಮಾಡಿದ ಆಹಾರ ಇಲಾಖೆ ಅಧಿಕಾರಿಗಳು ಒಂದು ಲಾರಿ, ಒಂದು ಟ್ರ್ಯಾಕ್ಟರ್ ಮತ್ತು 50 ಕೆ.ಜಿ ತೂಕದ 130 ಚೀಲ ರಾಗಿಯನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
ಕಡೂರು ಆಹಾರ ನಿರೀಕ್ಷಕ ಎಚ್.ಶ್ರೀನಿವಾಸ್ ಅವರು ಪರಿಶೀಲಿಸಿದಾಗ ಆರೋಪಿ ಮರುಳಪ್ಪ ಅವರ ಮನೆಯ ಮುಂದೆ ಚಿತ್ರದುರ್ಗ ನೋಂದಣಿಯ ಲಾರಿಯಲ್ಲಿ ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿದ್ದ 80 ಚೀಲ ರಾಗಿ ಮತ್ತು ನೋಂದಣಿ ಸಂಖ್ಯೆ ಇರದ ಟ್ರ್ಯಾಕ್ಟರ್‌ನಲ್ಲಿ 50 ಚೀಲ ರಾಗಿ ಪತ್ತೆಯಾಗಿತ್ತು. ಈ ಧಾನ್ಯಗಳ ಬಗ್ಗೆ ಮಾಹಿತಿ ಮತ್ತು ದಾಖಲೆ ಇರಲಿಲ್ಲ. ಆರೋಪಿ ತಲೆ ಮರೆಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಕ್ರಮವಾಗಿ ದಾಸ್ತಾನು ಮಾಡಲಾದ ರಾಗಿ ಮತ್ತು ದಾಸ್ತಾನು ಹೊಂದಿದ್ದ ಲಾರಿ ಮತ್ತು ಟ್ರ್ಯಾಕ್ಟರ್ ಅನ್ನು ಪಂಚನಹಳ್ಳಿ ಪೊಲೀಸರ ವಶಕ್ಕೆ ಒಪ್ಪಿಸಿದ ಶ್ರೀನಿವಾಸ್, ಮರುಳಪ್ಪ ಅವರ ವಿರುದ್ದ ಕ್ರಮ ವಹಿಸುವಂತೆ ದೂರು ದಾಖಲಿಸಿದ್ದಾರೆ. ಪಂಚನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.














