ಸಂಸೆ: ಎಸ್‌ಡಿಎಂ ಐ.ಟಿ.ಐ ಕಾಲೇಜಿನಲ್ಲಿ ಉದ್ಯೋಗಾವಕಾಶ, ಸ್ವಯಂ ಉದ್ಯೋಗ ಜಾಗೃತಿ ಕಾರ್ಯಕ್ರಮ

ಸಂಸೆ: (ನ್ಯೂಸ್ ಮಲ್ನಾಡ್ ವರದಿ) ಪರಮಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ದಿವ್ಯ ಮಾರ್ಗದರ್ಶನ ಹಾಗೂ ಆಶೀರ್ವಾದದೊಂದಿಗೆ ನಡೆಯುತ್ತಿರುವ ಸಂಸೆಯ ಎಸ್‌ಡಿಎಂ ಐ.ಟಿ.ಐ ಕಾಲೇಜಿನಲ್ಲಿ ಗುರುವಾರ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ದಾರಿದೀಪವಾಗುವ ವಿಶೇಷ “ಉದ್ಯೋಗಾವಕಾಶ ಮತ್ತು ಸ್ವಯಂ ಉದ್ಯೋಗ ಜಾಗೃತಿ ಕಾರ್ಯಕ್ರಮ” ಯಶಸ್ವಿಯಾಗಿ ನಡೆಯಿತು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಮತ್ತೊಂದು ಮಹತ್ತರ ಸಾಧನೆಯನ್ನು ಹಂಚಿಕೊಳ್ಳಲಾಯಿತು. 2026-27ನೇ ಸಾಲಿನ ಅಖಿಲ ಭಾರತ ಮಟ್ಟದ ಅಧಿಕೃತ ಗ್ರೇಡಿಂಗ್‌ನಲ್ಲಿ ಎಸ್‌ಡಿಎಂ ಐ.ಟಿ.ಐ ಕಾಲೇಜು 10 ಅಂಕಗಳಿಗೆ 8.3 ಅಂಕಗಳನ್ನು ಪಡೆದು ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದಿದೆ. ಶೇಕಡಾ ನೂರರಷ್ಟು ಪ್ರವೇಶಾತಿ, ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆ, ಗ್ರಾಮೀಣ ಹಾಗೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಗುಣಮಟ್ಟದ ಶಿಕ್ಷಣ ಮತ್ತು ವಿಶೇಷ ಕೌಶಲ್ಯ ತರಬೇತಿಗಳನ್ನು ಪರಿಗಣಿಸಿ ಈ ಉನ್ನತ ಶ್ರೇಯಾಂಕ ನೀಡಲಾಗಿದೆ.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಸತೀಶ್ ಮಾತನಾಡಿ, “ಇಂದಿನ ದಿನಗಳಲ್ಲಿ ಐ.ಟಿ.ಐ ವಿದ್ಯಾರ್ಥಿಗಳಿಗೆ ಖಾಸಗಿ ಕಂಪನಿಗಳಷ್ಟೇ ಅಲ್ಲದೆ ಬಹುರಾಷ್ಟ್ರೀಯ ಸಂಸ್ಥೆಗಳು, ಸಾರ್ವಜನಿಕ ವಲಯದ ಉದ್ದಿಮೆಗಳು, ಕೇಂದ್ರ ಸರ್ಕಾರಿ ಉದ್ಯೋಗಗಳು ಹಾಗೂ ಸ್ವಯಂ ಉದ್ಯೋಗ ಕ್ಷೇತ್ರಗಳಲ್ಲಿ ಅಪಾರ ಅವಕಾಶಗಳಿವೆ” ಎಂದು ಹೇಳಿದರು.

ವಿದ್ಯಾರ್ಥಿಗಳ ಕೌಶಲ್ಯ ಅಭಿವೃದ್ಧಿಯ ಕುರಿತು ಮಾತನಾಡಿದ ಅವರು, ಉಜಿರೆಯ ರುಡ್‌ಸೆಟ್ ಸಂಸ್ಥೆಯಲ್ಲಿ ದೊರೆಯುವ ಮೋಟಾರ್ ರಿವೈಂಡಿಂಗ್, ಮೊಬೈಲ್ ರಿಪೇರಿ ತರಬೇತಿಗಳು ಹಾಗೂ ಚಿಕ್ಕಮಗಳೂರಿನ ಮಹೀಂದ್ರಾ ಸಹಯೋಗದಲ್ಲಿ ನಡೆಯುವ ದ್ವಿಚಕ್ರ ವಾಹನ ಮೆಕಾನಿಕ್ ತರಬೇತಿಗಳು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮತ್ತು ಸ್ವಾವಲಂಬನೆಯನ್ನು ಬೆಳೆಸಲಿವೆ ಎಂದು ತಿಳಿಸಿದರು.

ಉಜಿರೆಯ ರುಡ್‌ಸೆಟ್ ಸಂಸ್ಥೆಯ ತರಬೇತುದಾರರಾದ ಅಬ್ರಹಾಂ ಜೇಮ್ಸ್ ಮತ್ತು ಮಿನಿ ಜೇಮ್ಸ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ, ಸ್ವಯಂ ಉದ್ಯೋಗದ ಮಹತ್ವ, ಉದ್ಯಮಶೀಲತೆ ಹಾಗೂ ಸಂಸ್ಥೆಯಿಂದ ದೊರೆಯುವ ಉಚಿತ ತರಬೇತಿ ಮತ್ತು ಆರ್ಥಿಕ ನೆರವುಗಳ ಕುರಿತು ಮಾಹಿತಿ ನೀಡಿದರು.

ಇತ್ತೀಚೆಗೆ ನಡೆದ ಕ್ಯಾಂಪಸ್ ಆಯ್ಕೆ ಪ್ರಕ್ರಿಯೆಯಲ್ಲಿ ಟೊಯೋಟಾ, ಬಾಷ್, ಸನ್‌ಸೆರಾ ಹಾಗೂ ವರುಣ್ ಮೋಟಾರ್ಸ್ ಮೊದಲಾದ ಪ್ರತಿಷ್ಠಿತ ಸಂಸ್ಥೆಗಳಿಗೆ ಆಯ್ಕೆಯಾದ ದ್ವಿತೀಯ ವರ್ಷದ ವಿದ್ಯಾರ್ಥಿಗಳನ್ನು ಕಾಲೇಜಿನ ಹಳೆಯ ವಿದ್ಯಾರ್ಥಿ ರೇವಣ್ಣ (ಚಿತ್ರದುರ್ಗ) ವಿಶೇಷ ಸಂದೇಶದ ಮೂಲಕ ಅಭಿನಂದಿಸಿದರು. ಸಂಸ್ಥೆಯ ವಿದ್ಯಾರ್ಥಿಗಳು ಹೆಸರಾಂತ ಕಂಪನಿಗಳಿಗೆ ಆಯ್ಕೆಯಾಗಿರುವುದು ಕಾಲೇಜಿನ ಹೆಮ್ಮೆಯ ವಿಷಯ ಎಂದು ಅವರು ಸಂತಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಪ್ರಾಂಶುಪಾಲರು ಹಾಗೂ ಬೋಧಕ ಸಿಬ್ಬಂದಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನವನ್ನು ಸ್ಮರಿಸಿ, ಅಖಿಲ ಭಾರತ ಮಟ್ಟದ ಸಾಧನೆಗೆ ಕಾರಣರಾದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಅಲ್ಲದೆ ಕ್ಯಾಂಪಸ್ ಆಯ್ಕೆಯಾದ ವಿದ್ಯಾರ್ಥಿಗಳನ್ನು ಅಭಿನಂದಿಸಿ, ಎಲ್ಲ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ಶುಭ ಹಾರೈಸಿದರು.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.