ಮಡಿಕೇರಿ: (ನ್ಯೂಸ್ ಮಲ್ನಾಡ್ ವರದಿ) ಹಾತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಪೂರೈಕೆಯಾಗಿದ್ದ ರಸಗೊಬ್ಬರ ಚೀಲಗಳ ತೂಕದಲ್ಲಿ ವ್ಯತ್ಯಾಸ ಕಂಡುಬಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಮಾಪನಶಾಸ್ತ್ರ ಇಲಾಖೆ ಇಂಡಿಯನ್ ಪೊಟಾಶ್ ಲಿಮಿಟೆಡ್ (ಐಪಿಎಲ್) ವಿರುದ್ಧ ಕೇಸು ದಾಖಲಿಸಿಕೊಂಡು ₹5 ಲಕ್ಷ ದಂಡ ವಿಧಿಸಿದೆ.
ಕೆಲವು ದಿನಗಳ ಹಿಂದೆ ಸಂಘಕ್ಕೆ ಬಂದಿದ್ದ 50 ಕೆಜಿ ತೂಕದ ಗೊಬ್ಬರ ಚೀಲಗಳಲ್ಲಿ ತೂಕ ಕಡಿಮೆಯಿರುವುದು ಪತ್ತೆಯಾಗಿತ್ತು. ಈ ಕುರಿತು ಸಂಘದ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ ನೇತೃತ್ವದಲ್ಲಿ ಗೊಬ್ಬರದ ಚೀಲವನ್ನು ಜಂಟಿ ಕೃಷಿ ನಿರ್ದೇಶಕರ ಕಚೇರಿಗೆ ತೆಗೆದುಕೊಂಡು ಹೋಗಿ ತೂಕ ಪರಿಶೀಲನೆ ನಡೆಸಲಾಗಿತ್ತು. ಈ ವೇಳೆ ತೂಕದಲ್ಲಿ ವ್ಯತ್ಯಾಸ ಇರುವುದನ್ನು ಬಹಿರಂಗಪಡಿಸಲಾಗಿತ್ತು.

ಘಟನೆ ಬೆಳಕಿಗೆ ಬಂದ ಬಳಿಕ ಕೃಷಿ ಇಲಾಖೆ ಅಧಿಕಾರಿಗಳು ಸಂಬಂಧಪಟ್ಟ ಸಂಸ್ಥೆಗೆ ನೋಟಿಸ್ ಜಾರಿ ಮಾಡಿದ್ದರು. ಬಳಿಕ ಕಾನೂನು ಮಾಪನಶಾಸ್ತ್ರ ಇಲಾಖೆ ತನಿಖೆ ನಡೆಸಿ ಐಪಿಎಲ್ ಸಂಸ್ಥೆಗೆ ದಂಡ ವಿಧಿಸಿದೆ.

ದಂಡ ವಿಧಿಸಿದ ನಂತರ ಸಂಘದಲ್ಲಿ ದಾಸ್ತಾನಿರಿಸಿದ್ದ ಗೊಬ್ಬರ ಚೀಲಗಳನ್ನು ಸಂಬಂಧಪಟ್ಟ ಸಂಸ್ಥೆಗೆ ಹಿಂದಿರುಗಿಸಲು ಸಹಕಾರ ಸಂಘಕ್ಕೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
















