ಮಡಿಕೇರಿ: (ನ್ಯೂಸ್ ಮಲ್ನಾಡ್ ವರದಿ) ಕುಶಾಲನಗರ ವಲಯ ವ್ಯಾಪ್ತಿಯ ಆನೆಕಾಡು ಶಾಖೆಯ 7ನೇ ಹೊಸಕೋಟೆ ಗ್ರಾಮದ ತೊಂಡೂರು ಭಾಗದಲ್ಲಿ ಸುಮಾರು 25 ವರ್ಷ ಪ್ರಾಯದ ಗಂಡು ಕಾಡಾನೆಯೊಂದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಕೆ.ಟಿ. ಸಲಿಕುಮಾರ್ ಅವರ ತೋಟದ ಕೆಳಭಾಗದಲ್ಲಿರುವ ಕೆಸರಿನಿಂದ ಕೂಡಿದ ತೋಡಿನಲ್ಲಿ ಆನೆ ಸಾವನ್ನಪ್ಪಿರುವುದು ಕಂಡುಬಂದಿದೆ. ಓಡುವ ಸಂದರ್ಭದಲ್ಲಿ ಆನೆ ಕೆಸರಿನ ತೋಡಿನಲ್ಲಿ ಸಿಲುಕಿ ಮೃತಪಟ್ಟಿರಬಹುದೆಂದು ಅರಣ್ಯ ಇಲಾಖೆ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.

ಘಟನಾ ಸ್ಥಳದಲ್ಲಿ ತೋಟಕ್ಕೆ ಅಳವಡಿಸಲಾಗಿದ್ದ ಸೋಲಾರ್ ವಿದ್ಯುತ್ ತಂತಿಯೂ ಕಡಿತಗೊಂಡಿರುವುದು ಕಂಡುಬಂದಿದ್ದು, ಅದರ ಮೇಲೆಯೇ ಆನೆ ಬಿದ್ದಿರುವ ಸಾಧ್ಯತೆಯೂ ಇದೆ ಎಂದು ತಿಳಿದುಬಂದಿದೆ. ಆದರೆ ಆನೆಯ ಸಾವಿಗೆ ನಿಖರ ಕಾರಣ ಏನೆಂಬುದು ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕವೇ ಸ್ಪಷ್ಟವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆನೆಯ ಮರಣೋತ್ತರ ಪರೀಕ್ಷೆ ಪೂರ್ಣಗೊಳಿಸಿದ ಬಳಿಕ ಮೃತದೇಹವನ್ನು ದಫನ ಮಾಡಲಾಗಿದೆ.
















