ಹಾಸನ/ಕಡೂರು: (ನ್ಯೂಸ್ ಮಲ್ನಾಡ್ ವರದಿ) ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಬಾಣಾವರ ಸಮೀಪದ ಚಿಕ್ಕಾರಹಳ್ಳಿ ಗೋಶಾಲೆ ಬಳಿ ರಾಷ್ಟ್ರೀಯ ಹೆದ್ದಾರಿ 69ರಲ್ಲಿ ಗುರುವಾರ ಹಸಿ ಅಡಿಕೆ ಸಾಗಿಸುತ್ತಿದ್ದ ಬೊಲೆರೊ ವಾಹನದ ಟೈರ್ ಸಿಡಿದು, ಪಲ್ಟಿಯಾಗಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಓರ್ವ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದು, ಮತ್ತೋರ್ವನಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಇದನ್ನೂ ಓದಿ: ಹೊಸ ವರ್ಷವನ್ನು ವಿಶಿಷ್ಟ ಡೂಡಲ್ ಮೂಲಕ ಸ್ವಾಗತಿಸಿದ ಗೂಗಲ್

ಅಪಘಾತದಲ್ಲಿ ಮೃತಪಟ್ಟವರನ್ನು ಕಡೂರು ತಾಲ್ಲೂಕಿನ ತಂಗಲಿ ಗ್ರಾಮದ ಶಬೀರ್ (55), ಕಾನಗೊಂಡನಹಳ್ಳಿ ಗ್ರಾಮದ ತಿಮ್ಮಭೋವಿ (53) ಹಾಗೂ ಸಂಜಯ್ (45) ಎಂದು ಗುರುತಿಸಲಾಗಿದೆ. ಅರಸೀಕೆರೆ ಮೂಲದ ನೌಶದ್ ಎಂಬಾತ ಗಂಭೀರ ಗಾಯಗೊಂಡು ಅರಸೀಕೆರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎನ್ನಲಾಗಿದೆ.
ಅಡಿಕೆ ಕೊಯ್ಲಿಗಾಗಿ ತೆರಳಿದ್ದ ಕಾರ್ಮಿಕರು ಅಡಕೆ ಚೀಲಗಳನ್ನು ಬೊಲೆರೋ ಪಿಕಪ್ ವಾಹನದಲ್ಲಿ ತುಂಬಿಕೊಂಡು ಕಡೂರು ಮಾರ್ಗದ ಬಾಣಾವರ ಟೋಲ್ ರಸ್ತೆಯ ಚಿಕ್ಕಾರಹಳ್ಳಿ ಗೋಶಾಲೆ ಗೇಟ್ ಸಮೀಪ ಬರುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಟೈರ್ ಸ್ಫೋಟಗೊಂಡ ತಕ್ಷಣ ವಾಹನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಪರಿಣಾಮ ಅಡಿಕೆ ತುಂಬಿದ ಚೀಲಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ.
ಇದನ್ನೂ ಓದಿ: ಹೊಸ ವರ್ಷಕ್ಕೆ ಎಲ್ಪಿಜಿ ಬೆಲೆ ಏರಿಕೆಯ ಶಾಕ್
ಈ ಸಂಬಂಧ ಬಾಣಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.












