ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ವೃದ್ಧ ರೈತರೊಬ್ಬರ ಮೇಲೆ ಹಲ್ಲೆ ನಡೆಸಿ ಹಣ ದೋಚಿದ್ದ ಇಬ್ಬರು ಅಂತರ್ ಜಿಲ್ಲಾ ದರೋಡೆಕೋರರನ್ನು ಚಿಕ್ಕಮಗಳೂರು ನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ: ರೈತರಿಗೆ ಸಿಹಿ ಸುದ್ದಿ ಕೊಟ್ಟ ರಾಜ್ಯ ಸರ್ಕಾರ; ಬೆಂಬಲ ಬೆಲೆ ಯೋಜನೆಯಡಿಯಲ್ಲಿ ವಿವಿಧ ಬೆಳೆಗಳ ಖರೀದಿ ಅವಧಿ ವಿಸ್ತರಣೆ

ಕುರಿಚಿಕ್ಕನಹಳ್ಳಿಯ ನಿಂಗೇಗೌಡ ಎಂಬ ರೈತ ಬೆಳೆದಿದ್ದ ಆಲೂಗಡ್ಡೆ ಮತ್ತು ಬೀನ್ಸ್ ಅನ್ನು ಎಪಿಎಂಸಿಯಲ್ಲಿ ಮಾರಿ ಬಂದ 50,000 ರೂಪಾಯಿ ನಗದಿನೊಂದಿಗೆ ಊರಿಗೆ ಮರಳಲು ಫೆಬ್ರವರಿ 16ರ ಬೆಳಿಗ್ಗೆ ಎಐಟಿ ಸರ್ಕಲ್ ಬಳಿ ಬಸ್ಗಾಗಿ ಕಾಯುತ್ತಿದ್ದ ವೇಳೆ ಬೈಕ್ನಲ್ಲಿ ಬಂದ ಇಬ್ಬರು ಅಪರಿಚಿತರು, “ನಾವು ಸಖರಾಯಪಟ್ಟಣದ ಕಡೆಗೇ ಹೋಗುತ್ತಿದ್ದೇವೆ. ಬನ್ನಿ ನಿಮ್ಮ ಊರಿಗೆ ಬಿಡುತ್ತೇವೆ” ಎಂದು ನಂಬಿಸಿ ವೃದ್ಧರನ್ನು ಬೈಕ್ ಹತ್ತಿಸಿಕೊಂಡಿದ್ದಾರೆ. ಕಣಿವೆ ದೇವಸ್ಥಾನದ ಬಳಿ ತಲುಪುತ್ತಿದ್ದಂತೆ ರೈತನ ಬಾಯಿ ಮುಚ್ಚಿ ಎದೆ ಹಾಗೂ ಮುಖಕ್ಕೆ ಮನಸೋಇಚ್ಛೆ ಹಲ್ಲೆ ನಡೆಸಿ ಅವರ ಬಳಿಯಿದ್ದ ಸಂಪೂರ್ಣ ಹಣವನ್ನು ಕಿತ್ತುಕೊಂಡು ಪರಾರಿಯಾಗಿದ್ದರು.
ಘಟನೆ ನಡೆದ ತಕ್ಷಣ ಎಚ್ಚೆತ್ತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಜಿತೇಂದ್ರ ಕುಮಾರ್ ದಯಾಮ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಿ.ಟಿ ಜಯಕುಮಾರ್ ಅವರ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ನಗರ ಪೊಲೀಸ್ ನಿರೀಕ್ಷಕ ಅಭಯ್ ಪ್ರಕಾಶ್ ಸೋಮನಾಳ್ ನೇತೃತ್ವದ ತಂಡವು ತುಮಕೂರು ಜಿಲ್ಲೆಯ ತುರುವೇಕೆರೆ ಮೂಲದ ಧನಪಾಲ (18) ಹಾಗೂ ಒಬ್ಬ ಅಪ್ರಾಪ್ತ ಬಾಲಕನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇನ್ನು ಬಂಧಿತರಿಂದ ದೋಚಲಾದ ಹಣದಲ್ಲಿ 29,500 ರೂಪಾಯಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.












