ಕೊಪ್ಪ–ಶೃಂಗೇರಿಯಲ್ಲಿ ಒಂದು ದಿನ ಮೆಡಿಕಲ್ ಶಾಪ್ ಬಂದ್

ಕೊಪ್ಪ: (ನ್ಯೂಸ್ ಮಲ್ನಾಡ್ ವರದಿ) ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಖಿಲ ಭಾರತ ಔಷಧ ವ್ಯಾಪಾರಿಗಳ ಸಂಘ (AIOCD) ಹಾಗೂ ಕೆ.ಸಿ.ಡಿ.ಎ. ಬೆಂಗಳೂರು ನೀಡಿರುವ ಕರೆ ಮೇರೆಗೆ ದೇಶಾದ್ಯಂತ ಹಮ್ಮಿಕೊಂಡಿರುವ ಒಂದು ದಿನದ ಸಾಂಕೇತಿಕ ಮುಷ್ಕರಕ್ಕೆ ಮಲೆನಾಡು ಔಷಧಿ ವ್ಯಾಪಾರಿಗಳ ಸಂಘ (ಶೃಂಗೇರಿ–ಕೊಪ್ಪ) ಸಂಪೂರ್ಣ ಬೆಂಬಲ ಘೋಷಿಸಿದೆ.

ಈ ಹಿನ್ನೆಲೆಯಲ್ಲಿ ಮೇ 20, 2026ರ ಬುಧವಾರ ಬೆಳಿಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಕೊಪ್ಪ ಹಾಗೂ ಶೃಂಗೇರಿ ತಾಲೂಕಿನಾದ್ಯಂತ ಎಲ್ಲಾ ಔಷಧ ಅಂಗಡಿಗಳನ್ನು (ಮೆಡಿಕಲ್ ಶಾಪ್) ಸಂಪೂರ್ಣ ಬಂದ್ ಮಾಡಲು ಸಂಘವು ಸರ್ವಾನುಮತದ ತೀರ್ಮಾನ ಕೈಗೊಂಡಿದೆ.

ಮುಷ್ಕರದ ಪ್ರಮುಖ ಬೇಡಿಕೆಗಳಲ್ಲಿ ಆನ್‌ಲೈನ್ ಮೂಲಕ ನಡೆಯುತ್ತಿರುವ ಔಷಧ ವ್ಯಾಪಾರವನ್ನು ತಕ್ಷಣವೇ ನಿಲ್ಲಿಸುವುದು, ಸರ್ಕಾರದ ಜಿ.ಎಸ್.ಆರ್. 817 (20-08-2018) ಆದೇಶವನ್ನು ವಾಪಸ್ ಪಡೆಯುವುದು ಸೇರಿವೆ. ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಆನ್‌ಲೈನ್ ಔಷಧ ಮಾರಾಟಕ್ಕೆ ತಡೆ ಅಗತ್ಯವಾಗಿದೆ ಎಂದು ಸಂಘ ಅಭಿಪ್ರಾಯಪಟ್ಟಿದೆ.

ಇದಲ್ಲದೆ, ಕಾರ್ಪೊರೇಟ್ ಕಂಪನಿಗಳಿಂದ ಕಾನೂನುಬಾಹಿರವಾಗಿ ನಡೆಯುತ್ತಿರುವ ರಿಯಾಯಿತಿ ವ್ಯಾಪಾರಕ್ಕೆ ಕಡಿವಾಣ ಹಾಕಬೇಕು. ಸಣ್ಣ ಮತ್ತು ಸಾಂಪ್ರದಾಯಿಕ ಔಷಧ ವ್ಯಾಪಾರಿಗಳಿಗೆ ಸಮಾನ ಅವಕಾಶ ಕಲ್ಪಿಸುವ ಆರೋಗ್ಯಕರ ವ್ಯಾಪಾರ ವಾತಾವರಣ ನಿರ್ಮಿಸಬೇಕೆಂದು ಸಂಘ ಆಗ್ರಹಿಸಿದೆ.

ನಕಲಿ ಔಷಧಿಗಳ ಮಾರಾಟವನ್ನು ಕಡ್ಡಾಯವಾಗಿ ನಿಲ್ಲಿಸಬೇಕು. ಸಾರ್ವಜನಿಕರ ಆರೋಗ್ಯಕ್ಕೆ ಹಾನಿಕಾರಕವಾಗಿರುವ ಇಂತಹ ಚಟುವಟಿಕೆಗಳನ್ನು ತಡೆಗಟ್ಟಲು ಸಂಬಂಧಿತ ಜಿ.ಎಸ್.ಆರ್. 220 (20-03-2020) ಆದೇಶವನ್ನು ವಾಪಸ್ ಪಡೆದು ಸರಳ ಕಾನೂನುಗಳ ಮೂಲಕ ಪ್ರಾಮಾಣಿಕ ವ್ಯಾಪಾರಿಗಳಿಗೆ ಸಹಕಾರ ನೀಡಬೇಕೆಂದು ಸಂಘ ಒತ್ತಾಯಿಸಿದೆ.

ಮುಷ್ಕರದ ದಿನ ಸಾರ್ವಜನಿಕರು ಹಾಗೂ ರೋಗಿಗಳಿಗೆ ಆಗುವ ಅನಾನುಕೂಲತೆಗಾಗಿ ವಿಷಾದ ವ್ಯಕ್ತಪಡಿಸಿರುವ ಸಂಘ, ಅಗತ್ಯ ಔಷಧಿಗಳನ್ನು ಸಾರ್ವಜನಿಕರು ಮುಂಚಿತವಾಗಿ ಖರೀದಿಸಿ ಇಟ್ಟುಕೊಳ್ಳುವಂತೆ ಮನವಿ ಮಾಡಿದೆ. ದೇಶದ ಲಕ್ಷಾಂತರ ಔಷಧ ವ್ಯಾಪಾರಿಗಳ ಉಳಿವಿಗಾಗಿ ಹಮ್ಮಿಕೊಂಡಿರುವ ಈ ನ್ಯಾಯಸಮ್ಮತ ಹೋರಾಟಕ್ಕೆ ಸಾರ್ವಜನಿಕರು, ರೋಗಿಗಳು ಹಾಗೂ ಗ್ರಾಹಕರು ಸಹಕರಿಸಬೇಕೆಂದು ಮಲೆನಾಡು ಔಷಧಿ ವ್ಯಾಪಾರಿಗಳ ಸಂಘದ ಪದಾಧಿಕಾರಿಗಳು ಪ್ರಕಟಣೆಯಲ್ಲಿ ಕೋರಿದ್ದಾರೆ.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.