ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಪಟ್ಟಣದಿಂದ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 173 ಮತ್ತು 73 ರಸ್ತೆ ಬದಿ ಕಸದ ರಾಶಿ ರಾರಾಜಿಸುತ್ತಿದ್ದು, ಇದರಿಂದ ಸಾಂಕ್ರಾಮಿಕ ರೋಗ ಹರಡುವ ಬೀತಿ ಉಂಟಾಗಿದೆ. ಕೂಡಲೇ ರಸ್ತೆ ಬದಿಯಲ್ಲಿರುವ ಎಲ್ಲಾ ತ್ಯಾಜ್ಯವನ್ನು ತೆರವುಗೊಳಿಸಬೇಕೆಂದು ವಿಶ್ವಹಿಂದೂ ಪರಿಷತ್ ಮುಖಂಡರು ಶುಕ್ರವಾರ ತಹಶೀಲ್ದಾರ್ ಎಸ್.ಅಶ್ವಿನಿ ಅವರಿಗೆ ಮನವಿ ಸಲ್ಲಿಸಿದರು.
ಹೆಸಗಲ್ ಗ್ರಾ.ಪಂ. ವ್ಯಾಪ್ತಿಯ ಕೊಲ್ಲಿಬೈಲು ಸರ್ಕಲ್, ಹಳೆಮೂಡಿಗೆರೆ ಗ್ರಾ.ಪಂ. ವ್ಯಾಪ್ತಿಯ ಹ್ಯಾಂಡ್ಪೋಸ್ಟ್ ಸರ್ಕಲ್, ಕೃಷ್ಣಾಪುರ, ಬಿದರಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಬಿದರಹಳ್ಳಿ ಸೇರಿದಂತೆ ಅನೇಕ ಕಡೆ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲೇ ಕಸ ಹಾಕುತ್ತಿದ್ದು, ಈ ಕಸದ ರಾಶಿಯಿಂದ ಹೊರ ಹೊಮ್ಮುವ ದುರ್ವಾಸನೆಯಿಂದ ರಸ್ತೆ ಸಂಚಾರಕ್ಕೆ ನರಕಯಾತನೆಯಾಗಿದೆ. ಇದಕ್ಕೆ ಗ್ರಾ.ಪಂ. ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯವೇ ಮುಖ್ಯ ಕಾರಣವಾಗಿದೆ.

ಇನ್ನು ಕೆಲವೇ ದಿನದಲ್ಲಿ ಮಳೆಗಾಲ ಪ್ರಾರಂಭಗೊಳ್ಳಲಿದ್ದು, ಇಲ್ಲಿರುವ ತ್ಯಾಜ್ಯದಿಂದ ಪರಿಸರ ಹಾಳಾಗುವ ಜೊತೆಗೆ ಕಸದ ರಾಶಿ ಹಳ್ಳ, ಕೊಳ್ಳ ಹಾಗೂ ನದಿಗೆ ಸೇರಿ ನೀರು ಕೂಡ ಕಲುಶಿತಗೊಳ್ಳುತ್ತದೆ. ಹಾಗಾಗಿ ಕೂಡಲೇ ಕಸ ತೆರವುಗೊಳಿಸಿ, ರಸ್ತೆ ಬದಿ ಕಸ ಹಾಕುವವರ ವಿರುದ್ಧ ಕಠಿಣ ಕ್ರಮ ಜರುಗಿಸಿ, ಮೇ ತಿಂಗಳ ಅಂತ್ಯದೊಳಗೆ ಪರಿಸರ ನಾಶಕ್ಕೆ ಮುಕ್ತಿ ದೊರಕಿಸಬೇಕು. ಇಲ್ಲವಾದರೆ ಆ ಕಸವನ್ನು ಸಂಬಂಧಪಟ್ಟ ಗ್ರಾ.ಪಂ. ಅವರಣಕ್ಕೆ ಸುರಿದು ಪ್ರತಿಭಟನೆ ನಡೆಸಲಾಗುವುದು ಎಂದು ಮನವಿಯಲ್ಲಿ ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಪರಿಷತ್ತಿನ ತಾಲೂಕು ಅಧ್ಯಕ್ಷ ಸುದೇವ್ ಗುತ್ತಿ, ಉಪಾಧ್ಯಕ್ಷ ಅಭಿಲಾಷ್ ಉಗ್ಗೇಹಳ್ಳಿ, ಕಾರ್ಯದರ್ಶಿ ಪ್ರಶಾಂತ್ ಹಂಡುಗುಳಿ, ಬಜರಂಗದಳದ ತಾಲೂಕು ಸಂಯೋಜಕ ಸಂತೋಷ್, ರಾಘವೇಂದ್ರ, ಜನ್ನಾಪುರ, ಯತೀಶ್ ಮೂಡಿಗೆರೆ, ನಾಗೇಶ್ ಮೇಗಲಪೇಟೆ ಉಪಸ್ಥಿತರಿದ್ದರು.












