ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಶೃಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಮೆಡಿಕಲ್ ಶಾಪ್ ಕಳ್ಳತನ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಅಂತರ್ ಜಿಲ್ಲಾ ಕಳ್ಳನನ್ನು ಬಂಧಿಸಿ ₹1.12 ಲಕ್ಷ ನಗದನ್ನು ವಶಪಡಿಸಿಕೊಂಡಿದ್ದಾರೆ.
ಕಳೆದ ಎರಡು ವಾರದ ಹಿಂದೆ ಶೃಂಗೇರಿಯ ಭಗವಾನ್ ಮೆಡಿಕಲ್ ಶಾಪ್ ಒಂದರ ಬೀಗ ಒಡೆದು, ಅಂಗಡಿಯಲ್ಲಿದ್ದ ₹2.66 ಲಕ್ಷ ನಗದನ್ನು ಕಳ್ಳತನ ಮಾಡಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಶೃಂಗೇರಿ ಪೊಲೀಸರು ವಿಶೇಷ ತನಿಖಾ ತಂಡ ರಚಿಸಿ ಕಾರ್ಯಾಚರಣೆ ನಡೆಸಿದ್ದರು.


ಜಿಲ್ಲಾ ಪೊಲೀಸ್ ಅಧೀಕ್ಷಕ ಜೀತೇಂದ್ರ ಕುಮಾರ್ ದಾಯಾ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಯಕುಮಾರ್ ಸಿ.ಟಿ. ಹಾಗೂ ಕೊಪ್ಪ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಬಾಲಾಜಿ ಸಿಂಗ್ ಅವರ ಮಾರ್ಗದರ್ಶನದಲ್ಲಿ, ಶೃಂಗೇರಿ ಪೊಲೀಸ್ ಠಾಣೆಯ ಪ್ರಭಾರ ಪೊಲೀಸ್ ನಿರೀಕ್ಷಕ ಭರತ್ ಕುಮಾರ್ ಡಿ.ಆರ್. ನೇತೃತ್ವದಲ್ಲಿ ಶೃಂಗೇರಿ ಪೊಲೀಸ್ ಠಾಣೆಯ ಪಿಎಸ್ಐ ಅಭಿಷೇಕ್ ಕೆ., ಪಿಎಸ್ಐ ನಾಗರಾಜ್ ಬಿ.ಆರ್., ಹೆಡ್ ಕಾನ್ಸ್ಟೇಬಲ್ ರಜಿತ್ ಹಾಗೂ ಸಿಬ್ಬಂದಿ ಪರಮೇಶ್, ಮದನ್ ಮತ್ತು ಚಾಲಕ ಗೋಪಾಲ್ ರೆಡ್ಡಿ ವಿಶೇಷ ತಂಡವನ್ನು ರಚಿಸಿ ಪ್ರಸ್ತುತ ಚಿಕ್ಕಮಗಳೂರು ನಗರದ ವಿಜಯಪುರದಲ್ಲಿರುವ ಫಯಾಜ್ ಹೌಸ್ನಲ್ಲಿ ವಾಸವಾಗಿದ್ದು, ಮೂಲತಃ ಉಡುಪಿ ಜಿಲ್ಲೆಯ ಬೈಂದೂರು ತಾಲ್ಲೂಕಿನ ಯಡ್ತಾರೆ ಗ್ರಾಮದ ಯೋಜನಾ ನಗರದ ನಿವಾಸಿ ಆರ್ಶಿತ್ ಅವಿನಾಶ್ ದೋಂಡ್ರೆ (25) ಎಂಬಾತನನ್ನು ಬಂಧಿಸಲಾಗಿದೆ.
ಬಂಧಿತನಿಂದ ₹1.12 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ, ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟಣದ ಲೈಫ್ ಕೇರ್ ಮೆಡಿಕಲ್ ಶಾಪ್ನಲ್ಲಿ ಜೂನ್ 15ರಂದು ನಡೆದಿದ್ದ ಕಳ್ಳತನ ಪ್ರಕರಣವನ್ನೂ ತಾನೇ ಎಸಗಿರುವುದಾಗಿ ವಿಚಾರಣೆ ವೇಳೆ ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.












