ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಇಲ್ಲಿನ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ರಾಜೀವಗಾಂಧೀ ಪರಿಸರದ ಮೂವತ್ತಮೂರನೆಯ ವಾರ್ಷಿಕೋತ್ಸವವನ್ನು ಮಂಗಳವಾರ ಕಾಲೇಜಿನ ಸುದುಘಾ ಸಭಾಭವನದಲ್ಲಿ ದಕ್ಷಿಣಾಮ್ನಾಯ ಶಾರದಾ ಪೀಠದ ಜಗದ್ಗುರುಗಳಾದ ಶ್ರೀ ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಆಚರಿಸಲಾಯಿತು.
ಇದನ್ನೂ ಓದಿ: ಹೊರಗುತ್ತಿಗೆ ನೇಮಕಾತಿಯಲ್ಲೂ ಮೀಸಲಾತಿ: ರಾಜ್ಯ ಸರ್ಕಾರದಿಂದ ಗೆಜೆಟ್ ಅಧಿಸೂಚನೆ ಪ್ರಕಟ

ವಿದ್ಯಾರ್ಥಿಗಳು ಚಿಕ್ಕವಯಸ್ಸಿನಲ್ಲಿಯೇ ಇಚ್ಛಾಶಕ್ತಿಯನ್ನೂ, ಕರ್ತೃತ್ವಶಕ್ತಿಯನ್ನೂ ರೂಢಿಸಿಕೊಳ್ಳಬೇಕು. ಕೇವಲ ಪ್ರಬಲ ಇಚ್ಛೆ ಮಾತ್ರ ಇದ್ದರೆ ಸಾಲದು, ಬದಲಿಗೆ ಅದನ್ನು ಸಾಧಿಸಲು ಬೇಕಿರುವ ಜ್ಞಾನಶಕ್ತಿಯೂ, ಕ್ರಿಯಾಶಕ್ತಿಯೂ ಬೇಕಾಗುತ್ತದೆ. ಹಾಗಾಗಿ ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಕ್ರಿಯಾಶೀಲರಾಗಬೇಕು ಎಂದು ಆಶೀರ್ವಚನ ನೀಡಿದರು.

ಪರಿಸರದ ಮೂವತ್ತಮೂರನೆಯ ವಾರ್ಷಿಕೋತ್ಸವದ ಮುಖ್ಯ ಅಭ್ಯಾಗತರಾಗಿ ಆಗಮಿಸಿದ್ದ ಎನ್.ಐ.ಓ.ಎಸ್ ನ ಮಾಜಿ ಅಧ್ಯಕ್ಷರಾದ ಪ್ರೊ. ಚಂದ್ರಭೂಷಣ ಶರ್ಮಾ ಅವರು ಮಾತನಾಡಿ, ಸನಾತನ ಧರ್ಮದ ಉಳಿವಿಗೆ ಶಂಕರಾಚಾರ್ಯರ ಕೊಡುಗೆ ಅನನ್ಯ. ಸಂಸ್ಕೃತವಿಲ್ಲದೇ ಸನಾತನ ಧರ್ಮವಿಲ್ಲ. ಹಾಗಾಗಿ ಸಂಸ್ಕೃತವನ್ನು ಪ್ರಾಥಮಿಕ ಶಿಕ್ಷಣದ ಸ್ತರದಲ್ಲಿ ತರುವಲ್ಲಿ ತನ್ನಿಂದಾದ ಎಲ್ಲ ಕಾರ್ಯಗಳನ್ನೂ ತನ್ನ ಕಾರ್ಯಾವಧಿಯಲ್ಲಿ ಮಾಡಿದ್ದೇನೆ. ಶೃಂಗೇರಿಯ ಸಂಸ್ಕೃತ ಪರಿಸರದಲ್ಲಿ ಓದುತ್ತಿರುವ ಎಲ್ಲ ವಿದ್ಯಾರ್ಥಿಗಳೂ ಭಾಗ್ಯವಂತರು ಎಂದು ಅವರು ಬಣ್ಣಿಸಿದರು.
ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆ 2000 ಬಗ್ಗೆ ರಾಜ್ಯ ಸರ್ಕಾರದಿಂದ ಮಹತ್ವದ ಪ್ರಕಟಣೆ!; ಏನದು? ಇಲ್ಲಿದೆ ನೋಡಿ
ಕಾರ್ಯಕ್ರಮದ ಇನ್ನೊಬ್ಬ ಅತಿಥಿಗಳಾಗಿದ್ದ ಪುಣೆಯ ವೈದಿಕ ಸಂಶೋಧನ ಮಂಡಳಿಯ ನಿರ್ದೇಶಕರಾದ ಪ್ರೊ. ಸುಬ್ರಹ್ಮಣ್ಯ ವಿರಿವೆಂಟಿಯವರು ಮಾತನಾಡಿ, ಸಂಸ್ಕೃತವು ಅತ್ಯಂತ ವಿಶಿಷ್ಟವಾದ ಭಾಷೆಯಾಗಿದ್ದು, ಶಂಕರಾಚಾರ್ಯರಂಥವರು ತಮ್ಮ ಕೃತಿಗಳ ಮೂಲಕ ಈ ಭಾಷೆಯ ವೈಶಿಷ್ಟ್ಯವನ್ನು ಜಗತ್ತಿಗೆ ತೆರೆದಿರಿಸಿದ್ದಾರೆ. ಇಂಥ ಅಮೃತಭಾಷೆಯನ್ನು ನಾವೆಲ್ಲರೂ ಸಮಾಜದಲ್ಲಿ ಪ್ರಸಾರಿಸುವ ಪಣ ತೊಡಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ಕೊಟ್ಟರು.

ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಶ್ರೀನಿವಾಸ ವರಖೇಡಿಯವರು ತಮ್ಮ ಸಂದೇಶದಲ್ಲಿ, ಮುಂದಿನ ವರ್ಷದಿಂದಲೇ ಶ್ರೀಭಾರತೀತೀರ್ಥ ಶಾಸ್ತ್ರಾನುಸಂಧಾನ ಕೇಂದ್ರವನ್ನಾಗಿ ಪರಿಸರವನ್ನು ಪರಿವರ್ತಿಸಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ: ದ್ವಿತೀಯ PU ಫಲಿತಾಂಶದಲ್ಲಿ ನಿಮ್ಮ ಜಿಲ್ಲೆಗೆ ಯಾವ ಸ್ಥಾನ?
ಇದೇ ಸಂದರ್ಭದಲ್ಲಿ ಪರಿಸರದ ವಾರ್ಷಿಕ ಪತ್ರಿಕೆಯಾದ ‘ಭಾರತೀ’ಯನ್ನು ಜಗದ್ಗುರುಗಳು ಹಾಗೂ ಗಣ್ಯರು ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿದ ವಿಧಾರ್ಥಿಗಳಿಗೆ ಹಾಗೂ ವಿವಿಧ ಸಾಧನೆಗೈದ ವಿದ್ಯಾರ್ಥಿಗಳಿಗೆ ಪದಕಗಳನ್ನು ವಿತರಿಸಲಾಯಿತು.













