
ಕೊಟ್ಟಿಗೆಹಾರ: (ನ್ಯೂಸ್ ಮಲ್ನಾಡ್ ವರದಿ) ಲೋಕಕಲ್ಯಾಣ, ನಾಡಿನ ಸುಭಿಕ್ಷೆ ಹಾಗೂ ಸರ್ವರ ಒಳಿತಿಗಾಗಿ ಧಾರ್ಮಿಕ ಸಂಕಲ್ಪದೊಂದಿಗೆ ಬೆಂಗಳೂರಿನ ಕಬ್ಬಳಮ್ಮ ಪಾದಯಾತ್ರೆ ಸಮಿತಿಯ 15 ಮಂದಿ ಭಕ್ತರು ಕೊಟ್ಟಿಗೆಹಾರದಿಂದ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಪಾದಯಾತ್ರೆ ಕೈಗೊಂಡರು.
ಕಾರ್ತಿಕ ಮಾಸದ ಸೋಮವಾರದ ಪ್ರಯುಕ್ತ ಸೋಮವಾರ ಮುಂಜಾನೆ ಕೊಟ್ಟಿಗೆಹಾರದಿಂದ ಪಾದಯಾತ್ರೆ ಆರಂಭಿಸಿದ ಭಕ್ತರ ತಂಡ, ಧರ್ಮಸ್ಥಳದ ಮಂಜುನಾಥ ಸ್ವಾಮಿಯ ದರ್ಶನ ಪಡೆಯುವ ಉದ್ದೇಶದಿಂದ ಭಕ್ತಿಭಾವದಿಂದ ಹೆಜ್ಜೆ ಹಾಕಿತು. ಸಂಜೆ ವೇಳೆಗೆ ಧರ್ಮಸ್ಥಳ ತಲುಪುವ ಗುರಿಯೊಂದಿಗೆ ಪಾದಯಾತ್ರೆ ಮುಂದುವರಿಸಿದರು.
ಬೆಂಗಳೂರಿನ ಮೂಲದ ಶೂಲಿನ್ ಹಿಲ್ ವ್ಯೂ ಹೇಮಂತ್, ಅನಿಲ್, ಗಿರೀಶ್, ಕೆಂಪರಾಜು ಸೇರಿದಂತೆ ಒಟ್ಟು 15 ಮಂದಿ ಈ ಧಾರ್ಮಿಕ ನಡಿಗೆಯಲ್ಲಿ ಪಾಲ್ಗೊಂಡಿದ್ದರು. ಕಬ್ಬಳಮ್ಮ ಪಾದಯಾತ್ರೆ ಸಮಿತಿಯಿಂದ ಆಯೋಜಿಸಲಾಗುತ್ತಿರುವ ಈ ಪಾದಯಾತ್ರೆ ಸತತ ಎರಡನೇ ವರ್ಷಕ್ಕೆ ಕಾಲಿಟ್ಟಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಹೇಮಂತ್, “ಲೋಕಕಲ್ಯಾಣ, ನಾಡಿನ ಸುಭಿಕ್ಷೆ ಹಾಗೂ ಸರ್ವರ ಒಳಿತಿಗಾಗಿ ಧರ್ಮಸ್ಥಳದ ಮಂಜುನಾಥ ಸ್ವಾಮಿಯ ದರ್ಶನ ಪಡೆಯುವ ಸಂಕಲ್ಪದೊಂದಿಗೆ ಪಾದಯಾತ್ರೆ ಹಮ್ಮಿಕೊಂಡಿದ್ದೇವೆ. ಎರಡನೇ ವರ್ಷವೂ ಭಕ್ತರೆಲ್ಲರೂ ಒಗ್ಗಟ್ಟಿನಿಂದ ಈ ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಂಡಿರುವುದು ಸಂತಸ ತಂದಿದೆ. ದೇವರ ಆಶೀರ್ವಾದದಿಂದ ನಾಡಿನ ಜನತೆಗೆ ಸುಖ, ಶಾಂತಿ, ನೆಮ್ಮದಿ ಹಾಗೂ ಸಮೃದ್ಧಿ ದೊರೆಯಲಿ ಎಂಬುದು ನಮ್ಮ ಪ್ರಾರ್ಥನೆ” ಎಂದರು.
ಧಾರ್ಮಿಕ ನಂಬಿಕೆ, ಭಕ್ತಿ ಮತ್ತು ಸಾಮೂಹಿಕ ಸಂಕಲ್ಪದೊಂದಿಗೆ ಸಾಗಿದ ಈ ಪಾದಯಾತ್ರೆ ಭಕ್ತರ ಶ್ರದ್ಧೆ ಹಾಗೂ ಒಗ್ಗಟ್ಟಿಗೆ ಸಾಕ್ಷಿಯಾಯಿತು. (ವರದಿ: ತನು ಕೊಟ್ಟಿಗೆಹಾರ)













