
ಕೊಪ್ಪದಲ್ಲಿ ಅಕ್ರಮವಾಗಿ ದನದ ಮಾಂಸ ಸಾಗಾಟ ಆರೋಪ:
ಕೊಪ್ಪ ಪಟ್ಟಣದ ಟೋಲ್ ಗೇಟ್ ಬಳಿ ರಾತ್ರಿ ವಾಹನ ತಪಾಸಣೆ ನಡೆಸುತ್ತಿದ್ದ ಪೊಲೀಸರಿಗೆ ಕಾರಿನಲ್ಲಿ ಸುಮಾರು 12 ಕೆ.ಜಿ ದನದ ಮಾಂಸ ಪತ್ತೆಯಾಗಿದ್ದು, ಕಾರು ಸೇರಿದಂತೆ ಮಾಂಸವನ್ನು ವಶಕ್ಕೆ ಪಡೆದು ಚಾಲಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ನವೆಂಬರ್ 22ರ ರಾತ್ರಿ ಸುಮಾರು 11.45ರ ವೇಳೆಗೆ ಕೊಪ್ಪ ಪಟ್ಟಣದ ಮೇಲಿನಪೇಟೆ ಸಮೀಪದ ವೆಲ್‌ಕಂ ಗೇಟ್ ಬಳಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಹರಿಹರಪುರ ಕಡೆಯಿಂದ ಬಂದ ಮಾರುತಿ ಆಲ್ಟೋ ಕಾರನ್ನು ತಡೆದು ಪರಿಶೀಲಿಸಿದ್ದಾರೆ. ಈ ವೇಳೆ ಕಾರಿನ ಹಿಂಬದಿ ಸೀಟಿನಲ್ಲಿ ಆರು ಬಿಳಿ ಪ್ಲಾಸ್ಟಿಕ್ ಕವರ್‌ಗಳಲ್ಲಿ ತುಂಬಿದ್ದ ಅಂದಾಜು 12 ಕೆ.ಜಿ ಮಾಂಸ ಪತ್ತೆಯಾಗಿದೆ. ಕಾರು ಚಾಲಕನನ್ನು ವಿಚಾರಿಸಿದಾಗ, ತಾನು ಕಾಳನಾಯ್ಕನಕಟ್ಟೆಯಿಂದ ಮಾಂಸ ತಂದಿರುವುದಾಗಿ ಹಾಗೂ ಪರಿಚಯಸ್ಥರಿಗೆ ವ್ಯಾಪಾರ ಮಾಡುವ ಉದ್ದೇಶದಿಂದ ಸಾಗಿಸುತ್ತಿರುವುದಾಗಿ ತಿಳಿಸಿದ್ದಾನೆ ಎನ್ನಲಾಗಿದೆ.
ಮಾಂಸ ಸಾಗಾಟ ಹಾಗೂ ವ್ಯಾಪಾರಕ್ಕೆ ಸಂಬಂಧಿಸಿದಂತೆ ಯಾವುದೇ ಪರವಾನಗಿ ಇಲ್ಲದಿರುವುದಾಗಿ ಚಾಲಕ ತಿಳಿಸಿದ್ದಾನೆ ಎಂದು ಪೊಲೀಸ್ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಸಂಬಂಧ ಮೇಲಿನಪೇಟೆ ನಿವಾಸಿ ಶಬ್ಬೀರ್ ಅಹಮ್ಮದ್ ಕೆ.ಎಂ. (51) (ಲಿಭಾಸ್ ಟೈಲರ್ )ಎಂಬಾತನ ವಿರುದ್ಧ ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಮಾರುತಿ ಆಲ್ಟೋ ಕಾರು ಹಾಗೂ ಅಂದಾಜು 12 ಕೆ.ಜಿ ಮಾಂಸವನ್ನು ವಶಕ್ಕೆ ಪಡೆದು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

ಕೊಟ್ಟಿಗೆಗೆ ನುಗ್ಗಿ ಹೋರಿಯನ್ನೇ ಕದ್ದೊಯ್ದ ಕಳ್ಳರು:
ನರಸಿಂಹರಾಜಪುರ: ತಾಲೂಕಿನ ಕರ್ಕೇಶ್ವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಣಸೇಕೊಪ್ಪ ಗ್ರಾಮದಲ್ಲಿ ಗೋ ಕಳ್ಳರು ತಮ್ಮ ಕೈಚಳಕ ತೋರಿಸಿದ್ದು, ತಡರಾತ್ರಿ ಕೊಟ್ಟಿಗೆಗೆ ನುಗ್ಗಿದ ಮೂವರು ಅಪರಿಚಿತ ವ್ಯಕ್ತಿಗಳು ಕಟ್ಟಿಹಾಕಿದ್ದ ಹೋರಿಯನ್ನೇ ಕಾರಿನಲ್ಲಿ ತುಂಬಿಕೊಂಡು ಕಳ್ಳತನ ಮಾಡಿರುವ ಘಟನೆ ನಡೆದಿದೆ.
ನವೆಂಬರ್ 19ರ ರಾತ್ರಿ ಸುಮಾರು 12 ಗಂಟೆಯ ವೇಳೆಗೆ ಈ ಘಟನೆ ನಡೆದಿದ್ದು, ಮೂವರು ಗೋ ಕಳ್ಳರು ಕೊಟ್ಟಿಗೆಗೆ ನುಗ್ಗಿ ಅಲ್ಲಿ ಕಟ್ಟಿಹಾಕಿದ್ದ ಹೋರಿಯನ್ನು ಕಾರಿನಲ್ಲಿ ತುಂಬಿಕೊಂಡು ಪರಾರಿಯಾಗಿದ್ದಾರೆ. ಈ ಸಂಬಂಧ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇನ್ನು ಇದೇ ಭಾಗದಲ್ಲಿ ಕೇವಲ ಹದಿನೈದು ದಿನಗಳ ಹಿಂದೆಯೂ ಹಸುವೊಂದನ್ನು ಕಳ್ಳತನ ಮಾಡಲಾಗಿದೆ ಎನ್ನಲಾಗಿದ್ದು, ಇದೀಗ ಮನೆಯ ಕೊಟ್ಟಿಗೆಯಲ್ಲೇ ಕಟ್ಟಿದ್ದ ಹೋರಿಯನ್ನು ಕದ್ದೊಯ್ದಿರುವುದು ಗ್ರಾಮಸ್ಥರು ಹಾಗೂ ಗೋವು ಸಾಕುವವರಲ್ಲಿ ಆತಂಕ ಮೂಡಿಸಿದೆ.
ಈ ಹಿಂದೆ ರಸ್ತೆ ಬದಿಯಲ್ಲಿದ್ದ ಜಾನುವಾರುಗಳನ್ನು ಕಳ್ಳತನ ಮಾಡುತ್ತಿದ್ದ ಕಳ್ಳರು, ಇದೀಗ ಮನೆಗಳ ಕೊಟ್ಟಿಗೆಗಳನ್ನೇ ಗುರಿಯಾಗಿಸಿಕೊಂಡಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಜಾನುವಾರುಗಳನ್ನು ಸಾಕುವ ರೈತರು ತಮ್ಮ ಜಾನುವಾರುಗಳ ರಕ್ಷಣೆಯ ಬಗ್ಗೆ ಚಿಂತಿಸುವಂತಾಗಿದೆ. ಕಳ್ಳತನವಾಗಿರುವ ಹೋರಿಯನ್ನು ಪತ್ತೆಹಚ್ಚಿ ಮರಳಿ ದೊರಕಿಸಿಕೊಡಬೇಕು. ಕೃತ್ಯ ಎಸಗಿರುವ ಅಪರಿಚಿತ ವ್ಯಕ್ತಿಗಳನ್ನು ಶೀಘ್ರವಾಗಿ ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರುದಾರರು ಪೊಲೀಸರನ್ನು ಒತ್ತಾಯಿಸಿದ್ದಾರೆ. ಈ ಸಂಬಂಧ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಪ್ರಕರಣದ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ.
ಅಧಿಕಾರಿಗಳ ಮೌನಕ್ಕೆ ಹಿಂದೂ ಕಾರ್ಯಕರ್ತರ ಆಕ್ರೋಶ:
ಇತ್ತೀಚಿನ ದಿನಗಳಲ್ಲಿ ತಾಲೂಕು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗೋವು ಕಳ್ಳತನ ಮತ್ತು ಗೋಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಪದೇಪದೇ ಇಂತಹ ಘಟನೆಗಳು ನಡೆಯುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಕಳ್ಳರನ್ನು ಪತ್ತೆಹಚ್ಚಿ ಕಠಿಣ ಕ್ರಮ ಕೈಗೊಳ್ಳುವಲ್ಲಿ ನಿರ್ಲಕ್ಷ್ಯ ವಹಿಸುತ್ತಿರುವುದೇಕೆ ಎಂದು ಹಿಂದೂ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗೋವು ಸಾಕುವ ರೈತರು ಹಾಗೂ ಸಾರ್ವಜನಿಕರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು, ರಾತ್ರಿ ವೇಳೆ ಜಾನುವಾರುಗಳ ರಕ್ಷಣೆಯೇ ದೊಡ್ಡ ಸವಾಲಾಗಿದೆ. ಕೂಡಲೇ ಪೊಲೀಸ್ ಇಲಾಖೆ ವಿಶೇಷ ತಂಡ ರಚಿಸಿ ಗೋ ಕಳ್ಳತನ ಜಾಲವನ್ನು ಪತ್ತೆಹಚ್ಚಬೇಕು, ಕೃತ್ಯದಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಗ್ರಾಮೀಣ ಭಾಗಗಳಲ್ಲಿ ರಾತ್ರಿ ಗಸ್ತು ಹೆಚ್ಚಿಸಬೇಕು ಎಂದು ಹಿಂದೂ ಕಾರ್ಯಕರ್ತರು ಆಗ್ರಹಿಸಿದ್ದಾರೆ.













