
ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ. ರಾಜೇಗೌಡ ಅವರ ರಾಜೀನಾಮೆ ವಿಚಾರವಾಗಿ ಮಾಜಿ ಶಾಸಕ ಜೀವರಾಜ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ರಾಜೇಗೌಡರು ರಾಜೀನಾಮೆ ನೀಡುವ ನಾಟಕ ಮಾಡುವುದನ್ನು ಬಿಟ್ಟು ಕ್ಷೇತ್ರದ ಜನರ ರಕ್ಷಣೆಗೆ ಮುಂದಾಗಬೇಕು ಎಂದು ಅವರು ಕಿಡಿಕಾರಿದ್ದಾರೆ.
ರಾಜೇಗೌಡರಿಗೆ ನಿಜವಾಗಿಯೂ ರಾಜೀನಾಮೆ ನೀಡುವ ಮನಸ್ಸಿಲ್ಲ. ಜನರ ಸಿಂಪತಿ ಗಿಟ್ಟಿಸಿಕೊಳ್ಳಲು ರಾಜಕೀಯ ನಾಟಕ ಮಾಡುವ ಬದಲು ಕ್ಷೇತ್ರದ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಮಲೆನಾಡಿನ ಜನರು ಹಾಗೂ ರೈತರ ಬದುಕಿನ ರಕ್ಷಣೆಗೆ ಏನು ಮಾಡಬೇಕೋ ಅದನ್ನು ಮಾಡಲಿ ಎಂದು ಜೀವರಾಜ್ ಸವಾಲು ಹಾಕಿದ್ದಾರೆ.
ಇನ್ನು ಸುಳ್ಳು ಭರವಸೆಗಳನ್ನು ನೀಡುವುದನ್ನು ಶಾಸಕರು ನಿಲ್ಲಿಸಬೇಕು. ನಿಮ್ಮದೇ ಸರ್ಕಾರ, ನಿಮ್ಮದೇ ಸಚಿವರಿದ್ದರೂ ನಿಮ್ಮ ಮಾತಿಗೆ ಬೆಲೆ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಎಚ್ಚರಿಕೆ ನೀಡುವುದನ್ನು ಬಿಟ್ಟು ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ. ನಮಗೆ ನಿಮ್ಮ ರಾಜೀನಾಮೆಯ ಅಗತ್ಯವಿಲ್ಲ, ಮಲೆನಾಡಿಗರ ಬದುಕಿನ ರಕ್ಷಣೆಯೇ ಮುಖ್ಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಶಾಸಕರು ಈ ಹಿಂದೆ ಹಲವು ಬಾರಿ ರಾಜೀನಾಮೆ ನೀಡುವ ಮಾತುಗಳನ್ನಾಡಿರುವುದನ್ನು ನೋಡಿದ್ದೇವೆ. ಇವೆಲ್ಲವೂ ಜನರ ಸಿಂಪತಿ ಪಡೆಯುವ ರಾಜಕೀಯ ತಂತ್ರಗಳೇ ಹೊರತು ಜನರ ಸಮಸ್ಯೆಗಳನ್ನು ಬಗೆಹರಿಸುವ ಪ್ರಯತ್ನಗಳಲ್ಲ ಎಂದು ಜೀವರಾಜ್ ಟೀಕಿಸಿದ್ದಾರೆ.
ಅಂತಿಮವಾಗಿ, ರಾಜೀನಾಮೆ ವಿಚಾರದಲ್ಲಿ ರಾಜಕೀಯ ಮಾಡುವುದನ್ನು ಬಿಟ್ಟು ರೈತರ ಪರವಾಗಿ ನಿಂತು ಕೆಲಸ ಮಾಡಿ. ಮಲೆನಾಡಿನ ಜನರ ಹಿತಾಸಕ್ತಿಯನ್ನು ಕಾಪಾಡಿ ಎಂದು ಶಾಸಕ ಟಿ.ಡಿ. ರಾಜೇಗೌಡ ಅವರಿಗೆ ಜೀವರಾಜ್ ಆಗ್ರಹಿಸಿದ್ದಾರೆ. (ವರದಿ- ಶಶಿ ಬೆತ್ತದಕೊಳಲು)













