ಕೊಟ್ಟಿಗೆಹಾರ ಸಮೀಪದ ದೇವನಗುಲ್ ಅರಣ್ಯ ಪ್ರದೇಶದಲ್ಲಿ ಸುಮಾರು 65 ರಿಂದ 70 ವರ್ಷದೊಳಗಿನ ಅಪರಿಚಿತ ವೃದ್ಧನ ಶವ ಪತ್ತೆಯಾಗಿದೆ.
ಕಳೆದ ಮೂರು–ನಾಲ್ಕು ದಿನಗಳಿಂದ ರಸ್ತೆ ಬದಿಯ ಅಂಗಡಿಗಳ ಬಳಿ ಈ ವೃದ್ಧ ಅಲೆದಾಡುತ್ತಿದ್ದು, ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದನೆಂದು ಸ್ಥಳೀಯರು ತಿಳಿಸಿದ್ದಾರೆ. ಊರು ಯಾವುದು ಎಂದು ಕೇಳಿದಾಗ “ಮಂಡ್ಯ” ಎಂದು ಹೇಳುತ್ತಿದ್ದನೆಂದು ಅಂಗಡಿ ಯುವಕರು ಮಾಹಿತಿ ನೀಡಿದ್ದಾರೆ.

ಗ್ರಾಮ ಪಂಚಾಯಿತಿ ತ್ಯಾಜ್ಯ ವಿಲೇವಾರಿ ಸ್ಥಳದ ಬಳಿ ಬೇಲಿ ನಿರ್ಮಾಣ ಕಾರ್ಯ ನಡೆಸುತ್ತಿದ್ದ ಸ್ಥಳೀಯರು ಅರಣ್ಯದ ಒಳಭಾಗದಲ್ಲಿ ಶವವನ್ನು ಗಮನಿಸಿ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಪಿಎಸ್ಐ ದಿಲೀಪ್ ಕುಮಾರ್ ಪರಿಶೀಲನೆ ನಡೆಸಿದರು.
ಪ್ರಾಥಮಿಕ ತನಿಖೆಯಲ್ಲಿ ಮೃತದೇಹದ ಮೇಲೆ ಯಾವುದೇ ಹಲ್ಲೆ ಅಥವಾ ಗಾಯದ ಗುರುತುಗಳು ಕಂಡುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಬಳಿಕ ಸಮಾಜ ಸೇವಕ ಆರಿಫ್ ಅವರ ಆಂಬುಲೆನ್ಸ್ ಮೂಲಕ ಶವವನ್ನು ಚಿಕ್ಕಮಗಳೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆ ಹಾಗೂ ಗುರುತು ಪತ್ತೆ ಕಾರ್ಯ ಕೈಗೊಳ್ಳಲಾಗಿದೆ.
ಈ ನಡುವೆ, ಅರಣ್ಯದ ಒಳಭಾಗದಿಂದ ರಸ್ತೆವರೆಗೆ ಶವವನ್ನು ಸ್ವತಃ ಹೊತ್ತು ತಂದ ಪಿಎಸ್ಐ ದಿಲೀಪ್ ಕುಮಾರ್ ಅವರ ಮಾನವೀಯ ಕಾರ್ಯ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಕುರಿತು ಬಣಕಲ್ ಪೊಲೀಸ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಮುಂದುವರಿಸಿದ್ದಾರೆ. (ವರದಿ- ತನು ಕೊಟ್ಟಿಗೆಹಾರ)












