ಸೋಮವಾರಪೇಟೆ: (ನ್ಯೂಸ್ ಮಲ್ನಾಡ್ ವರದಿ) ಶಿಕಾರಿಪುರ ದಿಂದ ಮಡಿಕೇರಿಗೆ ಉಪ್ಪಿನಕಾಯಿ ಸಾಗಣೆ ಮಾಡುತ್ತಿದ್ದ ಕಂಟೇನರ್ ಲಾರಿ ರಸ್ತೆ ಬದಿಯ ತೋಟಕ್ಕೆ ನುಗ್ಗಿದ ಪರಿಣಾಮ ಓರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಕೇರಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಶನಿವಾರ ಸಂಭವಿಸಿದೆ.
ಸಾಮಾನ್ಯವಾಗಿ ಶಿಕಾರಿಪುರದಿಂದ ಮಡಿಕೇರಿಗೆ ತೆರಳುತ್ತಿದ್ದ ವಾಹನವು ಐಗೂರು ಮಾರ್ಗವಾಗಿ ತೇರಳುತ್ತದೆ. ಆದರೆ ಸೇತುವೆ ನಿರ್ಮಾಣ ಕಾಮಗಾರಿ ಹಿನ್ನೆಲೆಯಲ್ಲಿ ಚಾಲಕ ವಾಹನವನ್ನು ತಾಕೇರಿ ಮಾರ್ಗವಾಗಿ ಮಡಿಕೇರಿಗೆ ಕೊಂಡೊಯ್ಯಲು ಮುಂದಾಗಿದ್ದು ಈ ವೇಳೆ ಕಡಿದಾದ ಇಳಿಜಾರು ರಸ್ತೆಯಲ್ಲಿ ವಾಹನದ ಬ್ರೇಕ್ ವಿಫಲಗೊಂಡ ಪರಿಣಾಮ ನಿಯಂತ್ರಣ ತಪ್ಪಿ ರಸ್ತೆ ಬದಿಯ ತೋಟಕ್ಕೆ ನುಗ್ಗಿದೆ ಎನ್ನಲಾಗಿದೆ.

ಅಪಘಾತದಿಂದ ವಾಹನಕ್ಕೂ ಹಾನಿಯಾಗಿದ್ದು, ಸ್ಥಳೀಯರು ನೆರವಿಗೆ ಧಾವಿಸಿ ಗಾಯಾಳುವನ್ನು ಸೋಮವಾರಪೇಟೆ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

















